ಕೃತಕ ಅಭಾವ ಸೃಷ್ಟಿ : ಸಾಮಾನ್ಯ ಮೀಟರ್‌ ದುಪ್ಪಟ್ಟು ದರಕ್ಕೆ ಕಾಳ ಸಂತೆಯಲ್ಲಿ ಬಿಕರಿ!

| N/A | Published : Mar 09 2025, 01:48 AM IST / Updated: Mar 09 2025, 09:24 AM IST

ಕೃತಕ ಅಭಾವ ಸೃಷ್ಟಿ : ಸಾಮಾನ್ಯ ಮೀಟರ್‌ ದುಪ್ಪಟ್ಟು ದರಕ್ಕೆ ಕಾಳ ಸಂತೆಯಲ್ಲಿ ಬಿಕರಿ!
Share this Article
  • FB
  • TW
  • Linkdin
  • Email

ಸಾರಾಂಶ

ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿನ ಗ್ರಾಮೀಣ ಹಾಗೂ ಸಣ್ಣ ಪಟ್ಟಣ ಪ್ರದೇಶಗಳಲ್ಲಿ ಎಲ್‌ಟಿ ಗ್ರಾಹಕರಿಗೆ ಸ್ಮಾರ್ಟ್‌ ಮೀಟರ್‌ ಪಡೆಯಲು ಒತ್ತಾಯ ಮಾಡದಂತೆ ಬೆಸ್ಕಾಂ ಸೂಚನೆ ನೀಡಿದ ಬೆನ್ನಲ್ಲೇ ಸಾಮಾನ್ಯ ಮೀಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.  

 ಬೆಂಗಳೂರು : ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿನ ಗ್ರಾಮೀಣ ಹಾಗೂ ಸಣ್ಣ ಪಟ್ಟಣ ಪ್ರದೇಶಗಳಲ್ಲಿ ಎಲ್‌ಟಿ ಗ್ರಾಹಕರಿಗೆ ಸ್ಮಾರ್ಟ್‌ ಮೀಟರ್‌ ಪಡೆಯಲು ಒತ್ತಾಯ ಮಾಡದಂತೆ ಬೆಸ್ಕಾಂ ಸೂಚನೆ ನೀಡಿದ ಬೆನ್ನಲ್ಲೇ ಸಾಮಾನ್ಯ ಮೀಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಮೀಟರ್‌ಗಳಿಗೆ ಕೃತಕ ಅಭಾವ ಸೃಷ್ಟಿಯಾಗಿದ್ದು, ದುಪ್ಪಟ್ಟು ದರಕ್ಕೆ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವ ಆರೋಪ ಕೇಳಿ ಬಂದಿದೆ.

ಹೌದು, ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೊಸ ಸಂಪರ್ಕಗಳಿಗೆ ಸ್ಮಾರ್ಟ್‌ ಮೀಟರ್‌ ಕಡ್ಡಾಯ ಮಾಡಿ ಫೆ.15 ರಂದು ಬೆಸ್ಕಾಂ ಆದೇಶ ಮಾಡಿತ್ತು. ಇದರಿಂದ ಸಿಂಗಲ್‌ ಫೇಸ್‌ ಗೃಹ ಬಳಕೆ ಮೀಟರ್‌ (ಎಲ್‌ಟಿ) ಬೆಲೆ 980 ರು.ಗಳಿಂದ ಬರೋಬ್ಬರಿಗೆ 4,998 ರು.ಗೆ ಹೆಚ್ಚಳ ಆಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಇದರ ಬೆನ್ನಲ್ಲೇ ಮಾ.6 ರಂದು ತಂತ್ರಾಂಶ ಸಂಯೋಜನೆ ಆಗದ ಕಾರಣ ನೀಡಿ ಗ್ರಾಮೀಣ, ಸಣ್ಣ ಪಟ್ಟಣಗಳಿಗೆ (ನಾನ್‌- ಆರ್‌ಎಪಿಡಿಆರ್‌ಪಿ ಪ್ರದೇಶ) ಸೀಮಿತವಾಗಿ ಸ್ಮಾರ್ಟ್‌ ಮೀಟರ್‌ ಕಡ್ಡಾಯಕ್ಕೆ ತಾತ್ಕಾಲಿಕವಾಗಿ ವಿನಾಯಿತಿ ನೀಡಲಾಗಿದೆ. ಇದರಿಂದ ಈ ಭಾಗಗಳಲ್ಲಿ ಸಾಂಪ್ರದಾಯಿಕ ಮೀಟರ್‌ಗಳನ್ನೇ ಅಳವಡಿಸಬಹುದು. ಹೀಗಾಗಿ ಹಲವು ಮಂದಿ 980 ರು. ಮೀಟರ್‌ಗೆ ಅರ್ಜಿ ಹಾಕಿದ್ದು, ಬೆಸ್ಕಾಂ ಚಿಲ್ಲರೆ ಮಳಿಗೆಗಳಲ್ಲಿ ನೋ ಸ್ಟಾಕ್‌ ಬೋರ್ಡ್‌ ರಾರಾಜಿಸುತ್ತಿವೆ.

