ಶಿಕ್ಷಕರ ಬಡ್ತಿ ತಡೆ ಹಿಂಪಡೆದು ಆದೇಶ

| Published : Jun 28 2024, 12:46 AM IST

ಸಾರಾಂಶ

ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಯಾದಗಿರಿ ಜಿಲ್ಲೆಯ ಫಲಿತಾಂಶ ಗಣನೀಯವಾಗಿ ಕುಸಿದಿತ್ತು. ಈ ಹಿನ್ನಲೆ ಜಿಲ್ಲಾವಾರು ಸರಾಸರಿ (ಶೇ.54.43) ಗಿಂತ ಕಡಮೆ ಇರುವ ಅನುದಾನಿತ/ಸರ್ಕಾರಿ ಶಾಲಾ ಶಿಕ್ಷಕರ ಒಂದು ವರ್ಷದ ಬಡ್ತಿ (ಇನ್ಕ್ರಿಮೆಂಟ್‌)ಯನ್ನು ಜೂ. 24 ರಂದು ಕಡಿತಗೊಳಿಸಿ ಜಿ.ಪಂ ಆದೇಶ ಹೊರಡಿಸಿತ್ತು. ನಿರೀಕ್ಷಿತ ಟೀಕೆ ವ್ಯಕ್ತವಾದ ಬೆನ್ನಲ್ಲೇ ಜಿ.ಪಂ ಸಿಇಓ ಗರೀಮಾ ಪನ್ವಾರ್‌ ಗುರುವಾರ ತಮ್ಮ ಆದೇಶವನ್ನು ಹಿಂಪಡೆದಿದ್ದಾರೆ.

- ಎಸ್ಸೆಸ್ಸೆಲ್ಸಿ ಫಲಿತಾಂಶ ಕಳಪೆ ಹಿನ್ನೆಲೆಯಲ್ಲಿ ಒಂದು ವರ್ಷದ ಬಡ್ತಿ ತಡೆ

- ಟೀಕೆಗೆ ಗುರಿಯಾಗಿದ್ದ ಜಿಲ್ಲಾ ಪಂಚಾಯತ್‌ ಸಿಇಓ ಆದೇಶ ವಾಪಾಸ್

ಕನ್ನಡಪ್ರಭ ವಾರ್ತೆ ಯಾದಗಿರಿ

ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಯಾದಗಿರಿ ಜಿಲ್ಲೆಯ ಫಲಿತಾಂಶ ಗಣನೀಯವಾಗಿ ಕುಸಿದಿತ್ತು. ಈ ಹಿನ್ನಲೆ ಜಿಲ್ಲಾವಾರು ಸರಾಸರಿ (ಶೇ.54.43) ಗಿಂತ ಕಡಮೆ ಇರುವ ಅನುದಾನಿತ/ಸರ್ಕಾರಿ ಶಾಲಾ ಶಿಕ್ಷಕರ ಒಂದು ವರ್ಷದ ಬಡ್ತಿ (ಇನ್ಕ್ರಿಮೆಂಟ್‌)ಯನ್ನು ಜೂ. 24 ರಂದು ಕಡಿತಗೊಳಿಸಿ ಜಿ.ಪಂ ಆದೇಶ ಹೊರಡಿಸಿತ್ತು. ನಿರೀಕ್ಷಿತ ಟೀಕೆ ವ್ಯಕ್ತವಾದ ಬೆನ್ನಲ್ಲೇ ಜಿಲ್ಲಾ ಪಂಚಾಯಿತಿ ಸಿಇಓ ಗರೀಮಾ ಪನ್ವಾರ್‌ ಗುರುವಾರ ತಮ್ಮ ಆದೇಶವನ್ನು ಹಿಂಪಡೆದಿದ್ದಾರೆ.

