ಸಾರಾಂಶ
ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಬೇಗೂರು ನಿವಾಸಿಗಳು ಪ್ರೆಸ್ಟೀಜ್ ಗ್ರೂಪ್ ವಿರುದ್ಧ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣಸ್ಮಶಾನಕ್ಕೆ ಹೋಗುವ ರಸ್ತೆಯನ್ನು ಅಕ್ರಮವಾಗಿ ಬಂದ್ ಮಾಡಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗೂರು ನಿವಾಸಿಗಳು ಪ್ರೆಸ್ಟೀಜ್ ಗ್ರೂಪ್ ವಿರುದ್ಧ ಗುರುವಾರ ರಸ್ತೆ ಅತಿಕ್ರಮಣ ಜಾಗದಲ್ಲಿ ನಿಂತು ಪ್ರತಿಭಟನೆ ನಡೆಸಿದರು.
ರಾಜಕಾಲುವೆ ಹಾಗೂ ಹಿಂದೂ ಸಾದರ ಸ್ಮಶಾನದ ರಸ್ತೆ ಅತಿಕ್ರಮಣ ಮಾಡಿಕೊಂಡು ಬೇಗೂರಿನ ಸರ್ವೇ ನಂ 369, 370 ಹಾಗೂ 371ರಲ್ಲಿ ಪ್ರೆಸ್ಟೀಜ್ ಗ್ರೂಪ್ ವತಿಯಿಂದ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಾಗುತ್ತಿದೆ. ನೇರ ರಸ್ತೆಯನ್ನು ಮುಚ್ಚಿರುವುದರಿಂದ ಸುತ್ತು ಬಳಸಿ ಹೋಗುವ ದುಸ್ಥಿತಿ ನಿರ್ಮಾಣವಾಗಿದ್ದು, ಶವಗಳನ್ನು ಏರ್‌ಲಿಫ್ಟ್ ಮೂಲಕ ಸಾಗಿಸಬೇಕೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜಕರಾಣಿಗಳ ಜತೆ ಅಧಿಕಾರಿಗಳು ಶಾಮೀಲು:
ಪ್ರೆಸ್ಟೀಜ್ ಗ್ರೂಪ್ ಎನ್ನುವುದು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ರಾಜಕೀಯ ಧುರೀಣರ ಪಾಲುದಾರಿಕೆ ಸಂಸ್ಥೆಯಾಗಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಶಾಮೀಲಾಗಿ ಕಾನೂನು ಗಾಳಿಗೆ ತೂರಿ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ಅಲ್ಲದೇ ಪ್ರಶ್ನೆ ಮಾಡುವವರ ಮೇಲೆ ಪ್ರೆಸ್ಟೀಜ್ ಗ್ರೂಪ್ ದಬ್ಬಾಳಿಕೆ ನಡೆಸುತ್ತಿದ್ದಾರೆ. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದು, ಶೀಘ್ರದಲ್ಲೇ ನ್ಯಾಯ ದೊರಕಿಸಿಕೊಡದೆ ಹೋದರೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಮುಖ್ಯ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.ಬೇಗೂರು ನಿವಾಸಿಗಳಾದ ಸಂಪತ್ ಹಾಗೂ ಕುಮಾರ್ ಅವರು ಮಾತನಾಡಿ, ಬಡವರು ರಾಜಕಾಲುವೆ ಪಕ್ಕದಲ್ಲಿ ಕಟ್ಟಡ ನಿರ್ಮಿಸಿದರೆ ಮುಲಾಜಿಲ್ಲದೆ ತೆರವುಗೊಳಿಸುವ ಅಧಿಕಾರಿಗಳು ಅನಧೀಕೃತವಾಗಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡುತ್ತಿರುವ ಅಪಾರ್ಟ್ಮೆಂಟ್‌ಗೆ ಸಹಕಾರ ನೀಡುತ್ತಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.