ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಭಾಷೆ ಭಾವನೆಗಳನ್ನು ವ್ಯಕ್ತಪಡಿಸಲು ಇರುವ ಮಾಧ್ಯಮ. ಹಾಗಾಗಿ ಪಠ್ಯ ವಿಷಯಗಳನ್ನು ಬೋಧಿಸುವ ಬೋಧಕರು ಭಾವನಾತ್ಮಕವಾಗಿ, ಸೃಜನಶೀಲತೆಯೊಂದಿಗೆ ವಿಷಯವನ್ನು ವಿದ್ಯಾರ್ಥಿಗಳ ಮನಸ್ಸಿಗೆ ಇಳಿಯುವಂತೆ ಬೋಧಿಸಬೇಕು ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು.ನಗರದ ಕ್ರೈಸ್ಟ್ ಕಾಲೇಜಿನಲ್ಲಿ ದಶಮಾನೋತ್ಸವ ಪ್ರಯುಕ್ತ ಕಾಲೇಜಿನ ಭಾಷಾ ವಿಭಾಗವು ''''''''''''''''ಕನ್ನಡ ಭಾಷಾ ಬೋಧನೆಯ ಹೊಸ ಸವಾಲುಗಳು ಮತ್ತು ಸಾಧ್ಯತೆಗಳು'''''''''''''''' ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟ್ರ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಭಾಷಾ ಬೋಧನೆ ಮಾಡುವಾಗ ಜೀವನ ಮೌಲ್ಯಗಳನ್ನು, ಮಾನವೀಯ ಮೌಲ್ಯಗಳನ್ನು ತಿಳಿಸಬೇಕು ಹಾಗೂ ನಿರಂತರ ಅಧ್ಯಯನದಲ್ಲಿ ಅಧ್ಯಾಪಕರು ತೊಡಗಬೇಕು ಎಂದರು.ಪ್ರಾಸ್ತಾವಿಕ ಭಾಷಣ ಮಾಡಿದ ಸಂಚಾಲಕ ವೇದರಾಜ್ ಕೂರಗಲ್, ನಮ್ಮ ಕ್ರೈಸ್ಟ್ ಕಾಲೇಜು ಈ ಶೈಕ್ಷಣಿಕ ವರ್ಷದಲ್ಲಿ ದಶಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿದೆ. ಇದರ ಪ್ರಯುಕ್ತವಾಗಿ ಭಾಷಾ ವಿಭಾಗ ಈ ಕಾರ್ಯಾಗಾರವನ್ನು ಏರ್ಪಡಿಸಿದೆ. ಇತ್ತೀಚೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡವೆಂದರೆ ಮೂಗು ಮುರಿಯುವ ಪರಿಸ್ಥಿತಿ ಇರುವಾಗ ಕ್ರೈಸ್ಟ್ ಕಾಲೇಜು ಎಲ್ಲ ಭಾಷೆಗಳಿಗೂ ಸಮಾನವಾದ ಅವಕಾಶ ನೀಡುತ್ತಿದೆ. ಅದರಲ್ಲೂ ಕನ್ನಡ ಭಾಷೆಗೆ ವಿಶೇಷ ಅವಕಾಶ ನೀಡುವ ಮೂಲಕ ಇಂತಹ ಕಾರ್ಯಕ್ರಮಗಳನ್ನು ರೂಪಿಸಲು ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು.ಗೋಷ್ಠಿ ಒಂದರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೇಲೂರು ಸರ್ಕಾರಿ ಪಾಲಿಟೆಕ್ನಿಕ್ ನ ಹಿರಿಯ ಶ್ರೇಣಿ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಮಾತನಾಡಿ, ಬೋಧಕರಿಗೆ ತಂತ್ರಜ್ಞಾನದ ಕೊರತೆ, ತರಬೇತಿ ನಿರಂತರವಾಗಿ ಇಲ್ಲದಿರುವುದು, ಇಂದಿನ ವಿದ್ಯಾರ್ಥಿಗಳ ಮನಸ್ಸನ್ನು ತಮ್ಮ ಕಡೆಗೆ ಸೆಳೆಯಲು ಸಾಧ್ಯವಾಗದಿರುವುದು, ಸಾಮಾಜಿಕ ಮಾಧ್ಯಮ ಮಾಧ್ಯಮಗಳ ಆರ್ಭಟ ಹೀಗೆ ಹಲವಾರು ಹೊಸ ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ತಿಳಿಸಿದರು.ಗೋಷ್ಠಿ ಎರಡರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮದ್ರಾಸ್‌ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ರಂಗಸ್ವಾಮಿ, ಸರ್ಕಾರ ಮತ್ತು ಸಂಸ್ಥೆಗಳು ಬೋಧಕರಿಗೆ ನಿರಂತರ ತರಬೇತಿ ನೀಡುವ ಮೂಲಕ ಪ್ರಸ್ತುತ ಕಾಲಘಟ್ಟದ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯಕ್ಕೆ ತಕ್ಕಂತೆ ಬೋಧಿಸಲು ಅನುವು ಮಾಡಿಕೊಡಬೇಕು. ಬೋಧಕರು ತಂತ್ರಜ್ಞಾನ ಬಳಸುವುದರ ಜೊತೆಗೆ ಸ್ಮಾರ್ಟ್ ತರಗತಿ ಕೊಠಡಿಗಳನ್ನು ಬಳಸಬೇಕು ಎಂದು ತಿಳಿಸಿದರು.ಸಮಾರೋಪ ಭಾಷಣಕಾರರಾಗಿ ಆಗಮಿಸಿದ್ದ ವಿದ್ವಾಂಸ ಪ್ರೊ.ಸಿ.ಪಿ. ಸಿದ್ದಾಶ್ರಮ ಅವರು, ಬೋಧಕರು ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಪಠ್ಯಗಳನ್ನು ಬೋಧಿಸುವಾಗ ಆಯಾ ಕಾಲಘಟ್ಟದ ವಾಸ್ತವ ಸ್ಥಿತಿಗತಿಗಳನ್ನು ವಿದ್ಯಾರ್ಥಿಗಳಿಗೆ ಅರ್ಥೈಸಬೇಕು ಹಾಗೂ ಭಾಷಾ ಬೋಧಕರು ಸಾಹಿತ್ಯವನ್ನು ಬೋಧಿಸವುದರಿಂದ ಪುಣ್ಯವಂತರು ಎಂದು ತಿಳಿಸಿದರು.ಕನ್ನಡ ಭಾಷೆಗೆ ಕ್ರಿಸ್ಚಿಯನ್ ಮಿಷನರಿಗಳು ಅಪಾರ ಕೊಡುಗೆಯನ್ನು ನೀಡಿವೆ. ಕಿಟೆಲ್ ಮತ್ತು ಬಿ.ಎಲ್. ರೈಸ್ ಕನ್ನಡ ಭಾಷೆಗೆ ಕೊಟ್ಟಿರುವ ಕೊಡುಗೆಯಿಂದ ಕನ್ನಡ ಭಾಷೆ ಇರುವವರೆಗೂ ಅವರು ಬದುಕಿರುತ್ತಾರೆ ಎಂದು ತಿಳಿಸಿದರು. ಕಾಲೇಜಿನ ಉಪ ಪ್ರಾಂಶುಪಾಲ ಫಾ. ರೆಜೋ ಜೆಕಬ್, ಭಾಷಾ ವಿಭಾಗದ ಅಧ್ಯಾಪಕರಾದ ಎಂ.ಎಸ್. ಲಕ್ಷ್ಮೀ, ರಂಜಿತಾ, ಬಿ.ಬಿ. ಸೌಬಿಯಾ, ವಿಜಯಾ, ಮಿಸ್ಬಾ ಪಹರಿನ್, ಅನಿನಾ ಹಾಗೂ ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.