ಈ ಆದೇಶ ಕುರಿತು ಶಿಕ್ಷಕರ ವಲಯದಿಂದ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಫಲಿತಾಂಶ ಕುಸಿತಕ್ಕೆ ಶಿಕ್ಷಕರೇ ಕಾರಣ ಎಂಬ ಅಧಿಕಾರಿಗಳ ನಿರ್ಧಾರ ಸರಿಯಲ್ಲ ಎಂಬ ಆಕ್ರೋಶದ ನುಡಿಗಳು ವ್ಯಕ್ತವಾಗಿದ್ದವು. ಶಿಕ್ಷಕರ ಸಂಘದಿಂದ ಆದೇಶ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳುವ ರೂಪುರೇಷೆಗಳ ಸಿದ್ಧತೆಯೂ ನಡೆದಿತ್ತು. ಅಷ್ಟರಲ್ಲಿ ಜಿ.ಪಂ ತನ್ನ ಆದೇಶವನ್ನು ಹಿಂಪಡೆದಿದೆ.

ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಸದಸ್ಯರಾದ ಶಶೀಲ್‌ ನಮೋಶಿ ಹಾಗೂ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಸದಸ್ಯರಾದ ಡಾ. ಚಂದ್ರಶೇಖರ ಬಿ. ಪಾಟೀಲ ಅವರು, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮತ್ತು ಆಯುಕ್ತರಿಗೆ ಪತ್ರ ಬರೆದು, ಆದೇಶ ವಾಪಸ್‌ಗೆ ಸೂಚಿಸಿದ್ದರು.

ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ಸಹ, ಸಿಇಓ ಗರೀಮಾ ಪನ್ವಾರ್‌ ಅವರ ಜೊತೆ ಆದೇಶ ಹಿಂಪಡೆಯುವ ಬಗ್ಗೆ ಮಾತನಾಡಿದ್ದರು. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಕೆಂಭಾವಿ ನೇತೃತ್ವದಲ್ಲಿ, ಎಲ್ಲಾ ಪದಾಧಿಕಾರಿಗಳು ಸಚಿವ ದರ್ಶನಾಪುರ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಆದೇಶ ಕುರಿತು ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಸಚಿವರಿಂದಲೂ ಸಿಇಓ ಅವರಿಗೆ ಆದೇಶ ಹಿಂಪಡೆಯುವಂತೆ ಸೂಚನೆ ಬಂದಿತ್ತು ಎನ್ನಲಾಗಿದೆ.

ನಂತರ ಬಡ್ತಿ ತಡೆ ಆದೇಶ ಹಿಂಪಡೆಯುವಿಕೆಯನ್ನು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಸೂಚನೆ ಹಾಗೂ ಶಿಕ್ಷಕರ ಮನವಿ ಮೇರೆಗೆ ಹಿಂಪಡೆಯಲಾಗಿದೆ ಎಂದು ಜಾರುವಿಕೆ ಉತ್ತರ ಕೊಟ್ಟು ಜಿಲ್ಲಾ ಪಂಚಾಯತ್‌ ಸಿಇಓ ಗರೀಮಾ ಪನ್ವಾರ್‌ ತಮ್ಮ ಆದೇಶವನ್ನು ಹಿಂಪಡೆದಿದ್ದಾರೆ. ಇಷ್ಟೆಲ್ಲಾ ರಾದ್ಧಾಂತಗಳ ಬಳಿಕ ಶಿಕ್ಷಕರ ವಲಯವು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

-ಏನಾಗಿತ್ತು?

2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆ ರಾಜ್ಯದಲ್ಲಿ ಶೇ.54.43 ರಷ್ಟು ಫಲತಾಂಶದ ಮೂಲಕ 35ನೇ ಕೊನೆಯ ಸ್ಥಾನ ಪಡೆದಿತ್ತು. ಆಡಳಿತಾತ್ಮಕ ದೃಷ್ಟಿಯಿಂದ ಎಲ್ಲ ಸೌಕರ್ಯಗಳನ್ನು ನೀಡಿದ್ದರೂ ಸಹ ಗಣನೀಯವಾಗಿ ಫಲಿತಾಂಶ ಕುಸಿತಗೊಂಡಿದ್ದರಿಂದ, ಜಿಲ್ಲಾವಾರು ಸರಾಸರಿ (ಶೇ.54.43) ಗಿಂತ ಕಡಮೆ ಇರುವ ಅನುದಾನಿತ/ಸರ್ಕಾರಿ ಶಾಲೆಗಳಲ್ಲಿನ ವಿಷಯ ಶಿಕ್ಷಕರ ಒಂದು ವರ್ಷದ ಬಡ್ತಿ (ಇನ್ಕ್ರಿಮೆಂಟ್‌) ಕಡಿತಕ್ಕೆ ಜಿಲ್ಲಾ ಪಂಚಾಯ್ತಿ ಸಿಇಓ ಗರೀಮಾ ಪನ್ವಾರ್‌ ಜೂ.24 ರಂದು ಆದೇಶಿಸಿದ್ದರು.

