ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಮಡಿಕೇರಿಯ 22ರ ಹರೆಯದ ಯೋಗೇಶ್ ಬಡ ಕುಟುಂಬದ ಮನೆಯ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ. ಮಡಿಕೇರಿಯ ಚಾಮುಂಡೇಶ್ವರಿ ನಗರದಲ್ಲಿನ ಬೆಟ್ಟದ ಕೆಳಭಾಗದಲ್ಲಿರುವ ಮನೆ ಮಳೆಗಾಲದಲ್ಲಿ ಅಪಾಯದ ಸ್ಥಿತಿಯಲ್ಲಿದ್ದು, ಕುಟುಂಬಸ್ಥರಿಗೆ ಸ್ಥಳಾಂತರ ಅನಿವಾರ್ಯವಾಗಿದೆ.
ವಿಘ್ನೇಶ್ ಎಂ. ಭೂತನಕಾಡು
ಮಡಿಕೇರಿ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಮಡಿಕೇರಿಯ 22ರ ಹರೆಯದ ಯೋಗೇಶ್ ಬಡ ಕುಟುಂಬದ ಮನೆಯ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ. ಮಡಿಕೇರಿಯ ಚಾಮುಂಡೇಶ್ವರಿ ನಗರದಲ್ಲಿನ ಬೆಟ್ಟದ ಕೆಳಭಾಗದಲ್ಲಿರುವ ಮನೆ ಮಳೆಗಾಲದಲ್ಲಿ ಅಪಾಯದ ಸ್ಥಿತಿಯಲ್ಲಿದ್ದು, ಕುಟುಂಬಸ್ಥರಿಗೆ ಸ್ಥಳಾಂತರ ಅನಿವಾರ್ಯವಾಗಿದೆ.ಯೋಗೇಶ್ ನನ್ನು ಕಳೆದುಕೊಂಡ ದುಖಃದಲ್ಲೂ ಕೂಡ ಅಂಗಾಂಗ ದಾನ ಮಾಡಿ ಸಮಾಜಕ್ಕೆ ಮಾನವೀಯ ಮೌಲ್ಯಗಳ ಬಗ್ಗೆ ಬೆಳೆಕು ಚೆಲ್ಲಿರುವ ಈ ಕುಟುಂಬದ ಕಾರ್ಯ ಮೆಚ್ಚುವಂತಹದ್ದಾಗಿದೆ. ಬೆಟ್ಟದ ಪ್ರದೇಶದಲ್ಲಿರುವ ಈ ಬಡ ಕುಟುಂಬಕ್ಕೆ ಸರ್ಕಾರ ಪರ್ಯಾಯ ಕಡೆಯಲ್ಲಿ ಮನೆ ನಿರ್ಮಿಸಿಕೊಡುವ ಮೂಲಕ ಆಸರೆಯಾಗಬೇಕಿದೆ.
ಕಳೆದ ಹಲವು ವರ್ಷಗಳಿಂದಲೂ ಕೂಡ ಚಾಮುಂಡೇಶ್ವರಿ ನಗರದಲ್ಲಿ ನೆಲೆಸಿರುವ ಬಡ ಕುಟುಂಬಕ್ಕೆ ಮಳೆಗಾಲದ ಸಂದರ್ಭದಲ್ಲಿ ಬರೆ ಕುಸಿತ ಉಂಟಾಗುವ ಭೀತಿ ಎದುರಾಗುತ್ತಿದೆ. ನಗರಸಭೆಯಿಂದ ಪ್ರತಿ ಮಳೆಗಾಲದಲ್ಲೂ ಕೂಡ ಸ್ಥಳಾಂತರವಾಗುವಂತೆ ನೋಟೀಸ್ ಕೂಡ ನೀಡಲಾಗುತ್ತದೆ. ಮನೆಗೆ ತೆರಳಲು ರಸ್ತೆ ಇಲ್ಲ. ಯಾವ ವಾಹನ ಕೂಡ ತೆರಳುವುದಿಲ್ಲ. ಬದಲಾಗಿ ಅಪಾಯದ ಮೆಟ್ಟಿಲು ಮಾತ್ರ. ಪ್ರತಿ ದಿನ ನಡೆದಾಡಲು ಪ್ರಯಾಸ ಪಡುವಂತಹ ಪರಿಸ್ಥಿತಿ ಇರುವುದು ಮಾತ್ರ ಸುಳ್ಳಲ್ಲ.ಭಾನುವಾರ ಮುಂಜಾನೆ 3 ಗಂಟೆಗೆ ಮಿದುಳು ನಿಷ್ಕ್ರಿಯಗೊಂಡು ಮಡಿಕೇರಿಯ ಚಾಮುಂಡೇಶ್ವರಿ ನಗರದ ಯೋಗೇಶ್ ಅವರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ನೀಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದಾರೆ.
ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಸಹೋದರಿಬ್ಬರು ತಾಯಿಯೊಂದಿಗೆ ಜೀವನ ನಡೆಸುತ್ತಿದ್ದರು. ಆದರೆ ದೀಪಾವಳಿ ಸಂಭ್ರಮದ ದಿನದಂದು ಮುಂಜಾನೆ 3 ಗಂಟೆಗೆ ಶೌಚಾಲಯಕ್ಕೆ ಹೋಗಲು ನಿದ್ದೆಯಿಂದ ಎಚ್ಚರಗೊಂಡು, ಹಾಸಿಗೆಯಿಂದ ಎದ್ದ ಯೋಗೇಶ್ ಆಕಸ್ಮಿಕವಾಗಿ ಬಿದ್ದಿದ್ದಾನೆ. ಇದರಿಂದ ತಲೆಯ ಭಾಗಕ್ಕೆ ತೀವ್ರ ಪ್ರಮಾಣದಲ್ಲಿ ಪೆಟ್ಟಾಗಿತ್ತು.ಆ ಬೆಟ್ಟದ ಪ್ರದೇಶದ ಮನೆಯಿಂದ ಮುಂಜಾನೆ ಯೋಗೇಶನನ್ನು ಎತ್ತಿಕೊಂಡು ಚಾಮುಂಡೇಶ್ವರಿ ನಗರದಿಂದ ಮಡಿಕೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ದಾಖಲಿಸಲಾಯಿತು. ಆದರೆ ಯೋಗೇಶ್ ಮಾತ್ರ ಕಣ್ಣು ತೆರೆಯಲೇ ಇಲ್ಲ. ಇಲ್ಲಿ ಆಗುವುದಿಲ್ಲ ಎಂದು ಚಿಂತಾಜನಕ ಸ್ಥಿತಿಯಲ್ಲಿದ್ದವನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿನ ತಜ್ಞ ವೈದ್ಯರು ಯೋಗೇಶನನ್ನು ಚಿಕಿತ್ಸೆ ನೀಡಲು ಮುಂದಾದರು. ಹಲವು ಸ್ಕ್ಯಾನ್ ಗಳನ್ನು ಮಾಡಿ ಮೆದುಳು ನಿಷ್ಕ್ರೀಯವಾಗಿದೆ. ಬ್ರೇನ್ ಡೆಡ್ ಎಂದು ಘೋಷಿಸಿಬಿಟ್ಟರು. ಇದರಿಂದ ಏನು ಮಾಡುವುದು ಎಂದು ತೋಚದೆ ಮತ್ತೆ ಮಡಿಕೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆತಂದು ಇಲ್ಲಿಯೇ ಇರಿಸಲಾಯಿತು.
