ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಪದಾಧಿಕಾರಿಗಳ ನೇಮಕದ ಬಗ್ಗೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಸಭೆ ನಡೆಯಿತು. ಪರಸ್ಪರ ವಾಗ್ವಾದ, ಆಕ್ಷೇಪ, ಟೀಕೆಗಳು ಜೋರಾದ ಹಿನ್ನೆಲೆ ಸಭೆ ಗೊಂದಲದ ಗೂಡಾಯಿತು.ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಅರುಣಕುಮಾರ ಪೂಜಾರ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ನಂತರ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೂ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಪದಾಧಿಕಾರಿಗಳ ಪಟ್ಟಿ ಬಗ್ಗೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಕೇಳಿ ಬರುತ್ತಿದೆ.
ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಜಾತಿ ಮತ್ತು ಹಣದ ಆಧಾರದ ಮೇಲೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮಣೆ ಹಾಕಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.2023ನೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರಿಗೆ ಬಿ ಫಾರ್ಮ್ಅನ್ನು ಕೆಪಿಸಿಸಿ ಅಧ್ಯಕ್ಷರಿಂದ ಪಡೆದಿದ್ದ ವ್ಯಕ್ತಿಗೆ ಈಗ ಜಿಲ್ಲೆಯ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಇವರನ್ನು ಯಾವ ಸಿದ್ಧಾಂತದ ಆಧಾರದ ಮೇಲೆ ಆಯ್ಕೆ ಮಾಡಿದ್ದಾರೆ ಎಂದು ಬಿಜೆಪಿಯ ನಗರ ಘಟಕದ ಮಾಜಿ ಅಧ್ಯಕ್ಷ ನಿರಂಜನ ಹೇರೂರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಾವೇರಿ ಗ್ರಾಮಾಂತರ ತಾಲೂಕು ಅಧ್ಯಕ್ಷರಾಗಿ ಈಗ ನೇಮಕಗೊಂಡಿರುವ ವ್ಯಕ್ತಿ ಹಾವೇರಿಯಲ್ಲಿಯೇ ಉಳಿದುಕೊಂಡಿದ್ದಾರೆ, ಆದರೆ ನಗರದಲ್ಲಿಯೇ ಇದ್ದುಕೊಂಡು ಗ್ರಾಮೀಣ ಘಟಕವನ್ನು ಹೇಗೆ ಬಲಪಡಿಸುತ್ತಾರೆ. ಹಾವೇರಿ ನಗರ ಘಟಕದ ಅಧ್ಯಕ್ಷರ ಅವಧಿ ಮುಗಿದಿದ್ದರೂ, ಅವರನ್ನೇ ಮುಂದುವರಿಸಿರುವುದು ಏಕೆ? ಬೇರೆಯವರಿಗೆ ಅವಕಾಶ ಕಲ್ಪಿಸಬೇಕಿತ್ತು ಎಂದು ಬಿಜೆಪಿ ಮುಖಂಡರಾದ ಪ್ರವೀಣ್ ಶೆಟ್ಟರ್, ಸತೀಶ ಕ್ಯಾತಣ್ಣನವರ, ಜಗದೀಶ ಅಂಕಲಕೋಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹಲವರು ಆಕಾಂಕ್ಷಿಗಳಿದ್ದರು. ಎಲ್ಲರ ಸಮಕ್ಷಮದಲ್ಲಿ ಸಭೆ ನಡೆಸಿ, ಒಮ್ಮತದಿಂದ ನೇಮಕ ಮಾಡಬೇಕಿತ್ತು. ಆದರೆ, ಏಕಾಏಕಿ ನಿರ್ಧಾರ ಕೈಗೊಂಡು ತಮಗೆ ಬೇಕಾದವರನ್ನು ನೇಮಕ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಎಂದು ಬಿಜೆಪಿ ಮುಖಂಡರಾದ ಚನ್ನಮ್ಮ ಬ್ಯಾಡಗಿ, ರೋಹಿಣಿ ಪಾಟೀಲ ಮುಂತಾದವರು ತಿಳಿಸಿದರು.
ಗೊಂದಲ, ಗುಂಪುಗಾರಿಕೆ ಮಾಡುವ ಅವಶ್ಯಕತೆ ನಮಗೆ ಇಲ್ಲ. ನಾನು ಕೂಡ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇನೆ. ಸೋಲಿಗೆ ನಾನು ಕಾರಣನೇ ಹೊರತು ನಮ್ಮ ಕಾರ್ಯಕರ್ತರಲ್ಲ. ಪಕ್ಷ ಸಂಘಟಿಸಿ, ಮೋದಿಯವರನ್ನು ಪ್ರಧಾನಿ ಮಾಡುವುದು ನಮ್ಮೆಲ್ಲರ ಗುರಿ. ಅಲ್ಲದೇ ಜಿಲ್ಲೆಯಲ್ಲಿ ಪಕ್ಷದ ಪದಾಧಿಕಾರಿಗಳ ನೇಮಕದಲ್ಲಿ ನನ್ನ ಪಾತ್ರವಿಲ್ಲ. ಪಕ್ಷದ ರಾಜ್ಯ ನಾಯಕರ ನಿರ್ದೇಶನದಂತೆ ನಡೆದುಕೊಂಡಿದ್ದೇನೆ. ಕೆಲ ಭಿನ್ನಾಭಿಪ್ರಾಯಗಳಿದ್ದು, ಶೀಘ್ರವೇ ಬಗೆಹರಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ತಿಳಿಸಿದರು.