ಬಂಜಾರ ಸಮಾಜದ ಮೇಲಿನ ದಬ್ಬಾಳಿಕೆ, ಮತಾಂತರ ತಡೆಯಿರಿ: ಸೇವಾಲಾಲ್ ಸ್ವಾಮೀಜಿ

| Published : Feb 09 2024, 01:45 AM IST

ಬಂಜಾರ ಸಮಾಜದ ಮೇಲಿನ ದಬ್ಬಾಳಿಕೆ, ಮತಾಂತರ ತಡೆಯಿರಿ: ಸೇವಾಲಾಲ್ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬಂಜಾರ ಸಮಾಜದ ಯುವತಿ ಜ್ಯೋತಿಬಾಯಿ ಹಾಗೂ ಆಕೆಯ ಕುಟುಂಬವನ್ನು ಹೆದರಿಸಿ, ಬೆದರಿಸಿ, ವಿವಿಧ ಆಸೆ, ಆಮಿಷವೊಡ್ಡಿ, ಸುಮಾರು 5 ವರ್ಷದಿಂದ ಯುವತಿ ಹಾಗೂ ಆಕೆಯ ಕುಟುಂಬದವರ ಮತಾಂತರ ಮಾಡಿ, ಮದುವೆಗೆ ಒಪ್ಪಿಸಲು ಪ್ರಯತ್ನ ನಡೆದಿದೆ. ಬಿ.ರಾಜಶೇಖರ ತಮ್ಮ ವೈಯಕ್ತಿಕ ದಾಖಲಾತಿ ನೈಜವಾಗಿ ತೋರಿಸದೇ, ಸಮಾಜದ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ. ಜ್ಯೋತಿಬಾಯಿ ಜೊತೆಗೆ ಮದುವೆಯಾಗಿದ್ದನ್ನು ವಿವಾಹ ನೋಂದಣಿ ಮಾಡಿದ್ದನ್ನು ರದ್ದುಪಡಿಸಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಂಜಾರ ಯುವತಿಯನ್ನು ನಂಬಿಸಿ ಆಕೆಯ ತಂದೆ ವಯಸ್ಸಿನ ವ್ಯಕ್ತಿಯೊಬ್ಬ ಮದುವೆಯಾಗಿದ್ದು, ಇಂತಹ ವಿವಾಹ ರದ್ದುಪಡಿಸಿ, ಸಮಾಜದ ಯುವತಿಯ ರಕ್ಷಿಸುವ ಜೊತೆಗೆ ಬಂಜಾರ ಸಮಾಜದ ಮೇಲೆ ನಡೆಯುತ್ತಿರುವ ಅನ್ಯ ಧರ್ಮೀಯರ ದಬ್ಬಾಳಿಕೆ, ಒತ್ತಾಯಪೂರ್ವಕ ಮತಾಂತರ ತಡೆಯುವಂತೆ ಬಂಜಾರ ಸಮಾಜದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂಜಾರ ಸಮಾಜದವರ ಒತ್ತಾಯ ಪೂರ್ವಕವಾಗಿ ಮತಾಂತರ, ಸಮಾಜದವರ ಮೇಲೆ ದೌರ್ಜನ್ಯ ಎಸಗುವುದನ್ನು ಅನ್ಯಧರ್ಮೀಯರು ಮಾಡುತ್ತಿದ್ದಾರೆ. ಈಚೆಗಷ್ಟೇ ಬಂಜಾರ ಯುವತಿಯನ್ನು ನಂಬಿಸಿ, ವಿವಾಹವಾದ ಪ್ರಕರಣ ನಡೆದಿದೆ. ಇದನ್ನು ಸಮಾಜ ಹಾಗೂ ಬಂಜಾರ ಪೀಠ ಗಂಭೀರವಾಗಿ ಪರಿಗಣಿಸಿದೆ ಎಂದರು.

ದಾವಣಗೆರೆಯ ಡಿಎಚ್ಎಂ ಚರ್ಚ್‌ನಲ್ಲಿ ಪಾದ್ರಿಯಾಗಿರುವ ಬಿ.ರಾಜಶೇಖರ ಎಂಬುವರು ಜ.12ರಂದು ಮತಾಂತರ ಮಾಡುವ ದುರುದ್ದೇಶದಿಂದ ಬಂಜಾರ ಸಮುದಾಯದ ಜ್ಯೋತಿಬಾಯಿಗೆ ವಿವಾಹವಾಗಿದ್ದಾರೆ. ಮದುವೆ ನೋಂದಣಿಗೆ ಸಲ್ಲಿಸಿದ ಅರ್ಜಿ ನಮೂನೆಯಲ್ಲಿ ಬಿ.ರಾಜಶೇಖರ ಕುಟುಂಬದವರ ಸಹಿ ಇಲ್ಲ. ಆ ವ್ಯಕ್ತಿಯ ಕುಟುಂಬದ ಸದಸ್ಯರ ಒಪ್ಪಿಗೆಯೂ ಇಲ್ಲ. ಈ ವಿವಾಹದ ಮುಖ್ಯ ಉದ್ದೇಶವೇ ಮತಾಂತರ ಮಾಡುವುದಾಗಿದೆ ಎಂದು ಆರೋಪಿಸಿದರು.