ಮತ್ತೊಂದೆಡೆ ಚಿಲ್ಲರೆ ಮಳಿಗೆ ಹಾಗೂ ಕೆಲ ಖಾಸಗಿ ವ್ಯಕ್ತಿಗಳು ಶಾಮೀಲಾಗಿ ಹೆಚ್ಚೆಚ್ಚು ಮೀಟರ್‌ಗಳು ಒಂದೇ ಬಾರಿಗೆ ಖರೀದಿಸಿದ್ದಾರೆ. ಅವುಗಳನ್ನು ಮೀಟರ್‌ಗೆ ಬೇಡಿಕೆ ಇರುವವರಿಗೆ ಕಾಳಸಂತೆಯಲ್ಲಿ 1500 ರು.ಗಳಿಂದ 1,600 ರು.ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಚಿಲ್ಲರೆ ಮಳಿಗೆಗಳ ಸಿಬ್ಬಂದಿ ಇದಕ್ಕೆ ತಾಂತ್ರಿಕವಾಗಿ ಅಗತ್ಯ ನೆರವು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಅವಕಾಶ ತಪ್ಪಿದರೆ ಮತ್ತೆ 4,998 ರು. ಪಾವತಿಸಿ ಸ್ಮಾರ್ಟ್‌ ಮೀಟರ್‌ ಖರೀದಿಸಬೇಕು ಎಂಬ ಭೀತಿಯಿಂದ ಜನ ದುಪ್ಪಟ್ಟು ಹಣ ನೀಡಿ ಖರೀದಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಖಾಸಗಿ ವ್ಯಕ್ತಿಗಳು ದುಪ್ಪಟ್ಟು ದರಕ್ಕೆ ಮಾರುತ್ತಿರುವ ಬೆಳವಣಿಗೆ ನಮ್ಮ ಗಮನಕ್ಕೆ ಬಂದಿಲ್ಲ. ಬೇಡಿಕೆ ಹೆಚ್ಚಾಗಿರುವುದರಿಂದ ಕೆಲ ಕಡೆ ಸಮಸ್ಯೆಯಾಗಿರಬಹುದು. ಆದರೆ ಕಾಳಸಂತೆಯಲ್ಲಿ ಮಾರಲು ಅವಕಾಶವಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ 

3 ಫೇಸ್‌ ಸ್ಮಾರ್ಟ್‌ ಮೀಟರ್‌ ಲಭ್ಯವಿಲ್ಲ

ಇನ್ನು ನಗರ ಪ್ರದೇಶ ಹಾಗೂ ತಾಲೂಕು ಕೇಂದ್ರಗಳಲ್ಲಿ ಹೊಸ ಸಂಪರ್ಕಗಳಿಗೆ ಸ್ಮಾರ್ಟ್‌ ಮೀಟರ್‌ ಕಡ್ಡಾಯವಿದೆ. ಆದರೆ 3 ಫೇಸ್‌ನ ಮೀಟರ್‌ ಮಳಿಗೆಗಳಲ್ಲಿ ದಾಸ್ತಾನು ಇಲ್ಲ. ಕಳೆದ ಒಂದು ವಾರದಿಂದ ಕೇಳಿದರೂ ಸರಬರಾಜು ಇಲ್ಲ ಎಂಬ ನೆಪ ಹೇಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.