ಮಲ್ಲಿಗೆನಾಡಿನ ಸಾವಯವ ಗೊಬ್ಬರ ಮಲೆನಾಡು ಸೀಮೆಗೆ

| Published : May 16 2024, 12:47 AM IST

ಮಲ್ಲಿಗೆನಾಡಿನ ಸಾವಯವ ಗೊಬ್ಬರ ಮಲೆನಾಡು ಸೀಮೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದೆ ಹೂವಿನಹಡಗಲಿಯ ಮಲ್ಲಿಗೆ ಹೂವಿನ ಸುವಾಸನೆ ಎಲ್ಲೆಡೆ ಪಸರಿಸಿತ್ತು. ಈ ಹಿನ್ನೆಲೆಯಲ್ಲಿ ಮಲ್ಲಿಗೆ ಬೆಳೆಗೆ ಭೌಗೋಳಿಕ ಸೂಚ್ಯಂಕದ ಮಾನ್ಯತೆ ಪಡೆದು ಸುದ್ದಿಯಲ್ಲಿತ್ತು.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಪಟ್ಟಣದಲ್ಲಿರುವ ಮನೆ, ಹೊಟೇಲ್‌ಗಳಿಂದ ನಿತ್ಯ ಹತ್ತಾರು ಟನ್‌ ಕಸ ಸಂಗ್ರಹಿಸುವ ಪುರಸಭೆ ಸ್ವಚ್ಛತೆ ಕಾಪಾಡುವ ಜತೆಗೆ ಕಸದಿಂದ ಉತ್ಪಾದಿಸುವ ಸಾವಯವ, ಎರೆಹುಳು ಗೊಬ್ಬರ ಮಲೆನಾಡು ಸೀಮೆಗೂ ಕಳಿಸುತ್ತಿದೆ.

ಈ ಹಿಂದೆ ಹೂವಿನಹಡಗಲಿಯ ಮಲ್ಲಿಗೆ ಹೂವಿನ ಸುವಾಸನೆ ಎಲ್ಲೆಡೆ ಪಸರಿಸಿತ್ತು. ಈ ಹಿನ್ನೆಲೆಯಲ್ಲಿ ಮಲ್ಲಿಗೆ ಬೆಳೆಗೆ ಭೌಗೋಳಿಕ ಸೂಚ್ಯಂಕದ ಮಾನ್ಯತೆ ಪಡೆದು ಸುದ್ದಿಯಲ್ಲಿತ್ತು. ಈಗ ಘನ ತ್ಯಾಜ್ಯ ವಸ್ತು ನಿರ್ವಹಣೆ ಘಟಕ ಇಡೀ ವಿಜಯನಗರ ಜಿಲ್ಲೆಯಲ್ಲೇ ಮಾದರಿಯಾಗಿದೆ. ಈ ಘನತ್ಯಾಜ್ಯ ವಸ್ತು ವಿರ್ವಹಣೆ ಘಟಕವು 10 ಎಕರೆ ಪ್ರದೇಶದಲ್ಲಿದೆ. ಕಸ ವಿಲೇವಾರಿ ಘಟಕ ದುರ್ನಾತ ಬೀರುವ ಕೇಂದ್ರವಾಗಿಲ್ಲ. ಬದಲಾಗಿ ಸುವಾಸನೆ ಬೀರುವ ಹೂವಿನ ಗಿಡಗಳಿವೆ. ಎಲ್ಲ ಕಡೆಗೂ 5 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದೆ.

ಸುಂದರ ಸ್ವಾಗತ ಕಮಾನು, ಸುಂದರ ಉದ್ಯಾನವನ, ನೂರಾರು ರೀತಿಯ ಅಲಂಕಾರಿಕ ಸಸ್ಯಗಳು, ನಾನಾ ಜಾತಿಯ ಹೂವಿನಗಿಡಗಳಿಂದ ಕಂಗೊಳಿಸುತ್ತಿದೆ. ಸಿಸಿ ರಸ್ತೆ ನಿರ್ಮಾಣ, ವೇಸ್ಟ್‌ ಟು ವಂಡರ್‌ ಎನ್ನುವ ರೀತಿಯಲ್ಲಿ ಕಸದಲ್ಲಿ ಹಾಕಿದ್ದ ನಾನಾ ರೀತಿಯ ಬಿಯರ್‌ ಬಾಟಲಿ, ಚಿಪ್ಪುಗಳನ್ನು ಬಳಸಿಕೊಂಡು ಅಲಂಕಾರ ಮಾಡಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

ಪುರಸಭೆ ಸಿಬ್ಬಂದಿ ಮನೆ ಮತ್ತು ಹೊಟೇಲ್‌ಗಳಿಂದ ನಿತ್ಯ ಹಸಿ ಮತ್ತು ಒಣ ಕಸ ಸೇರಿ 7 ಟನ್‌ ತ್ಯಾಜ್ಯ ಸಂಗ್ರಹಿಸುತ್ತಿದ್ದಾರೆ. ಕಸ ಬೇರ್ಪಡಿಸಿ ಕೊಳೆ ಹಾಕುವ ಮೂಲಕ ನಿತ್ಯ ಸಾವಯವ, ಎರೆಹುಳು ಗೊಬ್ಬರ ತಯಾರಿ, ಜರಡಿ ಯಂತ್ರದ ಮೂಲಕ ನಾನಾ ರೀತಿಯ ಗೊಬ್ಬರ ಉತ್ಪಾದನೆ ಮಾಡುತ್ತಾರೆ.

