ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಪದವಿ ಪೂರ್ವ ಕಾಲೇಜು ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ನಿಯೋಜಿಸುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜುಲೈ ಮೊದಲ ವಾರ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಪಿ.ಎಂ.ಜಿ.ರಾಜೇಶ್ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ಪ್ರಾಂಶುಪಾಲರ ಸಂಘ ಹಾಗೂ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
9 ಮತ್ತು 10ನೇ ತರಗತಿಗಳಿಗೆ ಪಾಠ ಬೋಧಿಸಲು ಪದವಿ ಪೂರ್ವ ಉಪನ್ಯಾಸಕರನ್ನು ನಿಯೋಜಿಸುವ ಉದ್ದೇಶದಿಂದ ಸರ್ಕಾರ ಹೊರಡಿಸಿರುವ ಕರ್ನಾಟಕ ಸಾಮಾನ್ಯ ಸೇವೆಗಳು, ನೇಮಕಾತಿ ನಿಯಮ-2026ರ ಈ ಕರಡು ತಿದ್ದುಪಡಿ ಶೈಕ್ಷಣಿಕ ಹಿತದೃಷ್ಟಿಯಿಂದ ಸಮರ್ಥನೀಯವಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ-2020, ರಾಷ್ಟ್ರೀಯ ಶಾಲಾ ಶಿಕ್ಷಣ ಪಠ್ಯಕ್ರಮ ಚೌಕಟ್ಟು-2023ಗಳ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದರು.ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜು ಮಾತನಾಡಿ, ಪಿಯುಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಸಮಯ ಸಾಕಾಗುತ್ತಿಲ್ಲ ಅಂತಹದರಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ಎಂದು ಉಪನ್ಯಾಸಕರಿಗೆ ಹೇಳುವುದು ಸರಿಯಲ್ಲ. ಇದರಿಂದ ಉಪನ್ಯಾಸಕರಿಗೆ ಹಿಂಬಡ್ತಿ ನೀಡಿದಂತೆ ಆಗುತ್ತದೆ ಇದಲ್ಲದೇ 9 ಮತ್ತು 10ನೇ ತರಗತಿಗಳ ಪಠ್ಯಕ್ರಮವೇ ಬೇರೆ. ಪಿಯುಸಿ ಪಠ್ಯಕ್ರಮವೇ ಬೇರೆ. ಇದಲ್ಲದೇ ಇಬ್ಬರಿಗೂ ಬೋಧನೆ ಕ್ರಮ ಬೇರೆ ಬೇರೆಯಾಗಿದೆ. ಇದರಿಂದಾಗಿ ಉಪನ್ಯಾಸಕರು ಒತ್ತಡದಲ್ಲಿ ಕೆಲಸ ಮಾಡುವಂತಹ ಅನಿವಾರ್ಯತೆ ಉಂಟಾಗುತ್ತದೆ. ಇದನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ಪತ್ರ ಚಳುವಳಿಯನ್ನು ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಸರ್ಕಾರ ಪದವಿ ಪೂರ್ವಶಿಕ್ಷಣ ಇಲಾಖೆಯನ್ನು ತೆಗೆಯುವ ಹುನ್ನಾರ ನಡೆಸುತ್ತಿದ್ದು ಅದಕ್ಕೆ ಇದು ಪೀಠಿಕೆಯಾಗಿದೆ. ಈಗಾಗಲೇ ಈ ಇಲಾಖೆಯಿಂದ ಪರೀಕ್ಷಾ ವಿಭಾಗವನ್ನು ತೆಗೆದು ಎಸ್‍ಎಸ್‍ಎಲ್‍ಸಿ ಮಂಡಳಿಗೆ ನೀಡಿದೆ. ಮುಂದಿನ ದಿನಗಳಲ್ಲಿ ನಮ್ಮ ಹುದ್ದೆಗಳಿಗೆ ಕುತ್ತು ಬರುವ ಸಂಭವವಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವಂತಹ ಡಿ ದರ್ಜೆ ಹಾಗೂ ಕ್ಲಾರ್ಕ್ ಹುದ್ದೆಗಳನ್ನು ಭರ್ತಿ ಮಾಡದೆ ಹಲವಾರು ವರ್ಷಗಳಿಂದ ಖಾಲಿ ಬಿಡಲಾಗಿದ್ದು ಈ ಕೆಲಸವನ್ನು ಉಪನ್ಯಾಸಕರೆ ಮಾಡುವ ಅನಿವಾರ್ಯತೆ ಉಂಟಾಗಿದೆ. ಇದಲ್ಲದೆ ಒಂದೊಂದು ತರಗತಿಗಳಲ್ಲಿ ಕನಿಷ್ಠ 70 ರಿಂದ ಗರಿಷ್ಠ 320 ವಿದ್ಯಾರ್ಥಿಗಳು ಇರುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ಇದರಿಂದ ಬೋಧನಾ ಗುಣಮಟ್ಟ ಕುಸಿಯಲಿದ್ದು ಉಪನ್ಯಾಸಕರಿಗೆ ವಿದ್ಯಾರ್ಥಿಗಳ ಕಡೆಗೆ ಗಮನ ನೀಡಲು ಆಗುತ್ತಿಲ್ಲ ಎಂದರು.
ಕರ್ನಾಟಕ ರಾಜ್ಯ ಪದವಿ ಪೂರ್ವ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ವಸಂತ್, ಉಪಾಧ್ಯಕ್ಷ ಕೇಶವ, ಸಹಾ ಕಾಯದರ್ಶಿ ಜಗದೀಶ್, ಪ್ರಾಂಶುಪಾಲ ನಾಗರಾಜ್, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಕಾಂತರಾಜ್, ಉಪಾಧ್ಯಕ್ಷ ವೀಣಾ ಕೆ.ಎಸ್, ಜಂಟಿ ಕಾರ್ಯದರ್ಶಿ ನಾಗರಾಜ್, ಖಂಜಾಚಿ ರಘು, ವಸಂತ್ ಭಾಗವಹಿಸಿದ್ದರು.