ಸಂಘದ ಆಡಳಿತ ಮಂಡಳಿಗೆ ಯಾವುದೇ ಮಾಹಿತಿ ಹಾಗೂ ನೋಟಿಸ್ ನೀಡದೆ ಪಾಂಡವಪುರ ಸಹಾಯಕ ನಿಬಂಧಕರು ವಿಚಾರಣೆಗೆ ಹಾಜರಾಗುವಂತೆ ಡೇರಿ ಮಾಜಿ ಕಾರ್ಯದರ್ಶಿಗೆ ನೀಡಿರುವ ಆದೇಶವನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿ ಮಾಡರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿರ್ದೇಶಕರು ಪ್ರತಿಭಟನೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಂಘದ ಆಡಳಿತ ಮಂಡಳಿಗೆ ಯಾವುದೇ ಮಾಹಿತಿ ಹಾಗೂ ನೋಟಿಸ್ ನೀಡದೆ ಪಾಂಡವಪುರ ಸಹಾಯಕ ನಿಬಂಧಕರು ವಿಚಾರಣೆಗೆ ಹಾಜರಾಗುವಂತೆ ಡೇರಿ ಮಾಜಿ ಕಾರ್ಯದರ್ಶಿಗೆ ನೀಡಿರುವ ಆದೇಶವನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿ ಪಟ್ಟಣದ ಸಹಕಾರ ಇಲಾಖೆಗೆ ಮುತ್ತಿಗೆ ಹಾಕಿ ತಾಲೂಕಿನ ಮಾಡರಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿರ್ದೇಶಕರು ಪ್ರತಿಭಟನೆ ನಡೆಸಿದರು.ಸಂಘದ ಮಾಜಿ ಕಾರ್ಯದರ್ಶಿ ಚಿಕ್ಕತಾಯಮ್ಮ ಕಳೆದ ಆ.17ರಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಕರ್ತವ್ಯಕ್ಕೆ ಗೈರಾಗಿದ್ದಾರೆ. ಜತೆಗೆ ಸಂಘದ ದಾಖಲಾತಿಗಳನ್ನೂ ಹಸ್ತಾಂತರಿಸದೆ ಉದ್ದಟತನ ಪ್ರದರ್ಶಿಸಿದ್ದಾರೆ. ಸಂಘದ ಹಲವು ವರ್ಷಗಳ ದಾಖಲಾತಿಗಳು ತಮ್ಮ ಮನೆಯಲ್ಲಿವೆ ಎಂದು ಆಡಳಿತ ಮಂಡಳಿ ಸಮ್ಮುಖದಲ್ಲೇ ತಿಳಿಸಿದ್ದಾರೆ.
ಆದರೆ, ಈವರೆಗೂ ಕ್ಯಾಷ್ ಬುಕ್, ಲೆಡ್ಜರ್, ಮಿನಿಟ್ಸ್ ಬುಕ್, ಬ್ಯಾಂಕ್ ದಾಖಲೆಗಳು, ಸದಸ್ಯರ ದಾಖಲೆಗಳು, ಪಾವತಿ ದಾಖಲೆ ಸೇರಿದಂತೆ ಇತರೆ ಪ್ರಮುಖ ದಾಖಲಾತಿ ಸಂಘಕ್ಕೆ ಹಸ್ತಾಂತರಿಸಿಲ್ಲ. ಹೀಗಾಗಿ ಸಂಘದ ದೈನಂದಿನ ಆಡಳಿತ, ಲೆಕ್ಕಪತ್ರ ನಿರ್ವಹಣೆ ಹಾಗೂ ವಾರ್ಷಿಕ ಲೆಕ್ಕ ಪರಿಶೋಧನೆಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.ಇದೀಗ ಸಹಾಯಕ ನಿಬಂಧಕರ ಆದೇಶ ನೀಡಿದ್ದಾರೆ ಎಂದು ಮಾಜಿ ಕಾರ್ಯದರ್ಶಿ ಸಂಘಕ್ಕೆ ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ತಾತ್ಕಾಲಿಕ ಕಾರ್ಯದರ್ಶಿ ಎಂ.ಜೆ.ಪಲ್ಲವಿ ಹಾಗೂ ತಾತ್ಕಾಲಿಕ ಹಾಲು ಪರೀಕ್ಷಕಿ ವನಜಾಕ್ಷಿ ಅವರಿಗೆ ಆದೇಶದ ಪ್ರತಿ ನೀಡಿ ವಿಚಾರಣೆಗೆ ಆಗಮಿಸುವಂತೆ ತಿಳಿಸಿರುವುದು ಸರಿಯಲ್ಲ. ಜೊತೆಗೆ ಸಹಾಯಕ ನಿಬಂಧಕರು ರಾಜಕೀಯ ಒತ್ತಡಕ್ಕೆ ಮಣಿದು ಆದೇಶ ಮಾಡಿರುವುದು ಸಮಂಜಸವಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಮಾಜಿ ಕಾರ್ಯದರ್ಶಿಯವರ ಕರ್ತವ್ಯ ಗೈರು, ಸಂಘದ ದಾಖಲೆ ಹಸ್ತಾಂತರಿಸದಿರುವುದು, ಸಂಘದ ಆಡಳಿತಕ್ಕೆ ಉಂಟಾಗಿರುವ ತೊಂದರೆ ಹಾಗೂ ಆಡಳಿತ ಮಂಡಳಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯದೆ ಕೇವಲ ಮಾಜಿ ಕಾರ್ಯದರ್ಶಿ ಹೇಳಿಕೆ ಆಧರಿಸಿ ಸಹಾಯಕ ನಿಬಂಧಕರು ಏಕಾಏಕಿ ನಿರ್ಧಾರ ಕೈಗೊಳ್ಳುವುದು ಸಂಘದ ಹಿತಾಸಕ್ತಿಗೆ ಧಕ್ಕೆಯಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಹೇಳಿಕೆ, ಆಕ್ಷೇಪಣೆ ಮತ್ತು ಅಗತ್ಯ ದಾಖಲೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಹಾಯಕ ನಿಬಂಧಕರು ಮಾಜಿ ಕಾರ್ಯದರ್ಶಿ ವಶದಲ್ಲಿರುವ ಎಲ್ಲಾ ಮೂಲ ದಾಖಲೆಗಳನ್ನು ಸಂಘಕ್ಕೆ ಹಸ್ತಾಂತರಿಸುವಂತೆ ನಿರ್ದೇಶನ ನೀಡಬೇಕು. ಅವರ ಕರ್ತವ್ಯ ಗೈರು, ದಾಖಲೆ ಹಸ್ತಾಂತರಿಸದಿರುವ ಕುರಿತು ಸಂಘದ ಆಡಳಿತ ನೀಡಿರುವ ನೋಟಿಸ್ ಹಾಗೂ ಕೈಗೊಂಡಿರುವ ಕ್ರಮವನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ತಾತ್ಕಾಲಿಕ ಕಾರ್ಯದರ್ಶಿ ಹಾಗೂ ತಾತ್ಕಾಲಿಕ ಹಾಲು ಪರೀಕ್ಷಕಿ ಕರ್ತವ್ಯ ನಿರ್ವಹಣೆಯನ್ನು ಹಿಂದಿನ ಅವಧಿಯ ಜವಾಬ್ದಾರಿಗಳಿಂದ ಪ್ರತ್ಯೇಕವಾಗಿ ಪರಿಗಣಿಸಬೇಕು. ಆಡಳಿತ ಮಂಡಳಿ ಹೇಳಿಕೆ ಮತ್ತು ದಾಖಲೆ ಪರಿಶೀಲಿಸದೆ ಯಾವುದೇ ಏಕಪಕ್ಷೀಯ ಅಂತಿಮ ನಿರ್ಧಾರ ಕೈಗೊಳ್ಳಬಾರದು. ಈ ಆಕ್ಷೇಪಣೆ ಮತ್ತು ಮರುಪರಿಶೀಲನೆ ಮನವಿ ಬಗ್ಗೆ ತೀರ್ಮಾನವಾಗುವವರೆಗೂ ವಿವಾದಿತ ಆದೇಶದ ಮುಂದಿನ ಕ್ರಮಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಒತ್ತಾಯಿಸಿಸಿದರು.ಸಂಘದ ಹಿತಾಸಕ್ತಿಗಾಗಿ ಕೈಗೊಂಡಿರುವ ಕ್ರಮಗಳನ್ನು ಪರಿಗಣಿಸಿ ಸಂಘದ ಆಡಳಿತ ಮಂಡಳಿ ಮತ್ತು ಹಾಲು ಉತ್ಪಾದಕರ ವ್ಯವಹಾರಗಳಿಗೆ ತೊಂದರೆಯಾಗದಂತೆ ನ್ಯಾಯಯುತ ಆದೇಶ ನೀಡಬೇಕು. ಇಲ್ಲದಿದ್ದರೆ ತುರ್ತು ಸಭೆ ಕರೆದು ಮಾಜಿ ಕಾರ್ಯದರ್ಶಿ ಚಿಕ್ಕತಾಯಮ್ಮ ಅವರನ್ನು ಅಮಾನತ್ತಿನಲ್ಲಿಟ್ಟು ಮುನ್ನಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಡೇರಿ ಅಧ್ಯಕ್ಷೆ ಪುಷ್ಪಾವತಿ, ನಿರ್ದೇಶರಾದ ಭಾಗ್ಯಮ್ಮ, ಲಕ್ಷ್ಮಮ್ಮ, ಮಂಜುಳಮ್ಮ, ಸೌಭಾಗ್ಯಮ್ಮ, ರಶ್ಮಿ, ಸಾಕಮ್ಮ, ರಾಜಮ್ಮ, ಮಾಜಿ ನಿರ್ದೇಶಕಿ ಭವ್ಯ, ಮುಖಂಡರಾದ ಅಭಿಲಾಷ್, ಕೃಷ್ಣೇಗೌಡ, ಎಂ.ಸಿ.ಶಂಕರೇಗೌಡ, ಯೋಗರಾಜು, ಎಂ.ಎಸ್.ಜವರೇಗೌಡ, ದೈತ್ಯೇಗೌಡ, ಚಲುವೇಗೌಡ, ಶೇಖರ್, ಸುಂಕಾತೊಣ್ಣೂರು ಪಾರ್ಥಸಾರಥಿ, ಶಂಕನಹಳ್ಳಿ ರವಿ ಇತರರಿದ್ದರು.