ತಾಲೂಕಿನ ಕುರ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಳೆದ ಸಾವಯವ ಪದ್ಧತಿಯಲ್ಲಿ ವಿವಿಧ ಸೊಪ್ಪು, ತರಕಾರಿಯನ್ನು ಶಾಲಾ ಮಕ್ಕಳ ಬಿಸಿಯೂಟಕ್ಕೆ ಬಳಸುವ ಮೂಲಕ ಅಲ್ಲಿನ ಶಿಕ್ಷಕರು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕುರ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಳೆದ ಸೊಪ್ಪು, ತರಕಾರಿ ಬಿಸಿಯೂಟಕ್ಕೆ ಬಳಕೆ

ಸಂತೋಷ ದೈವಜ್ಞ

ಕನ್ನಡಪ್ರಭ ವಾರ್ತೆ ಮುಂಡಗೋಡ

ತಾಲೂಕಿನ ಕುರ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬೆಳೆದ ಸಾವಯವ ಪದ್ಧತಿಯಲ್ಲಿ ವಿವಿಧ ಸೊಪ್ಪು, ತರಕಾರಿಯನ್ನು ಶಾಲಾ ಮಕ್ಕಳ ಬಿಸಿಯೂಟಕ್ಕೆ ಬಳಸುವ ಮೂಲಕ ಅಲ್ಲಿನ ಶಿಕ್ಷಕರು ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬಹುತೇಕ ಶಾಲೆಗಳಲ್ಲಿ ತರಕಾರಿಯನ್ನು ಬೇರೆ ಬೇರೆ ಸಂತೆ ಪಟ್ಟಣದಿಂದ ಖರೀದಿಸಿ, ತಂದು ಬಿಸಿ ಊಟಕ್ಕೆ ಬಳಸುವುದು ಸಾಮಾನ್ಯ. ಆದರೆ, ಈ ಬಗ್ಗೆ ಕುರ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಫಲವತ್ತಾದ ಜಾಗವಿರುವುದರಿಂದ ಈ ಜಾಗವನ್ನು ಕೇವಲ ಉದ್ಯಾನವನ ಮಾತ್ರವಲ್ಲದೇ ಬಿಸಿಯೂಟಕ್ಕೆ ಅಗತ್ಯ ತರಕಾರಿ ಸೊಪ್ಪುಗಳನ್ನು ಬೆಳೆಯುವ ಯೋಜನೆಯನ್ನು ಶಾಲಾ ಶಿಕ್ಷಕರು, ಶಾಲಾಭಿವೃದ್ದಿ ಸಮಿತಿ, ಪಾಲಕರು ಹಾಗೂ ಮಕ್ಕಳು ರೂಪಿಸಿದ್ದಾರೆ.

ಶಾಲಾ ಆವರಣದಲ್ಲಿ ಗುಣಮಟ್ಟದ ಮೂಲಂಗಿ ಮುಂತಾದ ಸೊಪ್ಪು ತರಕಾರಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಈ ತರಕಾರಿ ಸೊಪ್ಪನ್ನು ಮಕ್ಕಳಿಗೆ ಬಿಸಿಯೂಟದಲ್ಲಿ ನೀಡುತ್ತಿದ್ದಾರೆ. ಇನ್ನೂ ವಾತಾವರಣಕ್ಕೆ ಅನುಗುಣವಾಗಿ ಬೇರೆ ಬೇರೆ ಸಮಯದಲ್ಲಿ ಬೀನ್ಸ್, ಬದನೆಕಾಯಿ, ಹರಿವೆ ಸೊಪ್ಪು, ಟೋಮೆಟೋ ಮುಂತಾದ ತರಕಾರಿಯನ್ನು ಬೆಳೆದು ಬಿಸಿಯೂಟಕ್ಕೆ ಬಳಸಲಾಗುತ್ತಿದೆ.

ಕುರ್ಲಿ ಶಾಲೆಯ ಶಿಕ್ಷಕರು ತಮ್ಮ ಕ್ರೀಯಾಸಿಲತೆಯ ಮೂಲಕ ಸುತ್ತಮುತ್ತ ಗ್ರಾಮಗಳ ಶಾಲೆಗಳಿಗೆ ಮಾದರಿಯಾಗಿದ್ದಾರೆ. ಶಾಲಾವರಣದಲ್ಲಿ ಉತ್ತಮವಾದ ಉದ್ಯಾನವನ ಕೂಡ ನಿರ್ಮಾಣ ಮಾಡಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.

ಮಕ್ಕಳಿಗೆ ಸೊಪ್ಪಿನಿಂದ ಮಕ್ಕಳಿಗೆ ಉತ್ತಮ ವಿಟಮಿನ್ ಅಂಶ ದೊರೆಯುತ್ತದೆ. ಜೊತೆಗೆ ಯಾವುದೇ ರಾಸಾಯನಿಕ ಔಷಧ ಹಾಗೂ ಕೀಟನಾಶಕ ಬಳಸಿರುವುದಿಲ್ಲ. ಗುಣಮಟ್ಟದ ಬಿಸಿಯೂಟ ನೀಡುವುದರ ಜೊತೆಗೆ ಅವರ ಆರೋಗ್ಯದ ಕಡೆ ಸದಾ ಕಾಳಜಿ ವಹಿಸಲಾಗುತ್ತಿದೆ ಎಂದು ಶಾಲೆಯ ಶಿಕ್ಷಕರು ತಿಳಿಸಿದ್ದಾರೆ.ಶಾಲೆಯಲ್ಲಿ ಪಠ್ಯ, ಪಠ್ಯೇತರ ಚಟುವಟಿಕೆಯೊಂದಿಗೆ ಕೈತೋಟದಲ್ಲಿ ಸೊಪ್ಪು, ತರಕಾರಿ ಬೆಳೆಯುವುದು ಸೇರಿ ಕೃಷಿ ಚಟುವಟಿಕೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದರಲ್ಲಿ ಶಾಲೆಯ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಪಾಲಕರು ಸಹ ಒಳ್ಳೆಯ ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ ನಾಗರಾಜ ಕೊರ್ಸೆ, ಎಸ್.ಡಿ.ಎಂ.ಸಿ ಅಧ್ಯಕ್ಷ