ಡಿಸಿ, ಎಸ್‌ಪಿಗೆ ಮನವಿ ಸಲ್ಲಿಸುವೆ:

ಬಂಜಾರ ಸಮಾಜದ ಯುವತಿ ಜ್ಯೋತಿಬಾಯಿ ಹಾಗೂ ಆಕೆಯ ಕುಟುಂಬವನ್ನು ಹೆದರಿಸಿ, ಬೆದರಿಸಿ, ವಿವಿಧ ಆಸೆ, ಆಮಿಷವೊಡ್ಡಿ, ಸುಮಾರು 5 ವರ್ಷದಿಂದ ಯುವತಿ ಹಾಗೂ ಆಕೆಯ ಕುಟುಂಬದವರ ಮತಾಂತರ ಮಾಡಿ, ಮದುವೆಗೆ ಒಪ್ಪಿಸಲು ಪ್ರಯತ್ನ ನಡೆದಿದೆ. ಬಿ.ರಾಜಶೇಖರ ತಮ್ಮ ವೈಯಕ್ತಿಕ ದಾಖಲಾತಿ ನೈಜವಾಗಿ ತೋರಿಸದೇ, ಸಮಾಜದ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ. ಜ್ಯೋತಿಬಾಯಿ ಜೊತೆಗೆ ಮದುವೆಯಾಗಿದ್ದನ್ನು ವಿವಾಹ ನೋಂದಣಿ ಮಾಡಿದ್ದನ್ನು ರದ್ದುಪಡಿಸಬೇಕು. ತಪ್ಪು ಮಾಹಿತಿ ನೀಡಿ, ವಂಚನೆ ಮಾಡಿರುವ ಬಿ.ರಾಜಶೇಖರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದರು.

ರಾಜಶೇಖರ್‌ ಕುಟುಂಬದ ಸದಸ್ಯರ ಒಪ್ಪಿಗೆ ಇಲ್ಲ:

ವಿವಾಹ ನೋಂದಣಿಯ ವೇಳೆ ಬಿ.ರಾಜಶೇಖರ ತಮ್ಮದು ಸ್ವಯಂ ಉದ್ಯೋಗವೆಂದು ದಾಖಲಿಸಿದ್ದು, ಚರ್ಚ್‌ನಲ್ಲಿ ಪಾದ್ರಿಯಾಗಿ 25 ವರ್ಷದಿಂದಲೂ ಇದ್ದಾರೆ. 32 ವರ್ಷದ ಮಗಳಿರುವ ಬಿ.ರಾಜಶೇಖರ್‌ಗೆ ಈಗ 57 ವರ್ಷ ವಯಸ್ಸಾಗಿದೆ. ಸ್ವತಃ ರಾಜಶೇಖರ ಮಗಳೇ ಲಂಬಾಣಿ ಸಮಾಜದ ಜ್ಯೋತಿಬಾಯಿ ಜೊತೆ ತನ್ನ ತಂದೆ ಮದುವೆಯಾಗಲು ಒಪ್ಪಿಗೆ ಕೊಟ್ಟಿಲ್ಲ. ಮಗಳ ವಯಸ್ಸಿನ ಯುವತಿ ಜೊತೆಗೆ ರಾಜಶೇಖರ ವಿವಾಹ ಆಗಲು ಸ್ವತಃ ಆ ವ್ಯಕ್ತಿಯ ಕುಟುಂಬದ ಸದಸ್ಯರಿಂದಲೇ ಒಪ್ಪಿಗೆ ಇಲ್ಲ. ಇಂತಹ ವ್ಯಕ್ತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.

ಬಂಜಾರ ಸಮಾಜದ ಮುಖಂಡರಾದ ಎನ್.ಹನುಮಂತ ನಾಯ್ಕ, ಮಂಜಾನಾಯ್ಕ, ರಮೇಶ ನಾಯ್ಕ, ರವೀಂದ್ರನಾಥ, ಲಿಂಗರಾಜ ನಾಯ್ಕ, ಲಿಂಬ್ಯಾನಾಯ್ಕ, ರವಿನಾಯ್ಕ, ಮುರುಗೇಶ ಹುಲಿಕಟ್ಟೆ, ಹಿಂದು ಜಾಗರಣಾ ವೇದಿಕೆ ಮುಖಂಡ ಸತೀಶ ಪೂಜಾರಿ ಇತರರಿದ್ದರು.

ಮಹಿಳೆಯರಿಗೆ ಕಿರುಕುಳ

ಬಂಜಾರ ಸಂಸ್ಕೃತಿ, ಬಂಜಾರ ಧರ್ಮ ನಾಶಪಡಿಸುವ ದುರುದ್ದೇಶದಿಂದ ಮತಾಂತರ ಮಾಡಿಸಿ, ತನ್ನ ಹಣಬಲ, ತೋಳ್ಬಲದ ಜೊತೆಗೆ ಧರ್ಮದ ಮುಖವಾಡ ಧರಿಸಿ, ಸಾಕಷ್ಟು ಮಹಿಳೆಯರಿಗೆ ಲೈಂಗಿಕ, ಮಾನಸಿಕ, ದೈಹಿಕವಾಗಿ ಕಿರುಕುಳ ನೀಡಿದ್ದು, ಇಂತಹ ವ್ಯಕ್ತಿ ಹಾಗೂ ಜೊತೆಗಿರುವ ರೌಡಿ ಪಟಾಲಂಗೆ ಹೆದರಿ ಯಾರೂ ಸಮಾಜದ ಮುಂದೆ ಬಂದು, ಇಂತಹ ವ್ಯಕ್ತಿಯಿಂದ ಆದ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿಲ್ಲ. ದೌರ್ಜನ್ಯ ಪ್ರಶ್ನಿಸುತ್ತಿಲ್ಲ.

ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಬಂಜಾರ ಸಮಾಜ