ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯಲ್ಲಿ ಮಂಗಳವಾರ ಮಧ್ಯಾಹ್ನ ವರೆಗೆ ಬಿಡುವು ಪಡೆದ ಮಳೆ, ಸಂಜೆಯಿಂದ ಬಿರುಸುಗೊಂಡಿದೆ. ಭಾರತೀಯ ಹವಾಮಾನ ಇಲಾಖೆ ಜು.10ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯಾದ್ಯಂತ ಮಂಗಳವಾರ ಸಂಜೆಯಿಂದ ಆಗಾಗ ಹಗುರದಿಂದ ಸಾಧಾರಣ ಮಳೆ ಕಾಣಿಸಿದೆ. ರೆಡ್‌ಅಲರ್ಟ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದ.ಕ.ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಂದಿಲ್ಲ. ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗಿತ್ತು.ಮಂಗಳವಾರ ಮಧ್ಯಾಹ್ನ ವರೆಗೆ ಬಿಸಿಲು ಸಹಿತ ಮೋಡ, ಅಲ್ಲಲ್ಲಿ ತುಂತುರು ಹನಿ ಕಂಡುಬಂದಿತ್ತು. ಮಧ್ಯಾಹ್ನ ಎಲ್ಲೆಡೆ ಮಳೆಯ ವಾತಾವರಣ. ಸಂಜೆಯಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಮಳೆ ಸುರಿಯಲಾರಂಭಿಸಿದೆ. ಕರಾವಳಿ ಜಿಲ್ಲೆಗಳಾದ್ಯಂತ ಮುಂದಿನ 4 ದಿನ ಸಾಧಾರಣ ಮಳೆಯ ಮುನ್ಸೂಚನೆ ಇದೆ.ಮಂಗಳೂರು ಗರಿಷ್ಠ ಮಳೆ: ಮಂಗಳವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಮಂಗಳೂರಿನಲ್ಲಿ ಗರಿಷ್ಠ 80.7 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 52.3 ಮಿ.ಮೀ. ಮಳೆಯಾಗಿದೆ.
ಬೆಳ್ತಂಗಡಿಯಲ್ಲಿ 57 ಮಿ.ಮೀ, ಬಂಟ್ವಾಳದಲ್ಲಿ 68.1 ಮಿ.ಮೀ, ಪುತ್ತೂರು 41.8 ಮಿ.ಮೀ, ಸುಳ್ಯ 27.6 ಮಿ.ಮೀ, ಮೂಡುಬಿದಿರೆ 52.7 ಮಿ.ಮೀ, ಕಡಬ 39.8 ಮಿ.ಮೀ, ಮೂಲ್ಕಿ 78.8 ಮಿ.ಮೀ ಹಾಗೂ ಉಳ್ಳಾಲದಲ್ಲಿ 63.7 ಮಿ.ಮೀ ಮಳೆಯಾಗಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ 25.9 ಮೀಟರ್ ಹಾಗೂ ತುಂಬೆಯಲ್ಲಿ ನೇತ್ರಾವತಿ ನದಿ 3.4 ಮೀಟರ್‌ನಲ್ಲಿ ಹರಿಯುತ್ತಿದೆ.ಬಂಟ್ವಾಳದಲ್ಲಿ ಸಂಜೆಯ ಬಳಿಕ ಮಳೆ ಚುರುಕುಬಂಟ್ವಾಳ; ಮಂಗಳವಾರ ಸಂಜೆಯವರೆಗೂ ವಿರಾಮ ಪಡೆದುಕೊಂಡಿದ್ದ ಮಳೆ ಸಂಜೆಯ ಬಳಿಕ ಚುರುಕು ಪಡೆಯಿತು. ತಾಲೂಕಿನ ಪುದು ಗ್ರಾಮದ ಮೂರು ಮನೆಗಳಿಗೆ ಹಾನಿಯಾದ ಬಗ್ಗೆ ಕಂದಾಯ ಇಲಾಖೆ ತಿಳಿಸಿದೆ. ಪುದು ಗ್ರಾಮದ ಸುಜೀರು ಕೊಡಂಗೆ ನಿವಾಸಿ ಬೀಪಾತುಮ್ಮಾ ಎಂಬವರ ಮನೆ ಪಕ್ಕದ ಬರೆ ಕುಸಿದ ಪರಿಣಾಮ, ಮನೆಗೆ ಹಾನಿಯಾಗಿದೆ, ಇಲ್ಲಿನ ಸುಜೀರು ಬದುಗುಡ್ಡೆ ಹಸೀನಾ ಎಂಬವರ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ಇಲ್ಲಿನ ಆಸಿಯಮ್ಮ ಎಂಬವರ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದ ಬಗ್ಗೆ ವರದಿಯಾಗಿದೆ.