ಇಲ್ಲಿ ಉತ್ಪಾದನೆ ಮಾಡುವ ಸಾವಯವ ಹಾಗೂ ಎರೆಹುಳು ಗೊಬ್ಬರವನ್ನು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ಪಡೆದಿರುವ ಪ್ರಯೋಗಾಲಯದಿಂದ, ಎನ್‌ಪಿಕೆ ಮೌಲ್ಯವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಗೊಬ್ಬರವನ್ನು ಅಡಿಕೆ, ಕಾಫಿ, ತೆಂಗು, ಪಪ್ಪಾಯಿ, ಬಾಳೆ ಸೇರಿದಂತೆ ದೀರ್ಘಾವಧಿ ಬೆಳೆಗಳಿಗೆ ಬಳಕೆ ಮಾಡುತ್ತಾರೆ. ಮಲೆನಾಡು ಭಾಗದ ರೈತರು 35 ಕೆಜಿ ಸಾವಯವ ಗೊಬ್ಬರವನ್ನು ₹300 ರಂತೆ ಖರೀದಿ ಮಾಡುತ್ತಿದ್ದಾರೆ, ಉಳಿದಂತೆ ಎರೆಹುಳು ಗೊಬ್ಬರವನ್ನು ₹400ಗೆ ಚೀಲ ಖರೀದಿ ಮಾಡುತ್ತಿದ್ದಾರೆ. ಪ್ರತಿ ತಿಂಗಳು 3 ರಿಂದ 4 ಟನ್‌ ಗೊಬ್ಬರ ಪುರಸಭೆಯಿಂದ ಮಾರಾಟವಾಗುತ್ತಿದೆ. ಅತಿಹೆಚ್ಚು ಶಿವಮೊಗ್ಗ, ಮಂಗಳೂರು, ಗದಗ, ದಾವಣಗೆರೆ ಭಾಗದ ರೈತರು ಖರೀದಿ ಮಾಡುತ್ತಾರೆ.

ಹಲಿಗುಡ್ಡದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳ ಪಠ್ಯ ಕ್ರಮಕ್ಕೆ ಸಂಬಂಧಪಟ್ಟ ವಿಷಯ ಇರುವ ಕಾರಣ, ನೂರಾರು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಈ ಘನ ತ್ಯಾಜ್ಯ ವಸ್ತು ನಿರ್ವಹಣೆ ಘಟಕಕ್ಕೆ ಭೇಟಿ ನೀಡಿದ್ದಾರೆ. ಆ ವಿದ್ಯಾರ್ಥಿಗಳಿಗೆ ಇದೊಂದು ಪ್ರಯೋಗ ಶಾಲೆಯಂತಿದೆ.

ಪುರಸಭೆಯಿಂದ ನಿತ್ಯ 14 ಟನ್‌ ಕಸ ಬರುತ್ತಿದೆ. ಇದನ್ನು ನಿರ್ವಹಣೆ ಮಾಡಿ, ರೈತರ ಬೇಡಿಕೆ ಇರುವ ಸಾವಯವ ಹಾಗೂ ಎರೆಹುಳು ಗೊಬ್ಬರವನ್ನು ತಯಾರಿಸಲಾಗುತ್ತಿದೆ. ಮಲೆನಾಡು ಭಾಗದ ರೈತರು ಬಂದು ಗೊಬ್ಬರ ಖರೀದಿ ಮಾಡುತ್ತಿದ್ದಾರೆ ಎನ್ನುತ್ತಾರೆ ಹೂವಿನಹಡಗಲಿ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ.

ಜಿಲ್ಲೆಯಲ್ಲೇ ಹೂವಿನಹಡಗಲಿ ಘನ ತ್ಯಾಜ್ಯ ವಸ್ತು ವಿರ್ವಹಣೆ ಘಟಕ ಮಾದರಿಯಾಗಿದೆ. 12 ಕಾರ್ಮಿಕರು ಕೆಲಸ ಮಾಡುತ್ತಾರೆ. ಸುಂದರ ಪಟ್ಟಣ ನಿರ್ಮಾಣಕ್ಕಾಗಿ ಸ್ವಚ್ಛತೆ ಕಾಪಾಡಲು ಪುರಸಭೆ ವಾಹನಗಳಿಗೆ ಕಸ ನೀಡಬೇಕಿದೆ. ಹಾಳಾಗಿರುವ ವಸ್ತುಗಳಿಂದ ವೇಸ್ಟ್‌ ಟು ವಂಡರ್‌ ನಿರ್ಮಾಣ ಮಾಡಲಾಗಿದೆ ಎನ್ನುತ್ತಾರೆ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸೋಮಶೇಖರ.