ಕನ್ನಡಪ್ರಭ ವಾರ್ತೆ ವಿಜಯಪುರ
ಕೇವಲ ಮುಸಲ್ಮಾನರ ಮತಗಳ ಆಸೆಗಾಗಿ ಕಾಂಗ್ರೆಸ್ಸಿನ ಹಿಂದೂ ವಿರೋಧಿ ನೀತಿ ಬಯಲಾಗಿದೆ. ಹಿಜಾಬ್ ವಿವಾದ ಇನ್ನೂ ಕೋರ್ಟ್ ಅಂಗಳದಲ್ಲಿ ಇದ್ದರೂ ಕೂಡ ಅದನ್ನು ಲೆಕ್ಕಿಸದೇ ಹಿಜಾಬ್ ಗೆ ಅವಕಾಶ ನೀಡಿ ಈಗ ಕಲಬುರ್ಗಿಯ ಲಾಡ್ಲೇ ಮಶಾಕ್ ದರ್ಗಾದ ದಂಗೆಯಲ್ಲಿ ಭಾಗಿಯಾದಂತಹ ಮುಸ್ಲಿಮರ ಮೇಲಿನ ಕೇಸ್‌ಗಳನ್ನು ವಾಪಸ್ ತೆಗೆದುಕೊಂಡಿದ್ದು ಖಂಡನೀಯ ಎಂದು ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅಣ್ಣಿಗೇರಿ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿದ ಅವರು, 2015 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮುಸ್ಲಿಂ ಸಂಘಟನೆಗಳ ಮೇಲಿನ ಒಟ್ಟು 175 ಕ್ರಿಮಿನಲ್ ಪ್ರಕರಣಗಳನ್ನು ಹಿಂತೆಗೆದುಕೊಂಡಿತ್ತು. ಈ ಪ್ರಕರಣಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಕರ್ನಾಟಕ ಫೋರಮ್ ಫಾರ್ ಡಿಗ್ನಿಟಿ (ಕೆಎಫ್‌ಡಿ) ಯ 1,600ಕ್ಕೂ ಹೆಚ್ಚು ಕಾರ್ಯಕರ್ತರನ್ನು ಒಳಗೊಂಡಿವೆ. ಪಿಎಫ್‌ಐ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ನ ಮಾತೃ ಸಂಘಟನೆಯಾಗಿದೆ. ಹಿಂತೆಗೆದುಕೊಳ್ಳಲಾದ ಪ್ರಕರಣಗಳು ಪ್ರಾಥಮಿಕವಾಗಿ ಶಿವಮೊಗ್ಗ, ಹಾಸನ ಮತ್ತು ಮೈಸೂರಿನಂತಹ ಪ್ರದೇಶಗಳಲ್ಲಿ ಸಂಭವಿಸಿದ ಕೋಮು ಘರ್ಷಣೆಗಳು ಮತ್ತು ಗಲಭೆಗಳಿಗೆ ಸಂಬಂಧಿಸಿದಾಗಿದ್ದವು. ಇದು ಮುಸ್ಲಿಂ ತುಷ್ಟೀಕರಣ ರಾಜಕೀಯವಾಗಿದೆ.
ಕಾಂಗ್ರೆಸ್ ಪಕ್ಷದ ಕ್ರಮಗಳು ಇಸ್ಲಾಂ ಮೂಲಭೂತವಾದಿ ಸಂಘಟನೆಗಳ ಬೆಳವಣಿಗೆಗೆ ಕೊಡುಗೆ ನೀಡಿವೆ, ಕಾನೂನು ಇಲಾಖೆ ಮತ್ತು ರಾಜ್ಯ ಪೊಲೀಸ್ ಪಡೆಗಳ ವಿರೋಧದ ಹೊರತಾಗಿಯೂ ಈ ಪ್ರಕರಣಗಳನ್ನು ಹಿಂತೆಗೆದುಕೊಂಡಿರುವುದು ದುರ್ದೈವದ ಸಂಗತಿ.ಹಿಂದೂ ದಲಿತ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದವರನ್ನು ಕಾಂಗ್ರೆಸ್ ಸರಕಾರ ರಕ್ಷಣೆ ಮಾಡಿದ್ದು, ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾಗೂ ಹುಬ್ಬಳ್ಳಿಯಲ್ಲಿ ಪೊಲೀಸ್ ವಾಹನವನ್ನೇ ಬೆಂಕಿ ಹಚ್ಚಿ, ಪೊಲೀಸರ ಮೇಲೆ ಹಲ್ಲೆ ಮಾಡಿದರೂ ಕೂಡ ಕೇವಲ ಮುಸಲ್ಮಾನರು ಎನ್ನುವ ಕಾರಣಕ್ಕೆ ಅವರ ಮೇಲಿನ ಕೇಸ್ ಗಳನ್ನು ವಾಪಸ್ ಪಡೆದುಕೊಳ್ಳಲಾಗಿತ್ತು. ಈಗ ಮತ್ತೆ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗವನ್ನು ಅಪವಿತ್ರಗೊಳಿಸಿ, ನೂರಾರು ಮುಸ್ಲಿಂ ಯುವಕರು ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಂದು ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದರೂ ಕೂಡ ಮತಾಂಧ ಮುಸ್ಲಿಮರ ಮೇಲಿನ ಕೇಸ್ ಗಳನ್ನು ವಾಪಸ್ ಪಡೆದಿರುವುದು ಕಾಂಗ್ರೆಸ್ಸಿನ ಹಿಂದು ವಿರೋಧಿ ನೀತಿಯನ್ನು ತೋರಿಸುತ್ತದೆ ಎಂದರು.