ಜಾತಿಗಣತಿ ವರದಿಗೆ ವಿರೋಧ: ಅಹಿಂದ ಚೇತನ ಆಕ್ಷೇಪ

| Published : Apr 21 2025, 12:56 AM IST

ಸಾರಾಂಶ

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಜಾತಿಗಣತಿ ಸಮೀಕ್ಷಾ ವರದಿ ಬಹಿರಂಗ ವಿರೋಧಿಸುತ್ತಿರುವವರು ರಾಜ್ಯದ ಒಟ್ಟು ಜನಸಂಖ್ಯೆಯ ಶೇ.80ರಷ್ಟಿರುವ ಅಹಿಂದ ವರ್ಗಕ್ಕೆ ಅವಮಾನಿಸುತ್ತಿದೆ. ವರದಿ ವಿರೋಧಿಸುತ್ತಿರುವ ಜನಪ್ರತಿನಿಧಿಗಳು ಬಹಿರಂಗ ಕ್ಷಮೆಯಾಚಿಸಬೇಕು. ಅಂತಹ ಶಾಸಕರು, ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಹಿಂದ ಮತಗಳ ಸಹಕಾರವಿಲ್ಲದೇ ಚುನಾವಣೆಯಲ್ಲಿ ಗೆದ್ದು ಜನಪ್ರತಿನಿಧಿಗಳಾಗಲಿ ಎಂದು ಅಹಿಂದ ಚೇತನಾ ಸಂಘಟನೆ ಖಂಡನಾ ಸಭೆ ನಿರ್ಣಯ ಕೈಗೊಂಡಿದೆ.

- ಸಿಎಂ ಸಿದ್ದರಾಮಯ್ಯ ಪದಚ್ಯುತಗೊಳಿಸಲು ಷಡ್ಯಂತ್ರ ಬಗ್ಗೆ ಅಹಿಂದ ವರ್ಗ ಜಾಗೃತ - ಅಹಿಂದ ವರ್ಗದ ಸಹಕಾರವಿಲ್ಲದೇ ಗೆದ್ದು ತೋರಿಸಲು ಜನ ಪ್ರತಿನಿಧಿಗಳಿಗೂ ಸವಾಲು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಜಾತಿಗಣತಿ ಸಮೀಕ್ಷಾ ವರದಿ ಬಹಿರಂಗ ವಿರೋಧಿಸುತ್ತಿರುವವರು ರಾಜ್ಯದ ಒಟ್ಟು ಜನಸಂಖ್ಯೆಯ ಶೇ.80ರಷ್ಟಿರುವ ಅಹಿಂದ ವರ್ಗಕ್ಕೆ ಅವಮಾನಿಸುತ್ತಿದೆ. ವರದಿ ವಿರೋಧಿಸುತ್ತಿರುವ ಜನಪ್ರತಿನಿಧಿಗಳು ಬಹಿರಂಗ ಕ್ಷಮೆಯಾಚಿಸಬೇಕು. ಅಂತಹ ಶಾಸಕರು, ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಹಿಂದ ಮತಗಳ ಸಹಕಾರವಿಲ್ಲದೇ ಚುನಾವಣೆಯಲ್ಲಿ ಗೆದ್ದು ಜನಪ್ರತಿನಿಧಿಗಳಾಗಲಿ ಎಂದು ಅಹಿಂದ ಚೇತನಾ ಸಂಘಟನೆ ಖಂಡನಾ ಸಭೆ ನಿರ್ಣಯ ಕೈಗೊಂಡಿದೆ.

ನಗರದಲ್ಲಿ ಭಾನುವಾರ ಸಂಘಟನೆ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಶಾಸಕ ಶಿವಶಂಕರಪ್ಪ ಅವರ ಹೇಳಿಕೆ ಬಗ್ಗೆಯೂ ಪ್ರಸ್ತಾಪವಾಯಿತು. ಡಾ.ಅಂಬೇಡ್ಕರ್‌ ರಚಿಸಿದ ಸಂವಿಧಾನದಡಿ, ಸಂವಿಧಾನಬದ್ಧವಾಗಿ ಜನರ ತೆರಿಗೆ ಹಣದಲ್ಲಿ ₹165 ಕೋಟಿಗಳನ್ನು ಖರ್ಚು ಮಾಡಿ, 6 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಜಾತಿಗಣತಿ ವರದಿಯನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಸರ್ಕಾರದ ಈ ಕ್ರಮವನ್ನು ಲಿಂಗಾಯತರು, ಒಕ್ಕಲಿಗರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡಲು ಆಗುತ್ತದಾ ಎಂದು ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಆಡಿರುವ ಮಾತುಗಳನ್ನು ಖಂಡಿಸಲಾಯಿತು.

ಹತ್ತು ವರ್ಷ ಹಿಂದೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಸರ್ಕಾರ ಮಾಡಿದ್ದಾಗ ಎಲ್ಲ ಸಚಿವರು, ಶಾಸಕರು ಒಪ್ಪಿ, ಸರ್ಕಾರ ಸೂಚಿಸಿದ್ದ ಜಾತಿಯ ಕ್ರಮ ಸಂಖ್ಯೆಯನ್ನು ತಮ್ಮ ತಮ್ಮ ಜಾತಿಗಳ ಸಭೆ ಮಾಡಿ, ಜಾತಿ ಕಾಲಂನಲ್ಲಿ ಹೀಗೆ ಬರೆಯಸಬೇಕೆಂದು ಪ್ರಚಾರ ಮಾಡಿದ್ದರು. ಜಯಪ್ರಕಾಶ ಹೆಗಡೆ ಅವರನ್ನು ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷರನ್ನಾಗಿ ನೇಮಿಸಿದ್ದು ಬಿಜೆಪಿ ಸರ್ಕಾರ. ಲೋಕಸಭೆ ಚುನಾವಣೆಗೂ ಮುನ್ನ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಜನರ ತೆರಿಗೆಯ ₹165 ಕೋಟಿ ಖರ್ಚು ಮಾಡಿರುವ ಸಮೀಕ್ಷಾ ವರದಿಯನ್ನೇ ಅವೈಜ್ಞಾನಿಕವೆಂದು, ಮರುಸಮೀಕ್ಷೆಗೆ ಹೇಳಿಕೆ ನೀಡುತ್ತಿರುವುದನ್ನು ಸಭೆ ಖಂಡಿಸಿತು.

