ಸಾರಾಂಶ
ಭಟ್ಕಳ: ತಾಲೂಕಿನ ಹೇರೂರು ಸಭಾಭವನದಲ್ಲಿ ಅತಿಕ್ರಮಣ ಹೋರಾಟಗಾರರ ಸಭೆ ತಾಲೂಕು ಅತಿಕ್ರಮಣ ಹೋರಾಟ ಸಮಿತಿ ಅಧ್ಯಕ್ಷ ರಾಮಾ ಮೊಗೇರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಅತಿಕ್ರಮಣದಾರರನ್ನುದ್ದೇಶಿಸಿ ಮಾತನಾಡಿದ ರಾಮಾ ಮೊಗೇರ, ಅತಿಕ್ರಮಣದಾರರು ತಮ್ಮ ತಾತ ಮುತ್ತಾತನ ಕಾಲದಿಂದಲೂ ಅರಣ್ಯಭೂಮಿಯಲ್ಲಿ ಮನೆ, ತೋಟ ನಿರ್ಮಿಸಿಕೊಂಡು ವಾಸ್ತವ್ಯ ಮಾಡುತ್ತಿದ್ದಾರೆ. ಇವರು ಹೊರಗಿನಿಂದ ಬಂದು ಜಮೀನು ಕಬಳಿಸಿದವರಲ್ಲ, ಇಲ್ಲಿಯ ಹುಟ್ಟಿ ಇಲ್ಲಿಯೇ ಬೆಳೆದು ತಮ್ಮ ಅಗತ್ಯಕ್ಕೋಸ್ಕರ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿ, ಕೃಷಿ ಮಾಡಿ ಬಂದಿದ್ದಾರೆ. ಅವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಾಹ್ಯ ವ್ಯಕ್ತಿಗಳಂತೆ, ಯಾವುದೋ ಕೃತ್ಯ ಎಸಗಿದ ಅಪರಾಧಿಗಳಂತೆ ಕಾಣುವುದು ಸರಿಯಲ್ಲ. ಈಗಾಗಲೇ ಸಚಿವ ಮಂಕಾಳ ವೈದ್ಯ, ಶಾಸಕ ಆರ್.ವಿ. ದೇಶಪಾಂಡೆ ಸೇರಿದಂತೆ ಹಿರಿಯರೆಲ್ಲಾ ಸೇರಿ ಅತಿಕ್ರಮಣದಾರರು ಇರುವಲ್ಲಿ ಜಿಪಿಎಸ್ ಮಾಡಿಕೊಡುವಂತೆ ಸೂಚಿಸಿದಂತೆ ಅನೇಕರಿಗೆ ಜಿಪಿಎಸ್ ಆಗಿದೆ, ಇನ್ನೂ ಅನೇಕರಿಗೆ ಜಿಪಿಎಸ್ ಮಾಡಿಕೊಡಬೇಕಾಗಿದೆ ಎಂದರು.ಅರಣ್ಯ ಅತಿಕ್ರಮಣದಾರರಿಗೆ ವಿನಾಕಾರಣ ಅರಣ್ಯಾಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯಿಂದ ಅರಣ್ಯವಾಸಿಗಳಿಗೆ, ಜನವಸತಿ ಇರುವ ಪ್ರದೇಶದಲ್ಲಿ ವಾಸ ಮಾಡುವವರಿಗೂ ತೀವ್ರ ತೊಂದರೆಯಾಗಲಿದೆ. ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ನಾವು ಮನವಿ ಮಾಡಿದಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ರಾಜ್ಯ ಸರ್ಕಾರದಿಂದ ವರದಿ ಹೋಗಿದೆ. ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಮನವಿ ಮಾಡಿದ್ದೇವೆ ಎಂದರು.ಅರಣ್ಯ ಅಧಿಕಾರಿಗಳು ಅತಿಕ್ರಮಣದಾರರ ಮೇಲೆ ದಬ್ಬಾಳಿಕೆ ಮಾಡಿದರೆ ನಾವು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ರೈತರಿಗೆ ಕಾಡುಪ್ರಾಣಿಗಳಿಂದ ಆಗುತ್ತಿರುವ ತೊಂದರೆಗೆ ಅರಣ್ಯಾಧಿಕಾರಿಗಳು ಸ್ಪಂದಿಸಬೇಕು. ನವಿಲು, ಮಂಗ, ಹಂದಿ, ಚಿರತೆ ಸೇರಿದಂತೆ ಅನೇಕ ಕಾಡುಪ್ರಾಣಿಗಳು ಹಾವಳಿ ಮಾಡುತ್ತಿದ್ದು, ರೈತರು ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ ಎಂದೂ ದೂರಿದರು. ಈಗಾಗಲೇ ಸಿಂಗಳೀಕ ಪ್ರದೇಶ ಎಂದು ಗುರುತು ಮಾಡಲಾಗಿದ್ದು, ಸಿಂಗಳೀಕದ ಸಂಖ್ಯೆ ಅತಿ ವಿರಳವಾಗಿರುವಾಗ ಈ ರೀತಿ ಪ್ರದೇಶಗಳನ್ನು ಗುರುತಿಸುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದ ಅವರು, ಅದನ್ನೂ ತಕ್ಷಣ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.
ಅರಣ್ಯ ಹಕ್ಕು ಕಾನೂನಿನಲ್ಲಿ ಪರಿಶಿಷ್ಟ ಜಾತಿಯವರಿಗೆ ಒಂದು ತಲೆಮಾರು (೨೫ ವರ್ಷ)ದ ದಾಖಲೆಯ ಮೇಲೆ ಮಂಜೂರಿ ಮಾಡುವ ಅಧಿಕಾರ ಇರುವುದನ್ನು ಇತರೆಯವರಿಗೂ ವಿಸ್ತರಣೆ ಮಾಡಿ ಮಂಜೂರಿ ಮಾಡಿಕೊಡಬೇಕು ಎಂದರು.ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಶ್ರೀಧರ ಹೆಬ್ಬಾರ್, ಭಾಸ್ಕರ ಮೊಗೇರ, ಸುಲೇಮಾನ್ ಸಾಬ್, ಗಣಪತಿ ನಾಯ್ಕ ಜಾಲಿ ಮಾತನಾಡಿದರು. ಪ್ರಮುಖರಾದ ಖಯ್ಯೂಮ್ ಸಾಬ್, ನಾಗೇಶ ದೇವಡಿಗ, ಮಂಜುನಾಥ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))