ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಹೊನ್ನಾವರ: ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಗೆ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಈ ಸಂಬಂಧ ಪ್ರಕಟಣೆ ನೀಡಿರುವ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ, ಕೇಂದ್ರ ಅರಣ್ಯ ಪರಿಸರ ಮಂತ್ರಾಲಯವು ಜು. 27ರಂದು ಹೊರಡಿಸಿದ ಕರಡು ಅಧಿಸೂಚನೆಗೆ ಹೋರಾಟ ಸಮಿತಿ ಈಗಾಗಲೇ ತನ್ನ ಲಿಖಿತ ಆಕ್ಷೇಪಣೆ ಸಲ್ಲಿಸಿದೆ. ಈ ನಿಟ್ಟಿನಲ್ಲಿ ಮದ್ಯಪ್ರವೇಶ ಮಾಡುವಂತೆ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಜಿಲ್ಲೆಯ ಒಟ್ಟೂ ವಿಸ್ತೀರ್ಣದಲ್ಲಿ ಶೇ. 80ರಷ್ಟು ಅರಣ್ಯ ಭೂಮಿಯಾಗಿದ್ದು, ಖಾಸಗಿ ಮತ್ತು ಕಂದಾಯ ಭೂಮಿ ಶೇ. 20ರಷ್ಟಿದೆ. ಜಿಲ್ಲೆಯಲ್ಲಿ ಶೇ. 30ರಷ್ಟು ಜನರು ಪಶ್ಚಿಮ ಘಟ್ಟದ ಅರಣ್ಯ ಭೂಮಿಯಲ್ಲಿ ಕೃಷಿ ಮತ್ತು ತೋಟಗಾರಿಕೆಯೊಂದಿಗೆ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳು ಜನಸಾಮಾನ್ಯರ ಉಸಿರುಗಟ್ಟಿಸುತ್ತಿವೆ. ಹೀಗಿರುವಲ್ಲಿ ಕೇಂದ್ರ ಸರ್ಕಾರ ಜಿಲ್ಲೆಯ ಬಹುಪಾಲು ಜನವಸತಿ ಪ್ರದೇಶಗಳನ್ನು ಪರಿಸರವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ, ಅಲ್ಲಿ ವಿವಿಧ ನಿರ್ಬಂಧ ಹೇರಲು ಹೊರಟಿರುವ ಕ್ರಮ ಸರಿಯಲ್ಲ ಎಂದು ಹೇಳಿದ್ದಾರೆ.

ಜಿಲ್ಲೆಯ ಬಹುತೇಕ 567 ಹಳ್ಳಿಗಳ ಜನವಸತಿ ಪ್ರದೇಶವನ್ನು ಸಹ ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಲಾಗಿದೆ. ಕೇಂದ್ರ ಪರಿಸರ ಇಲಾಖೆ ಹೊರಡಿಸಿರುವ ತನ್ನ 7ನೇ ಕರಡು ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು. ಈ ಜನವಿರೋಧಿ ಅಧಿಸೂಚನೆಗೆ ರಾಜ್ಯ ಸರ್ಕಾರವು ತನ್ನ ವಿರೋಧ ಸೂಚಿಸಬೇಕು ಹಾಗೂ ರಾಜ್ಯ ಸರ್ಕಾರದಿಂದ ಜಿಲ್ಲೆಯ ಜನರ ಹಿತ ಕಾಯುವ ಕೆಲಸ ಆಗಬೇಕು ಎಂದು ಆಗ್ರಹಿಸಿದ್ದಾರೆ.