ಅರಣ್ಯ ಹಕ್ಕು ಅರ್ಜಿ ಮರುಪರಿಶೀಲಿಸಲು ಆದೇಶ

| Published : Oct 30 2025, 02:30 AM IST

ಸಾರಾಂಶ

ತಿರಸ್ಕರಿಸಿದ ಅರಣ್ಯ ಹಕ್ಕು ಅರ್ಜಿಗಳನ್ನು ನೈಸರ್ಗಿಕ ನ್ಯಾಯ ನಿಯಮದಡಿ ಮರುಪರಿಶೀಲನೆ ನಡೆಸಲು ರಾಜ್ಯದ ಮುಖ್ಯಕಾರ್ಯದರ್ಶಿಗಳು ಅರಣ್ಯ ಹಕ್ಕು ಸಮಿತಿಗಳಿಗೆ ಆದೇಶ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾವರ

ತಿರಸ್ಕರಿಸಿದ ಅರಣ್ಯ ಹಕ್ಕು ಅರ್ಜಿಗಳನ್ನು ನೈಸರ್ಗಿಕ ನ್ಯಾಯ ನಿಯಮದಡಿ ಮರುಪರಿಶೀಲನೆ ನಡೆಸಲು ರಾಜ್ಯದ ಮುಖ್ಯಕಾರ್ಯದರ್ಶಿಗಳು ಅರಣ್ಯ ಹಕ್ಕು ಸಮಿತಿಗಳಿಗೆ ಆದೇಶ ಮಾಡಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ತಿಳಿಸಿದ್ದಾರೆ.

ಮಂಗಳವಾರ ಹೊನ್ನಾವರದ ಉಪವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿಯನ್ನು ಭೇಟಿ ಮಾಡಿ, ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ ಕೈಬಿಡುವಂತೆ ಮನವಿ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ನಿರ್ದಿಷ್ಟ ದಾಖಲೆ ಇಲ್ಲದೇ ಇರುವ ಪ್ರಕರಣಗಳಲ್ಲಿ ಸ್ಥಳ ತನಿಖೆ ನಡೆಸಿ, ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸ್ಥಳ ಮಹಜರು ಮಾಡಿ ಅರಣ್ಯ ಹಕ್ಕು ಸಮಿತಿಗಳಿಗೆ ವರದಿ ಸಲ್ಲಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಜಿಲ್ಲಾಡಳಿತಕ್ಕೆ ಈಗಾಗಲೇ ಸೂಚಿಸಿದ್ದಾರೆ ಎಂದರು.

ತಿರಸ್ಕರಿಸಲ್ಪಟ್ಟ ಅರಣ್ಯ ಭೂಮಿಯಲ್ಲಿನ ಒತ್ತುವರಿಗಳನ್ನು ತೆರವುಗೊಳಿಸಲು ಅರಣ್ಯವಾಸಿಗಳ ವಿರುದ್ಧ ನಡೆಯುತ್ತಿರುವ ಕಾನೂನು ಕ್ರಮ ಕೈಬಿಡಲು ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಅವರ ಸ್ಥಳದಲ್ಲಿನ ನೈಜ ಸಾಗುವಳಿ ಮತ್ತು ಸಾಂದರ್ಭಿಕ ಸಾಕ್ಷ್ಯವನ್ನು ಆಧಾರಿಸಿ ಅಧಿಭೋಗದಾರಿಕೆ ಹಕ್ಕು ನೀಡಲು ಮಾನವೀಯ ನೆಲೆಯಲ್ಲಿ ಇಲಾಖೆ ಪರಿಗಣಿಸಬೇಕೆಂದು ಕೋರಿದ್ದಾರೆ.

ಈ ಮನವಿ ಪರಿಶೀಲಿಸುವುದಾಗಿ ಉಪಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ್ ಸಿ.ಕೆ. ಭರವಸೆ ನೀಡಿದ್ದಾರೆ. ಅರ್ಹರ ಹಿತರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದರು. ಆದರೆ ಹೊಸ ಒತ್ತುವರಿಗೆ ಕಡಿವಾಣ ಹಾಕಲಾಗುವುದು, ಅರಣ್ಯ ಹಕ್ಕುಕಾಯ್ದೆಯ ಇತರ ಪಾರಂಪರಿಕ ಅರಣ್ಯವಾಸಿಯ ಮೂರು ತಲೆಮಾರಿನ ವ್ಯಾಖ್ಯೆಗೆ ಸೂಕ್ತ ತಿದ್ದುಪಡಿಯಾದರೆ ಮಾತ್ರ ಜಿಲ್ಲೆಯ ಜನರಿಗೆ ಅನುಕೂಲ ಆಗಹುದು ಎಂದು ಹೇಳಿದ್ದಾರೆ.

ಈ ದಿಶೆಯಲ್ಲಿ ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಪ್ರಬಲ ಒತ್ತಡ ತಂದು ರಾಜ್ಯದ ತಿದ್ದುಪಡಿ ಪ್ರಸ್ತಾವಕ್ಕೆ ಅಂಗೀಕಾರ ದೊರಕಿಸಿಕೊಡುವ ಕೆಲಸ ಆಗಬೇಕು ಎಂದು ಕೊಚರೇಕರ್ ಆಗ್ರಹಿಸಿದ್ದಾರೆ.