ಸಾರಾಂಶ
ಮಳವಳ್ಳಿ : ತಾಲೂಕಿನ ಬೊಪ್ಪೇಗೌಡನಪುರ ಹೋಬಳಿಯ ಹೊಸಹಳ್ಳಿ ಬಳಿ ಬೆಂಗಳೂರು- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ-948ರಲ್ಲಿ ಶನಿವಾರದಿಂದ ಆರಂಭವಾದ ಟೋಲ್ ಸಂಗ್ರಹ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.
ಏಕಾಏಕಿ ಟೋಲ್ ಸಂಗ್ರಹ ಆರಂಭಿಸಿದ್ದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯರು ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು, ಟೋಲ್ ಬಳಿ ಜಮಾಯಿಸಿ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ರಸ್ತೆ ಕಾಮಗಾರಿ ಕಳಪೆಯಾಗಿದೆ. ಮಳವಳ್ಳಿದಿಂದ ಸತ್ತೇಗಾಲದವರೆಗೂ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೂ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಿಂದಾಗಿ ಸೋಮವಾರದವರೆಗೆ ಟೋಲ್ ಸಂಗ್ರಹ ಸ್ಥಗಿತಗೊಳಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಎಪಿಎಂಸಿ ಮಾಜಿ ಅಧ್ಯಕ್ಷ ಮುಟ್ಟನಹಳ್ಳಿ ಅಂಬರೀಶ್ ಮಾತನಾಡಿ, ಸ್ಥಳೀಯರಿಗೆ ಉದ್ಯೋಗ ನೀಡದೇ ಕನ್ನಡ ಬಾರದ ಕೆಲ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದ್ದರಿಂದ ಸ್ಥಳೀಯವಾಗಿ ಭಾಷೆ ಸಮಸ್ಯೆ ಕಾಡಲಿದೆ. ಟೋಲ್ ವಾಸ್ತವವಾಗಿ ಮಳವಳ್ಳಿ ತಾಲೂಕಿನಲ್ಲಿ ಇದ್ದರೂ ಸತ್ತೇಗಾಲ ಟೋಲ್ ಎಂದು ಹೆಸರಿಡಲಾಗಿದೆ. ಇದು ಸಹ ಹಲವು ಗೊಂದಲಗಳಿಗೆ ಕಾರಣವಾಗಿದೆ. ಅವೈಜ್ಞಾನಿಕ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಅಲ್ಲದೇ ಟೋಲ್‌ಗೆ ಗಗನಚುಕ್ಕಿ ಎಂದು ಹೆಸರಿಡಬೇಕು. ಅಲ್ಲಿಯವರೆಗೂ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಇದೊಂದು ಅವೈಜ್ಞಾನಿಕ ಕಾಮಗಾರಿ. ಇನ್ನೂ ಸರಿಪಡಿಸುವ ಕಾರ್ಯ ಪೂರ್ಣಗೊಂಡಿಲ್ಲ, ಪಟ್ಟಣದ ಪ್ರವಾಸಿ ಮಂದಿರ ವೃತ್ತದ, ಕಣಿಗಲ್ ಹಳ್ಳದ ಬಳಿ ಸೇರಿದಂತೆ ಅನೇಕ ಕಡೆ ಕಾಮಗಾರಿ ಪ್ರಗತಿಯಲ್ಲಿದೆ. ಆದರೂ ಏಕಾಏಕಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಕೂಡಲೇ ಟೋಲ್ ಸಂಗ್ರಹ ಕಾರ್ಯ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಮಳವಳ್ಳಿಯಿಂದ 20 ಕಿಮೀ ರಸ್ತೆ ಹದಗೆಟ್ಟಿದ್ದು, ಅಪಘಾತಗಳು ಹೆಚ್ಚಾಗಿದೆ. ಆದ್ದರಿಂದ ಮಳವಳ್ಳಿ ಟೌನ್ ಅಂಬೇಡ್ಕರ್ ವೃತ್ತದ ರಸ್ತೆ ಅಭಿವೃದ್ಧಿ, ಜೋಡಿ ರಸ್ತೆ ಮಾಡಿ ಬ್ಯಾರಿಕೇಡ್, ಬೀದಿದೀಪ ಅಳವಡಿಕೆ, ಕಣಗಲ್ ಮತ್ತು ಪಂಡಿತಹಳ್ಳಿಯಲ್ಲಿ ವೃತ್ತ ನಿರ್ಮಾಣ, ಬಾಚನಹಳ್ಳಿ, ಪಂಡಿತಹಳ್ಳಿ ಬಳಿಯ ಬಸ್ ಶೆಲ್ಟರ್ ಸ್ಥಳಾಂತರ, ರೊಟ್ಟಿಕಟ್ಟೆಗೆ ಅಂಡರ್ ಪಾಸ್ ಮತ್ತು ಸರ್ವೀಸ್ ರಸ್ತೆ ನಿರ್ಮಿಸುವುದು, ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಟೋಲ್ ಸಂಗ್ರಹವು ಕೊಳ್ಳೇಗಾಲ ತಾಲೂಕಿನ ಸತ್ತೆಗಾಲಕ್ಕೆ ಮಂಜೂರಾಗಿರುವುದು. ಹೀಗಾಗಿ ಸ್ಥಳಾಂತರ ಮಾಡಬೇಕು. ಅಲ್ಲಿಯವರೆಗೂ ಸುಂಕ ವಸೂಲಾತಿ ನಿಲ್ಲಿಸಬೇಕು ಎಂದು ಒತ್ತಾಯಿಸಿ ಟೋಲ್ ಸಂಗ್ರಹ ಏಜೆನ್ಸಿಯ ಜನರಲ್ ವ್ಯವಸ್ಥಾಪಕ ಸುನೀಲ್ ಪವಾರ್ ಅವರಿಗೆ ಮನವಿ ಪತ್ರ ನೀಡಿದರು.
ಇದೀಗ ಟೋಲ್ ಸಂಗ್ರಹಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈ ಬಿಟ್ಟರು. ಸಿಪಿಐ ಬಿ.ಎಸ್.ಶ್ರೀಧರ್, ಪಿಎಸ್ಐ ಪ್ರಕಾಶ್ ಬಂದೋಬಸ್ತ್ ನೀಡಿದರು.
ಪ್ರತಿಭಟನೆಯಲ್ಲಿ ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಪಂಡಿತಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಮಳವಳ್ಳಿ ಪುರಸಭೆ ಸದಸ್ಯರಾದ ಎಂ.ಎನ್.ಶಿವಸ್ವಾಮಿ, ಎಂ.ಆರ್.ರಾಜಶೇಖರ್, ಸಂತೋಷ್ ಕುಮಾರ್, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್, ಸಿಡಿಸಿ ಅಧ್ಯಕ್ಷ ಬಿ.ಕೆ.ರವೀಂದ್ರಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ್, ನಿಕಟಪೂರ್ವ ಅಧ್ಯಕ್ಷ ಎಚ್.ಕೆ.ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಕುಮಾರ, ನಿರ್ದೇಶಕ ಬಸವರಾಜು, ಗ್ರಾ.ಪಂ.ಉಪಾಧ್ಯಕ್ಷ ರಘು, ಮುಖಂಡರಾದ ರೋಹಿತ್ ಗೌಡ(ದೀಪು), ಮೂರ್ತಿ, ಬಂಕ್ ಮಹದೇವು, ಸಿದ್ದರಾಜು, ಅಶ್ವಥ್ ಕುಮಾರ್ ಇದ್ದರು.
ನಾಳೆ ಬೆಂಗಳೂರಿನಲ್ಲಿ ಸಭೆ:
ಮಳವಳ್ಳಿ- ಕೊಳ್ಳೆಗಾಲ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿದ್ದರೂ ಅವೈಜ್ಞಾನಿಕವಾಗಿ ಟೋಲ್ ಸಂಗ್ರಹಿಸಲಾಗುತ್ತಿರುವ ಬಗ್ಗೆ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಾಳೆ ಮಾ.17 ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖ್ಯೆ 320ರಲ್ಲಿ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಶಾಸಕ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಜಿಲ್ಲಾಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಭಾಗವಹಿಸುವರು.