ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಪ್ರಸ್ತಾವಿತ ತಿದ್ದುಪಡಿಯು ಸಂವಿಧಾನದ ಅಶಯಕ್ಕೆ ಹಾಗೂ ಹಿಂದೂ ಸಮಾಜದ ಹಿತಾಸಕ್ತಿಗೆ ವಿರೋಧಿಯಾಗಿದೆ.

ಕನಕಗಿರಿ: ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಪ್ರಸ್ತಾವಿತ ತಿದ್ದುಪಡಿ ಸುವರ್ಣ ಸೌಧದಲ್ಲಿ ಮಂಡಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನೀತಿ ಖಂಡಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಬುಧವಾರ ತಹಸೀಲ್ದಾರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಅಯ್ಯನಗೌಡ ಅಳ್ಳಳ್ಳಿ ಮಾತನಾಡಿ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಪ್ರಸ್ತಾವಿತ ತಿದ್ದುಪಡಿಯು ಸಂವಿಧಾನದ ಅಶಯಕ್ಕೆ ಹಾಗೂ ಹಿಂದೂ ಸಮಾಜದ ಹಿತಾಸಕ್ತಿಗೆ ವಿರೋಧಿಯಾಗಿದೆ. ಕರ್ನಾಟಕ ಸರ್ಕಾರ ತನ್ನ ಕ್ಯಾಬಿನೆಟ್ ಸಭೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಸೆಕ್ಷನ್ 8(4)ಕ್ಕೆ ತಿದ್ದುಪಡಿ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಂಡಿದೆ. ಈ ಕಾಯಿದೆಯ ತಿದ್ದುಪಡಿ ಮಾಡುವುದನ್ನು ತಕ್ಷಣ ಕೈಬಿಡಬೇಕು. ಜಾನುವಾರು ರಕ್ಷಣೆ ಮಾಡುವುದು ನಮ್ಮೆಲ್ಲರ ಧ್ಯೇಯವಾಗಿದೆ. ಈಗಾಗಲೇ ಜಾನುವಾರುಗಳ ಸಂತತಿ ಕ್ಷೀಣಿಸಿದೆ. ಇಂತಹ ಸಂಗತಿಗಳ ನಡುವೆಯೂ ಜಾನುವಾರು ಸಂರಕ್ಷಣೆಯ ಕಾಯಿದೆಯಲ್ಲಿ ತಿದ್ದುಪಡಿ ತರುವುದು ನ್ಯಾಯವಲ್ಲ. ಈ ಕಾಯಿದೆಯ ಜಾರಿಯಿಂದ ಜಾನುವಾರುಗಳನ್ನು ಕಟಕರು ಕ್ರೂರವಾಗಿ ತಿನ್ನುವುದು ಹೆಚ್ಚಾಗಲಿದೆ. ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಎಚ್ಚೆತ್ತುಕೊಂಡು ಜಾನುವಾರು ಸಂರಕ್ಷಣಾ ಕಾಯಿದೆಗೆ ತಿದ್ದುಪಡಿ ತರಬಾರದು. ಒಂದು ವೇಳೆ ತಂದರೆ ಮುಂದಿನ ದಿನಗಳಲ್ಲಿ ಆಪತ್ತು ಎದುರಾಗಲಿದೆ ಎಂದರು.

ಶಿರಸ್ತೇದಾರ ಅನಿತಾ ಇಂಡಿ ಮನವಿ ಸ್ವೀಕರಿಸಿದರು. ಜಾಗರಣ ವೇದಿಕೆಯ ಬಸವರಾಜ ನಾಯಕ, ಅಮರೇಶ, ಲಕ್ಷ್ಮಣ ಚಿಟಗಿ, ಸಂಪತಕುಮಾರ ಇತರರಿದ್ದರು.