600ಕ್ಕೂ ಹೆಚ್ಚು ಶಿಕ್ಷಕರ ಕೊರತೆ ನಡುವೆಯೂ ಬಂದಿರುವ ಫಲಿತಾಂಶ ಸಮಾಧಾನಕರವಾಗಿದ್ದು, ಅವಶ್ಯಕ ಸೌಲಭ್ಯಗಳೇ ಇರದಿರುವಾಗ ಗುಣಮಟ್ಟದ ಫಲಿತಾಂಶ ತನ್ನಿ ಎಂದರೆ ಹೇಗೆ ಸಾಧ್ಯ? ಎಂದು ಅಧಿಕಾರಿಗಳ ಮನೋಭಾವ ಪ್ರಶ್ನಿಸಿ "ಕನ್ನಡಪ್ರಭ " ಬುಧವಾರ (ಜೂ.26) ರಂದು ವರದಿ ಪ್ರಕಟಿಸಿತ್ತು. ಈ ವರದಿ ಸಾರ್ವಜನಿಕರು ಹಾಗೂ ಶಿಕ್ಷಕರನ್ನು ಸಾಕಷ್ಟು ಚರ್ಚೆಗೊಳಪಡಿಸಿತ್ತು.

---

ಕೋಟ್‌: ಶಿಕ್ಷಕರ ಮನವಿಗೆ ಸ್ಪಂದಿಸಿದ ಸಚಿವರು, ಜನಪ್ರತಿನಿಧಿಗಳಿಗೆ ಹಾಗೂ ಮಾಧ್ಯಮಗಳಿಗೆ ಧನ್ಯವಾದಗಳು. ಫಲಿತಾಂಶ ಕುಂಠಿತವಾಗಿರುವ ಬಗ್ಗೆ ಅಧಿಕಾರಿಗಳು-ಶಿಕ್ಷಕರು ಆತ್ಮಾವಲೋಕನ ನಡೆಸೋಣ. ಕೊರತೆಗಳನ್ನು ಸರಿದೂಗಿಸಿದಲ್ಲಿ ಯಾದಗಿರಿ ಜಿಲ್ಲೆ ಮುಂಬರುವ ದಿನಗಳಲ್ಲಿ ಒಳ್ಳೆಯ-ಗುಣಮಟ್ಟದ ಫಲಿತಾಂಶಕ್ಕೆ ಸಾಕ್ಷಿಯಾಗಲಿದೆ. ಮುಂದಿನ ವರ್ಷ ಕೊನೆಯ ಸ್ಥಾನದ ಹಣೆಪಟ್ಟಿಯಿಂದ ಹೊರ ಬರೋಣ.

ಅಶೋಕ ಕೆಂಭಾವಿ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು. (27ವೈಡಿಆರ್‌11)

----

27ವೈಡಿಆರ್‌9: ಶಿಕ್ಷಕರ ವಾರ್ಷಿಕ ಬಡ್ತಿ ತಡೆ ಹಿಂಪಡೆದ ಸಿಇಓ ಪನ್ವಾರ್‌ ಅವರ ಆದೇಶ.

---

27ವೈಡಿಆರ್‌10: ಕನ್ನಡಪ್ರಭದಲ್ಲಿ ಜೂ.26 ರಂದು ಬಡ್ತಿ ತಡೆ ಕುರಿತು ಪ್ರಕಟಗೊಂಡಿದ್ದ ವರದಿ.

----