ಗ್ಯಾರಂಟಿ ನಿಲ್ಲಿಸಲು ವಿಪಕ್ಷಗಳ ಹುನ್ನಾರ: ವೇಣು- ಸಚಿವರು, ಶಾಸಕರು ಪ್ರತಿ ಜಿಲ್ಲೆ, ಕ್ಷೇತ್ರಗಳಲ್ಲೂ ಜನರಿಗೆ ಈ ಷಡ್ಯಂತ್ರ ತಿಳಿಸಿ

| Published : Aug 05 2024, 12:31 AM IST

ಗ್ಯಾರಂಟಿ ನಿಲ್ಲಿಸಲು ವಿಪಕ್ಷಗಳ ಹುನ್ನಾರ: ವೇಣು- ಸಚಿವರು, ಶಾಸಕರು ಪ್ರತಿ ಜಿಲ್ಲೆ, ಕ್ಷೇತ್ರಗಳಲ್ಲೂ ಜನರಿಗೆ ಈ ಷಡ್ಯಂತ್ರ ತಿಳಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರ ಜಾರಿ ತಂದಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹುನ್ನಾರದಿಂದ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ-ಜೆಡಿಎಸ್‌ ಮುಂದಾಗಿವೆ. ಹೀಗಾಗಿ ಸಚಿವರು, ಶಾಸಕರು ಜನರನ್ನು ಭೇಟಿ ಮಾಡಿ ಅವರ ಷಡ್ಯಂತ್ರ ಜನರಿಗೆ ತಿಳಿಸುವಂತೆ ನಿರ್ಧರಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

‘ರಾಜ್ಯ ಕಾಂಗ್ರೆಸ್‌ ಸರ್ಕಾರವು ಬಡವರಿಗೆ ನೀಡುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹುನ್ನಾರದಿಂದ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ-ಜೆಡಿಎಸ್‌ ಮುಂದಾಗಿವೆ. ಹೀಗಾಗಿ ಸಚಿವರು, ಶಾಸಕರು ಪ್ರತಿ ಜಿಲ್ಲೆ, ಕ್ಷೇತ್ರಗಳಲ್ಲೂ ಜನರನ್ನು ಭೇಟಿ ಮಾಡಿ ಗ್ಯಾರಂಟಿಗಳನ್ನು ಸ್ಥಗಿತಗೊಳಿಸುವ ಷಡ್ಯಂತ್ರವನ್ನು ಜನರಿಗೆ ತಿಳಿಸುವಂತೆ ನಿರ್ಧರಿಸಲಾಗಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಸಚಿವರೊಂದಿಗೆ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಎಲ್ಲಾ ಕ್ಷೇತ್ರಗಳ ಜನರ ಬಳಿಗೆ ಹೋಗುತ್ತೇವೆ. ಬಿಜೆಪಿಯವರು ಸರ್ಕಾರ ಅಸ್ಥಿರಗೊಳಿಸಲು ಹಾಗೂ ತನ್ಮೂಲಕ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲು ಹೇಗೆ ಹುನ್ನಾರ ನಡೆಸಿದ್ದಾರೆ ಎಂಬುದನ್ನು ವಿವರಿಸುತ್ತೇವೆ. ಬಿಜೆಪಿ–ಜೆಡಿಎಸ್‌ ಪಕ್ಷಗಳ ಪಿತೂರಿಗೆ ನಾವು ಜಗ್ಗದೆ ಒಟ್ಟಾಗಿ ಹೋರಾಡುತ್ತೇವೆ. ಈ ಬಗ್ಗೆ ಎಲ್ಲಾ ಸಚಿವರಿಗೂ ಸೂಚನೆ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಪ್ರಜ್ವಲ್‌ ರೇವಣ್ಣ ಪ್ರಕರಣ ಬೆಳಕಿಗೆ ಬಂದು ದೇಶಾದ್ಯಂತ ಚರ್ಚೆಯಾಗುತ್ತಿರುವಾಗಲೇ ಬಿಜೆಪಿ-ಜೆಡಿಎಸ್‌ ರಾಜ್ಯ ಸರ್ಕಾರದ ವಿರುದ್ಧದ ಪಿತೂರಿ ನಡೆಸಿವೆ. ತನ್ಮೂಲಕ ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ತಮ್ಮ ಮಕ್ಕಳನ್ನು ಉಳಿಸಿಕೊಳ್ಳಲು ನಮ್ಮ ಚುನಾಯಿತ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದೂ ದೂರಿದರು.

ಎಲ್ಲರಿಗೂ ಸಿದ್ದರಾಮಯ್ಯ ಪ್ರಾಮಾಣಿಕತೆ ಅರಿವಿದೆ:

ಕರ್ನಾಟಕದ ಎಲ್ಲರಿಗೂ ಸಿದ್ದರಾಮಯ್ಯನವರ ಪ್ರಾಮಾಣಿಕತೆ ಹಾಗೂ ಅವರು ನಡೆದು ಬಂದ ಹಾದಿಯ ಅರಿವಿದೆ. ಅವರು ಮುಖ್ಯಮಂತ್ರಿ ಪದವಿಗೆ ಹೊಸಬರಲ್ಲ. ಅವರ ರಾಜಕೀಯ ಬದುಕು, ತತ್ವ ಸಿದ್ಧಾಂತ, ಹಿನ್ನೆಲೆ ಎಲ್ಲವೂ ಗೊತ್ತಿದೆ. ಅಂಥವರ ಬಗ್ಗೆ ಬಿಜೆಪಿಯವರು ಭ್ರಷ್ಟಾಚಾರ ಆರೋಪ ಮಾಡುವುದು ಹಾಸ್ಯಾಸ್ಪದ ಎಂದರು.

ಗ್ಯಾರಂಟಿ ಸರ್ಕಾರ ಅಸ್ಥಿರಗೊಳಿಸುವ ಹುನ್ನಾರ: ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಬಡವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳಿಗೆ ರಾಜಕೀಯವಾಗಿ ಇದು ನಷ್ಟ ಉಂಟು ಮಾಡುತ್ತಿದೆ. ಜತೆಗೆ ವಿವಿಧ ಪ್ರಕರಣಗಳ ತನಿಖೆಯಿಂದ ವೈಯಕ್ತಿಕವಾಗಿಯೂ ಅವರಿಗೆ ತೊಂದರೆಯಾಗುತ್ತಿದೆ. ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯ ಆಗಿರುವ ಬಗ್ಗೆಯೂ ಜನ ಆಕ್ರೋಶಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಸರ್ಕಾರ ಅಸ್ಥಿರಗೊಳಿಸುವ ಪಿತೂರಿ ನಡೆಸಿದ್ದಾರೆ ಎಂದು ವೇಣುಗೋಪಾಲ್‌ ಹೇಳಿದರು.

ಬಿಜೆಪಿಯು ಈ ಹಿಂದೆಯೂ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರವನ್ನು ಕದಡುವ ಇತಿಹಾಸ ಹೊಂದಿದೆ. 2018ರಲ್ಲಿ ಕಾಂಗ್ರೆಸ್- ಜೆಡಿಎಸ್‌ ಮೈತ್ರಿ ಸರ್ಕಾರ ಉರುಳಿದ್ದೇ ಬಿಜೆಪಿ ಕೇಂದ್ರ ನಾಯಕತ್ವದ ಪಿತೂರಿಯಿಂದ. ಅದೇ ಉದ್ದೇಶದಿಂದ ಈಗಲೂ ಹುನ್ನಾರ ನಡೆಸಿದ್ದಾರೆ. ರಾಜ್ಯಪಾಲರ ಬಳಕೆ ದುರದೃಷ್ಟಕರ. ದುರದೃಷ್ಟವಶಾತ್‌ ರಾಜ್ಯದ ರಾಜ್ಯಪಾಲರು ಬಿಜೆಪಿ ಪಿತೂರಿಯ ಸಾಧನವಾಗಿ ಬಳಕೆಯಾಗುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಶೋಕಾಸ್‌ ನೋಟಿಸ್‌ ನೀಡಿ ಸರ್ಕಾರದ ಬಗ್ಗೆ ಅಭದ್ರ ಭಾವನೆ ಮೂಡಿಸಲು ಯತ್ನಿಸಲಾಗಿದೆ. ಈ ಬಗ್ಗೆ ಪ್ರತಿ ಕ್ಷೇತ್ರದಲ್ಲೂ ಜನರಿಗೆ ಅರಿವು ಮೂಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಬಿ.ವೈ. ವಿಜಯೇಂದ್ರ ಅವರ ಮೇಲೆ ಎಷ್ಟು ಆರೋಪಗಳಿವೆ? ಪ್ರಜ್ವಲ್‌ ರೇವಣ್ಣ ವಿರುದ್ಧ ಎಷ್ಟು ಆರೋಪಗಳಿವೆ? ಅಂಥವರು ತಮ್ಮ ಜೀವನದುದ್ದಕ್ಕೂ ಜನಪರ ಕಾಳಜಿ, ಪ್ರಾಮಾಣಿಕತೆ ಹೊಂದಿರುವ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸಮಸ್ಯೆ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಿ:ಆರೋಪಗಳ ಕುರಿತು ಕಾನೂನು ತನ್ನದೇ ಕ್ರಮ ವಹಿಸಲಿದೆ. ಕಾನೂನು ಕ್ರಮದ ಬಗ್ಗೆ ನಮಗೆ ಯಾವುದೇ ಅಳುಕಿಲ್ಲ. ನಿಜವಾಗಿಯೂ ಸಮಸ್ಯೆ ಇದ್ದರೆ ಕಾನೂನಿನ ಮೊರೆ ಹೋಗಲಿ. ಅದರ ಬದಲಿಗೆ ಪ್ರತಿದಿನ ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.