ದಾವಣಗೆರೆಯಲ್ಲಿ ಎಪಿಎಂಸಿ ಗೂಡ್ಸ್ ವಾಹನ ನಿಲ್ದಾಣ ತೆರವಿಗೆ ವಿರೋಧ

| Published : Apr 07 2025, 12:37 AM IST

ದಾವಣಗೆರೆಯಲ್ಲಿ ಎಪಿಎಂಸಿ ಗೂಡ್ಸ್ ವಾಹನ ನಿಲ್ದಾಣ ತೆರವಿಗೆ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಎಪಿಎಂಸಿ ಮಾರುಕಟ್ಟೆಯ ಗೂಡ್ಸ್ ವಾಹನ ನಿಲ್ದಾಣವನ್ನು ಎಪಿಎಂಸಿ ಅಧಿಕಾರಿಗಳು ಬಲವಂತದಿಂದ ತೆರ‍ವುಗೊಳಿಸಲು ಮುಂದಾಗಿದ್ದಾರೆ. ಬಲವಂತದಿಂದ, ದೌರ್ಜನ್ಯದಿಂದ ತೆರವು ಮಾಡಿದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು

ಅಧಿಕಾರಿಗಳ ವರ್ತನೆಗೆ ಚಾಲಕ, ಮಾಲೀಕರ ತೀವ್ರ ಅಸಮಾಧಾನ । ಸೂಕ್ತ ಕ್ರಮಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಎಪಿಎಂಸಿ ಮಾರುಕಟ್ಟೆಯ ಗೂಡ್ಸ್ ವಾಹನ ನಿಲ್ದಾಣವನ್ನು ಎಪಿಎಂಸಿ ಅಧಿಕಾರಿಗಳು ಬಲವಂತದಿಂದ ತೆರ‍ವುಗೊಳಿಸಲು ಮುಂದಾಗಿದ್ದಾರೆ. ಬಲವಂತದಿಂದ, ದೌರ್ಜನ್ಯದಿಂದ ತೆರವು ಮಾಡಿದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಜಿಲ್ಲಾ ಮೂರು ಚಕ್ರ ಮತ್ತು ನಾಲ್ಕು ಚಕ್ರ ಗೂಡ್ಸ್ ವಾಹನಗಳ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಪಳನಿಸ್ವಾಮಿ ಎಚ್ಚರಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 35 ವರ್ಷದಿಂದಲೂ ಗೂಡ್ಸ್ ವಾಹನ ಚಾಲಕರು, ಮಾಲೀಕರು ಇದೇ ವೃತ್ತಿಯನ್ನು ನಂಬಿ, ಬದುಕನ್ನು ಕಟ್ಟಿಕೊಂಡಿದ್ದಾರೆ. 2014ರಲ್ಲಿ ಆಗಿನ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಜಿಲ್ಲಾ ಕೇಂದ್ರದ 11 ಕಡೆ ಗೂಡ್ಸ್ ವಾಹನಗಳ ನಿಲ್ದಾಣ ಮಾಡುವುದಾಗಿ ಹೇಳಿದ್ದು, ಅದರಂತೆ ಎಪಿಎಂಸಿಯಲ್ಲಿ ನಿಲ್ದಾಣ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳು ಈಗ ಏಕಾಏಕಿ ಬಲವಂತದಿಂದ ನಿಲ್ದಾಣ ತೆರವುಗೊಳಿಸಲು ಮುಂದಾಗಿದ್ದಾರೆ. ಈ ಬಗ್ಗೆ ಎಪಿಎಂಸಿ ಮೇಲಧಿಕರಿಗಳ ಗಮನಕ್ಕೆ ತಂದರೂ ಸಹ ಅಧಿಕಾರಿಗಳು ದರ್ಪ ಮೆರೆಯುತ್ತಿದ್ದಾರೆ. ಇಂತಹ ನಿಲುವು, ಧೋರಣೆ ಅಧಿಕಾರಿಗಳಿಗೆ ಶೋಭೆ ತರುವುದಿಲ್ಲ. ಹಿಂದೆ ಇದೇ ಎಪಿಎಂಸಿಯಲ್ಲಿ ಇದ್ದ ತನಿಖಾ ಠಾಣೆಯನ್ನು ಹೋಟೆಲ್ ನಡೆಸಲು ಬಾಡಿಗೆ ಕೊಟ್ಟಿರುವ ಅಧಿಕಾರಿಗಳು ನಿಲ್ದಾಣ ಜಾಗದ ಮೇಲೆ ಕಣ್ಣು ಹಾಕಿದ್ದಾರೆ ಎಂದು ದೂರಿದರು.

ತನಿಖಾ ಠಾಣೆ ಜಾಗವನ್ನು ಹೊಟೆಲ್‌ಗೆ ಬಾಡಿಗೆ ಕೊಟ್ಟ ಎಪಿಎಂಸಿ ಅಧಿಕಾರಿಗಳು ಅದೇ ಜಾಗವನ್ನು ಬಿಡಿಸಿಕೊಂಡು, ಚೆಕ್‌ಪೋಸ್ಟ್ ಮಾಡುವ ಬದಲಿಗೆ, ನಮ್ಮ ನಿಲ್ದಾಣವನ್ನು ತೆರವುಗೊಳಿಸಲು ಒತ್ತಡ ಹೇರುತ್ತಿದ್ದಾರೆ. ಎಪಿಎಂಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಭೇಟಿ ಮಾಡಿ, ಮನವಿ ಅರ್ಪಿಸಲಿದ್ದೇವೆ ಎಂದುತಿಳಿಸಿದರು.

ಸುಮಾರು 30-40 ಕುಟುಂಬಗಳ ನೂರಾರು ಜನರು ಇದೇ ನಿಲ್ದಾಣವನ್ನು ನೆಚ್ಚಿಕೊಂಡು ಬದುಕನ್ನು ಕಟ್ಟಿಕೊಂಡಿವೆ. ಇದೇ ನಿಲ್ದಾಣ ನಂಬಿ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ, ಹಿರಿಯರು, ಕುಟುಂಬದ ಆಸ್ಪತ್ರೆ ಖರ್ಚು ವೆಚ್ಚ, ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಅದಕ್ಕೆ ಎಪಿಎಂಸಿ ಅಧಿಕಾರಿಗಳು ತೊಂದರೆ ಕೊಡಬಾರದು ಎಂದು ಮನವಿ ಮಾಡಿದರು.

ಎಪಿಎಂಸಿ ಜಾಗದಿಂದ ಗೂಡ್ಸ್ ವಾಹನ ನಿಲ್ದಾಣ ತೆರವುಗೊಳಿಸಿದರೆ ನಾವೆಲ್ಲಾ ಬೀದಿಗೆ ಬೀಳುವ ಜತೆಗೆ ನಮ್ಮೆಲ್ಲಾ ಕುಟುಂಬ ಸದಸ್ಯರೂ ವಿಷ ಕುಡಿಯುವ ಪರಿಸ್ಥಿತಿ ಬರುತ್ತದೆ. ಸಚಿವರು, ಶಾಸಕರು, ಸಂಸದರು, ಜಿಲ್ಲಾಧಿಕಾರಿ ಈ ವಿಚಾರದ ಬಗ್ಗೆ ಎಪಿಎಂಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ, ಹೋಟೆಲ್‌ಗೆ ಬಾಡಿಗೆ ಕೊಟ್ಟಿರುವ ಜಾಗದಲ್ಲಿ ಚೆಕ್‌ಪೋಸ್ಟ್ ಮಾಡಿಕೊಂಡು, ನಮಗೆ ಆಸರೆಯಾಗಿರುವ ಗೂಡ್ಸ್ ವಾಹನ ನಿಲ್ದಾಣವನ್ನು ಯಥಾ ಮುಂದುವರಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸಂಘದ ಬೇತೂರು ಹನುಮಂತಪ್ಪ, ಎಸ್.ಆರ್.ತಿಪ್ಪೇಸ್ವಾಮಿ, ಎಸ್.ಭರತ್, ಬಿ.ಸಂತೋಷಕುಮಾರ, ಎನ್.ಚಿರಂಜೀವಿ, ಅಂಜಿನಿ, ಎಂ.ರವಿ, ಲೋಕೇಶ ಇತರರು ಇದ್ದರು.