ಆದರೆ ಚಿಕಿತ್ಸೆಯ ಎಲ್ಲಾ ಪ್ರಯತ್ನಗಳು ವಿಫಲವಾಯಿತು. ಮೈಸೂರಿನಿಂದ ತಜ್ಞ ವೈದ್ಯರು ಯೋಗೇಶ್ ನ ಹೃದಯ, ಕಿಡ್ನಿ, ನೇತ್ರಗಳನ್ನು ಪಡೆದುಕೊಂಡರು. ಯೋಗೇಶ್ ಈ ಮೂಲಕವೂ ಅಂಗಾಂಗ ದಾನದ ಮೂಲಕ ಬೇರೆ ಜೀವಕ್ಕೆ ಉಸಿರಾದರು.ಮಳೆಗಾಲದಲ್ಲಿ ನೋಟಿಸ್:
ಪ್ರತಿ ವರ್ಷದ ಮಳೆಗಾಲದ ಸಂದರ್ಭದಲ್ಲಿ ಮಡಿಕೇರಿ ನಗರಸಭೆಯಿಂದ ಚಾಮುಂಡೇಶ್ವರಿ ನಗರದಲ್ಲಿರುವ ಇವರ ಮನೆಗೆ ನೋಟೀಸ್ ನೀಡಲಾಗುತ್ತದೆ. ಇಲ್ಲಿ ವಾಸಿಸಲು ಯೋಗ್ಯವಲ್ಲ. ಆದ್ದರಿಂದ ಬೇರೆ ಕಡೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗುತ್ತಿದೆ. ಆದರೆ ಹುಟ್ಟಿ ಬೆಳೆದ ಮನೆ ಹಾಗೂ ಕಷ್ಟದ ಪರಿಸ್ಥಿತಿಯಲ್ಲಿರುವ ಇವರಿಗೆ ಪರ್ಯಾಯ ಮನೆಗೆ ತೆರಳಲು ಆರ್ಥಿಕ ಸಂಕಷ್ಟ ಅಡ್ಡ ಬಂದಿದೆ. ಇದರಿಂದಲೇ ತಡೆಗೋಡೆ ನಿರ್ಮಿಸಿ ಮಳೆಗಾಲದಲ್ಲೂ ಕೂಡಾ ಇಲ್ಲೇ ವಾಸ್ತವ್ಯ ಹೂಡಿದ್ದಾರೆ.ಶಾಸಕರು ಸರ್ಕಾರದಿಂದ ಮನೆ ಕೊಡಿಸಲಿ
ಅಂಗಾಂಗ ದಾನ ಮಾಡಿರುವ ಯೋಗೇಶ್ ಕುಟುಂಬಸ್ಥರಿಗೆ ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ ಅವರು ಸರ್ಕಾರದಿಂದ ಮಳೆ ಸಂತ್ರಸ್ತರಿಗೆ ಇರುವ ಮನೆಯೊಂದನ್ನು ನೀಡುವ ಮೂಲಕ ಮಾದರಿಯಾಗಬೇಕಿದೆ. ಈ ಹಿಂದೆ ಸೂರ್ಲಬ್ಬಿಯಲ್ಲಿ ಮೃತಪಟ್ಟಿದ್ದ ಯುವತಿಯ ಕುಟುಂಬ ಹಾಗೂ ಮಾದಾಪುರ ಸಮೀಪದಲ್ಲಿ ಅಜ್ಜಿಯೊಬ್ಬರಿಗೆ ಮನೆ ನಿರ್ಮಿಸಿಕೊಟ್ಟಿದ್ದ ಶಾಸಕರು ಯೋಗೇಶ್ ಕುಟುಂಬಕ್ಕೆ ಕೂಡಾ ಸರ್ಕಾರದಿಂದ ಮನೆ ಕೊಡಿಸಬೇಕೆಂಬುದು ಹಲವರ ಒತ್ತಾಸೆಯಾಗಿದೆ. ರಕ್ತದಾನಿ ಕೂಡ ಹೌದು!: ಯೋಗೇಶ್ ಈಗ ಅಂಗಾಂಗ ದಾನದ ಮೂಲಕ ಸಮಾಜಕ್ಕೆ ಪರಿಚಿತರಾಗಿದ್ದಾರೆ. ಆದರೆ ಈ ಹಿಂದಿನಿಂದಲೂ ರಕ್ತದಾನ ಮಾಡಿದ್ದಾರೆ. ರಕ್ತದಾನದ ಮಹತ್ವ ಹಾಗೂ ಅಂಗಾಂಗ ದಾನ ಮಾಡುವ ಬಗ್ಗೆ ಈ ಹಿಂದಿನಿಂದಲೂ ಮನೆಯಲ್ಲಿ ಮಾತನಾಡಿಕೊಳ್ಳುತ್ತಿದ್ದ ಎಂದು ಸಹೋದರ ಪ್ರತಾಪ್ ನೆನಪಿಸಿಕೊಂಡು ಕಣ್ಣೀರಿಡುತ್ತಾರೆ.