ಸಾರಾಂಶ
ಚಿಕ್ಕಮಗಳೂರು ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ । ಕಾಮಗಾರಿ ವೀಕ್ಷಿಸಿದ ಸಚಿವರು,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಲೋಕಸಭಾ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ರೈಲ್ವೆ ವಿಭಾಗೀಯ ವ್ಯವಸ್ಥಾಪಕರು (ಡಿಆರ್‌ಎಂ) ಒಳಗೊಂಡ ಸಲಹಾ ಸಮಿತಿ ರಚನೆ ಮಾಡಲು ಸಧ್ಯದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.ಕಡೂರು - ಚಿಕ್ಕಮಗಳೂರು ರೈಲ್ವೆ ಮಾರ್ಗ ಮೇಲ್ದರ್ಜೆಗೆ ಹಾಗೂ ಚಿಕ್ಕಮಗಳೂರು - ಬೇಲೂರು - ಹಾಸನ ನೂತನ ರೈಲ್ವೆ ಮಾರ್ಗದ ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಲಹಾ ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಇಲಾಖೆಗೆ ವರದಿ ಕಳುಹಿಸಬೇಕೆಂದು ಸೂಚನೆ ನೀಡಲಾಗುವುದು ಎಂದರು.ರಾಜ್ಯದ 59 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ 54 ರೈಲ್ವೆ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇವುಗಳಲ್ಲಿ ಚಿಕ್ಕಮಗಳೂರು ನಿಲ್ದಾಣವೂ ಸಹ ಒಂದಾಗಿದೆ. ಇದಕ್ಕೆ ಈಗಾಗಲೇ 26 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.ಜಿಲ್ಲಾ ಕೇಂದ್ರದಲ್ಲಿರುವ ರೈಲ್ವೆ ನಿಲ್ದಾಣಗಳು ಎಲ್ಲಾ ಮೂಲಭೂತ ಸವಲತ್ತುಗಳನ್ನು ಹೊಂದಿರಬೇಕು. ಪ್ರಮುಖವಾಗಿ ಮೀಟಿಂಗ್ ರೂಂ, ಶೌಚಾಲಯ ಕೊಠಡಿಗಳು, ಚಿಕ್ಕದಾದ ರೆಸ್ಟೋರೆಂಟ್, ಟಿಕೆಟ್ ಕೌಂಟರ್ ತೆರೆಯಲು ಉದ್ದೇಶಿಸಲಾಗಿದೆ ಎಂದರು.ಚಿಕ್ಕಮಗಳೂರಿನಿಂದ ಬೇಲೂರು, ಅರೇಹಳ್ಳಿ ಮಾರ್ಗವಾಗಿ ಹಾಸನಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರ ಕಾರ್ಯವೂ ಕೂಡ ಮುಗಿದಿದೆ ಎಂದು ಹೇಳಿದರು.ಹಾಸನ ಜಿಲ್ಲೆಯಲ್ಲಿ ರೈತರಿಂದ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿಲ್ಲ, ಸುಮಾರು 300 ಎಕರೆ ಭೂಮಿ ಬೇಕಾಗಿದ್ದು, ಇನ್ನು ಏಳೆಂಟು ದಿನಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ ಎಂದ ಅವರು, ರೈಲ್ವೆ ಯೋಜನೆಗೆ ಭೂಮಿ ಕೊಡುವ ರೈತರಿಗೆ ನಿಗದಿಗಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡಲಾಗುತ್ತಿದೆ ಎಂದರು.ರೈಲ್ವೆ ಕಾಮಗಾರಿಗೆ ರಾಜ್ಯ ಸರ್ಕಾರ ಭೂಮಿ ಕೊಡಬೇಕೆಂದು ಈಗಾಗಲೇ ಮನವಿ ಮಾಡಿದ್ದೇವೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಈ ಸಂಬಂಧ ಅವರು ಈಗಾಗಲೇ ಜಿಲ್ಲಾಧಿಕಾರಿಗಳ ಸಭೆ ಕರೆದು ಸೂಚನೆ ನೀಡಿದ್ದಾರೆ ಎಂದ ಸಚಿವ ಸೋಮಣ್ಣ, ಪ್ರತಿ ತಾಲೂಕು ಕೇಂದ್ರಗಳಿಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕು ಎಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ. ಇದರಿಂದ ಬಡವರಿಗೆ ಕಡಿಮೆ ದರದಲ್ಲಿ ಪ್ರಯಾಣಿಸಲು ಅನುಕೂಲವಾಗಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ಬೇಲೂರು ಕ್ಷೇತ್ರದ ಶಾಸಕ ಸುರೇಶ್, ನೈರುತ್ಯ ರೈಲ್ವೆಯ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರ್‌ವಾಲ್, ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಸತ್ಯಪ್ರಕಾಶ್ ಶಾಸ್ತ್ರೀ, ಮುಖ್ಯ ಆಡಳಿತಾಧಿಕಾರಿ (ಕಾಮಗಾರಿ) ರಾಮ್ ಗೋಪಾಲ್ ಹಾಗೂ ರೈಲ್ವೆ ಅಧಿಕಾರಿಗಳು ಹಾಜರಿದ್ದರು. 18 ಕೆಸಿಕೆಎಂ 1ಚಿಕ್ಕಮಗಳೂರಿನ ರೈಲ್ವೆ ನಿಲ್ದಾಣಕ್ಕೆ ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಗುರುವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರ್‌ವಾಲ್ ಮಾಹಿತಿ ನೀಡಿದರು. ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಇದ್ದರು.