ವರದಿಗೆ ವಿರೋಧಿಸುತ್ತಿರುವವರು 10 ವರ್ಷ ಹಿಂದೆಯೇ ವಿರೋಧಿಸಬೇಕಿತ್ತು. ನಮ್ಮ ಮನೆಗೆ ಬಂದಿಲ್ಲ, ಸಮೀಕ್ಷೆಯನ್ನೇ ಮಾಡಿಲ್ಲವೆಂದು ಹೇಳುತ್ತಿರುವವರು 10 ವರ್ಷ ಹಿಂದೆ ನಮ್ಮ ಮನೆಗೆ ಯಾಕೆ ಬಂದಿಲ್ಲವೆಂದು ಸರ್ಕಾರವನ್ನೇ ಪ್ರಶ್ನಿಸಬೇಕಿತ್ತು. ಆಗ ಜಾಣಮೌನಕ್ಕೆ ಶರಣಾಗಿ, ಈಗ ಸಚಿವ ಸಂಪುಟದಲ್ಲಿ 6 ಕೋಟಿ ಜನಸಂಖ್ಯೆಯ ಜಾತಿವಾರು ಸಂಖ್ಯೆಗಳು ಬಹಿರಂಗಗೊಂಡಿರುವಾಗ ಆಕ್ಷೇಪಿಸುತ್ತಿರುವುದು ಎಷ್ಟು ಸರಿ? ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಸರ್ವ ಜಾತಿಗಳನ್ನು ಸಮಾನವಾಗಿ ಕಾಣಬೇಕು ಎಂದು ಮುಖಂಡರು ಹೇಳಿದರು.

ಜಾತಿ ಗಣತಿ ಸಂಖ್ಯೆ ಪ್ರಕಾರ ದಾವಣಗೆರೆ ಜಿಲ್ಲೆಯಲ್ಲಿ ಶೇ.82ರಷ್ಟಿರುವ ಅಲ್ಪಸಂಖ್ಯಾತರ, ಹಿಂದುಳಿದ, ದಲಿತ ಸಮುದಾಯಗಳ ಮತಗಳಿಂದಲೇ ಶಾಸಕರಾದವರು. ಈಗ ಜಾತಿಗಣತಿ ವಿರೋಧಿಸುತ್ತಿರುವ 110 ಶಾಸಕರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಹಿಂದ ಮತಗಳ ಬೆಂಬಲವಿಲ್ಲದೇ, ಚುನಾವಣೆಯಲ್ಲಿ ಗೆದ್ದು ಶಾಸಕರಾಗಲಿ. ರಾಜ್ಯದ ಜನಸಂಖ್ಯೆಯಲ್ಲಿ ಸರಾಸರಿ ಶೇ.80ರಷ್ಟಿರುವ ಅಹಿಂದ ವರ್ಗಗಳನ್ನು ಪ್ರತಿನಿಧಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪದಚ್ಯುತಿಗೆ ಕುತಂತ್ರಗಳನ್ನು ಶೋಷಿತ ವರ್ಗಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ. ಅಹಿಂದ ವರ್ಗಗಳು ಜಾಗೃತಗೊಂಡಿದ್ದು, ಮುಂದಿನ ದಿನಗಳಲ್ಲಿ ತಕ್ಕ ಉತ್ತರಗಳನ್ನು ಸಂವಿಧಾನ ಬದ್ಧವಾಗಿಯೇ ನೀಡುವುದಾಗಿ ಸಭೆ ಎಚ್ಚರಿಸಿತು.

ಸಂಘಟನೆ ಮುಖಂಡರಾದ ರಾಜು ಮೌರ್ಯ, ದಾದಾಪೀರ್ ನವಿಲೇಹಾಳ್, ಡಿ.ಚಂದ್ರು, ಸಿದ್ಧಲಿಂಗಪ್ಪ, ಷಣ್ಮುಖಪ್ಪ, ಶಿವಣ್ಣ, ಶಿವಕುಮಾರ, ರಾಜು ಪಾಟೀಲ, ಚಂದ್ರು, ಆರ್.ಬಿ.ಪರಮೇಶ, ಎಸ್.ಎನ್. ಸಿದ್ಧಲಿಂಗಪ್ಪ, ಷಣ್ಮುಖಪ್ಪ, ಅನಿಲ್, ಗಿರೀಶ, ಮಲ್ಲಪ್ಪ ಇತರರು ಇದ್ದರು.

- - -

-20ಕೆಡಿವಿಜಿ6, 7.ಜೆಪಿಜಿ:

ದಾವಣಗೆರೆಯಲ್ಲಿ ಭಾನುವಾರ ನಡೆದ ಅಹಿಂದ ಚೇತನ ಸಭೆಗೆ ಮುನ್ನ ಅಂಬೇಡ್ಕರ್, ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ನಮಿಸಲಾಯಿತು.