ತಾನೇ ಸ್ವತಃ ತಡೆಗೋಡೆ ಕಟ್ಟಿದ್ದ!: ಮಡಿಕೇರಿಯ ಚಾಮುಂಡೇಶ್ವರ ನಗರದ ಬೆಟ್ಟದ ಕೆಳಗಿರುವ ಮನೆ 2019ರ ಭಾರಿ ಮಳೆಯ ಸಂದರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಬರೆ ಕುಸಿತ ಉಂಟಾಗಿತ್ತು. ಅಂದು ಮನೆಗೆ ಯಾವುದೇ ಹಾನಿಯಾಗಿಲ್ಲದಿದ್ದರೂ ಅಪಾಯದ ಮೂನ್ಸೂಚನೆ ಇದ್ದ ಕಾರಣ ತಾವೇ ತಡೆಗೋಡೆ ಕೂಡ ನಿರ್ಮಿಸುವ ಕೆಲಸದಲ್ಲಿ ತೊಡಗಿದ್ದರು. ತಡೆಗೋಡೆ ಲಕ್ಷಾಂತರ ರುಪಾಯಿ ಖರ್ಚಾಗುವ ಹಿನ್ನೆಲೆಯಲ್ಲಿ ಅಣ್ಣ ಪ್ರತಾಪ್ ಹಾಗೂ ಇದೀಗ ತಾನೆ ಮೃತಪಟ್ಟಿರುವ ಯೋಗೇಶ್ ಸೇರಿ ತಡೆಗೋಡೆಯನ್ನು ಮನೆಯ ಹಿಂಭಾಗದಲ್ಲಿ ನಿರ್ಮಿಸಿದ್ದರು. ಮನೆಯಲ್ಲಿ ಮತ್ತಷ್ಟು ಕುಸಿಯಬಾರದೆಂಬ ಕಾಳಜಿ ವಹಿಸಿದ್ದರು.
ಯೋಗೇಶ್ ಅವರು ರಕ್ತದಾನಿ ಕೂಡ ಆಗಿದ್ದರು. ಇದೀಗ ಮಿದುಳು ನಿಷ್ಕ್ರಿಯಗೊಂಡು ಅವರ ಕುಟುಂಬ ಅಂಗಾಂಗವನ್ನು ದಾನ ಮಾಡುವ ಮೂಲಕ ಇನ್ನೊಬ್ಬರಿಗೆ ಬೆಳಕಾಗಿದ್ದು, ಬಹುದೊಡ್ಡ ಮಾನವೀಯ ಕಾರ್ಯ ಮಾಡಿದೆ. ಅವರ ಮನೆಯ ಪರಿಸ್ಥಿತಿ ಅಪಾಯದಲ್ಲಿದೆ. ಆದ್ದರಿಂದ ಸರ್ಕಾರ ಅವರಿಗೆ ಸುಸಜ್ಜಿತವಾದ ಮನೆ ನೀಡುವ ಮೂಲಕ ಕುಟುಂಬಸ್ಥರಿಗೆ ಭವಿಷ್ಯಕ್ಕೆ ಬೆಳಕಾಗಿ ನಿಲ್ಲಬೇಕಾಗಿದೆ. ಅಲ್ಲದೆ ಕುಟುಂಬಸ್ಥರನ್ನು ಸರ್ಕಾರ ಅವರನ್ನು ಗೌರವಿಸುವ ಕಾರ್ಯ ಮಾಡಬೇಕು.-ಸಮೀರ್, ಸ್ಥಾಪಕಾಧ್ಯಕ್ಷರು ಕೂರ್ಗ್ ಬ್ಲಡ್ ಫೌಂಡೇಶನ್
ತಮ್ಮ ಆರೋಗ್ಯವಾಗಿಯೇ ಇದ್ದ. ಆದರೆ ಈ ರೀತಿ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ರಕ್ತದಾನ ಮಾಡುವುದು ಹಾಗೂ ಅಂಗಾಂಗ ದಾನದ ಬಗ್ಗೆ ಮನೆಯಲ್ಲಿ ಮಾತನಾಡಿಕೊಳ್ಳುತ್ತಿದ್ದ. ಇದೀಗ ಅಂಗಾಂಗ ದಾನ ಮೂಲಕ ಇತರರ ಜೀವನದಲ್ಲಿ ಬೆಳಕಾಗಿದ್ದಾನೆ. ಮಳೆಗಾಲದಲ್ಲಿ ಬರೆ ಕುಸಿದು ಮನೆಗೆ ಹಾನಿಯಾಗುತ್ತದೆ ಎಂದು ನಾನು ಮತ್ತು ತಮ್ಮ ಇಬ್ಬರೂ ಸೇರಿಕೊಂಡು ತಡೆಗೋಡೆಯನ್ನು ನಿರ್ಮಿಸಿದ್ದೆವು.-ಪ್ರತಾಪ್, ಯೋಗೇಶ್ ಸಹೋದರ