ಯಾವುದೇ ಸಮಾಜಕ್ಕೆ ಸಂಘಟನೆಯೇ ಶಕ್ತಿ: ತಮ್ಮಯ್ಯ

| Published : Feb 19 2024, 01:32 AM IST

ಸಾರಾಂಶ

ಯಾವುದೇ ಸಮಾಜದ ಶಕ್ತಿ ಎಂದರೆ ಅದು ಸಂಘಟನೆ, ಸಂಘಟಿತರಾದರೆ ಮಾತ್ರ ಆ ಸಮಾಜಕ್ಕೆ ನ್ಯಾಯ ದೊರಯುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

-ಜಿಲ್ಲಾ ಕುರುಹಿನ ಶೆಟ್ಟಿ ಮಹಿಳಾ ಸಂಘದಿಂದ ಪ್ರತಿಭಾ ಪುರಸ್ಕಾರ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಯಾವುದೇ ಸಮಾಜದ ಶಕ್ತಿ ಎಂದರೆ ಅದು ಸಂಘಟನೆ, ಸಂಘಟಿತರಾದರೆ ಮಾತ್ರ ಆ ಸಮಾಜಕ್ಕೆ ನ್ಯಾಯ ದೊರಯುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕುರುಹಿನ ಶೆಟ್ಟಿ ಮಹಿಳಾ ಸಂಘದ 7 ನೇ ವಾರ್ಷಿಕೋತ್ಸವ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕುರುಹಿನ ಶೆಟ್ಟಿ ಮಹಿಳಾ ಸಂಘ ಸಂಘಟಿತವಾಗಿ, ಸಮಾಜಮುಖಿಯಾಗಿ ಬೆಳೆದಿದೆ. ಈ ದೇಶದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯಿಂದ ಹಿಡಿದು ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ವಿಜ್ಞಾನಿ ಕಲ್ಪನಾ ಚಾವ್ಲ ಮತ್ತಿತರೆ ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲದಂತೆ ಕೆಲಸ ಮಾಡಿದ್ದಾರೆ. ಎಲ್ಲ ರಂಗದಲ್ಲೂ ಮಹಿಳೆಯರು ತಮ್ಮದೇ ಆದ ವಿಶಿಷ್ಟ ಸಾಧನೆ ಮಾಡಿದ್ದಾರೆ ಎಂದರು. ಮಕ್ಕಳು ಶಿಕ್ಷಣದಲ್ಲಿ ಉತ್ತಮ ಅಂಕ ತೆಗೆದಾಗ ಅವರನ್ನು ಪ್ರೋತ್ಸಾಹಿಸುವುದು ಉತ್ತಮ ಕಾರ್ಯ. ಇದರಿಂದ ಆ ವಿದ್ಯಾರ್ಥಿ ಗಳು ಮುಂದೆ ಸಮಾಜಮುಖಿಯಾಗಿ ಬೆಳೆಯುತ್ತಾರೆ. ಕುರುಹಿನ ಶೆಟ್ಟಿ ಮಹಿಳಾ ಸಂಘಕ್ಕೆ ನಿವೇಶನ ಕೊಡುವ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಸರಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಈ ಸಮಾಜದ ಮೇಲೆ ನನಗೆ ಅತ್ಯಂತ ಗೌರವವಿದೆ. ಶಾಸಕ ತಮ್ಮಯ್ಯ ಈಗ ನಿವೇಶನ ನೀಡುವ ಭರವಸೆ ನೀಡಿದ್ದಾರೆ. ಅದಕ್ಕೆ ನನ್ನ ಸಹಮತ ಇದೆ ಎಂದರು. ಮಹಿಳೆ ಅತ್ತೆಯಾಗಿ, ಮಗಳಾಗಿ, ಸೊಸೆಯಾಗಿ ಸಂಸಾರದ ಕಣ್ಣಾಗಿ ಕೆಲಸ ಮಾಡುತ್ತಾಳೆ. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಇಂದು ಮುಂದೆ ಇದ್ದಾರೆ ಎಂದು ಹೇಳಿದರು. ಬಿಜೆಪಿ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಪಲ್ಲವಿ ಸಿ.ಟಿ.ರವಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಹೆಚ್ಚು ಪ್ರಾತಿನಿಧ್ಯ ಇದೆ. ಎಲ್ಲ ಕಷ್ಟವನ್ನು ಹೊರುವುದೇ ಹೆಣ್ಣು. ಹೀಗಾಗಿ ಭೂಮಿಯನ್ನು ತಾಯಿಗೆ ಹೋಲಿಸಲಾಗಿದೆ. ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ ಎಂದರು. ಹಿರೇಮಗಳೂರು ಕಣ್ಣನ್ ಮಾತನಾಡಿ, ಶಾಸಕ ಎಚ್.ಡಿ.ತಮ್ಮಯ್ಯ ಅವರ ಕೈಯಲ್ಲೇ ಇಂದು ದೀಪ ಹಚ್ಚಿಸಿರುವುದಕ್ಕೆ ಕಾರಣವಿದೆ. ಅವರ ಸರಕಾರ 5 ಗ್ಯಾರಂಟಿ ಕೊಟ್ಟಿದೆ. ಮಹಿಳಾ ಸಂಘಕ್ಕೆ 6 ನೇ ಗ್ಯಾರಂಟಿಯಾಗಿ ಸಂಘದ ಬೇಡಿಕೆ ಯನ್ನು ಈಡೇರಿಸುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು. ಕುರುಹಿನ ಶೆಟ್ಟಿ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಾ ರಾಜೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕ್ರಮಕ್ಕೆ ಸಹಕರಿಸಿ ದವರಿಗೆ ಕೃತಜ್ಞತೆ ಸಲ್ಲಿಸಿದರು. ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸಂಘದ ರಾಜ್ಯ ಉಪಾಧ್ಯಕ್ಷ ಪ್ರಶಾಂತ್, ತರೀಕೆರೆ ಕುರುಹಿನ ಶೆಟ್ಟಿ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್, ದಾನಿ ಸೋಮಶೇಖರ್ ಮಾತನಾಡಿದರು. ಸಂಘದ ಗೌರವಾಧ್ಯಕ್ಷೆ ಚಂದ್ರಾವತಿ ಶಂಕರ್, ಉಪಾಧ್ಯಕ್ಷೆ ಪದ್ಮಾ ಮಹೇಶ್, ಕಾರ್ಯದರ್ಶಿ ತನುಜಾ ಶಿವಶಂಕರ್, ಸಹ ಕಾರ್ಯದರ್ಶಿ ಪ್ರತಿಮಾ ವೆಂಕಟೇಶ್, ಖಜಾಂಚಿ ಪ್ರಿಯಾ ಪರಮೇಶ್ ಉಪಸ್ಥಿತರಿದ್ದರು. ಲತಾ ಧರಣೇಶ ನಿರೂಪಿಸಿ, ತನುಜಾ ಶಿವಶಂಕರ್ ಸ್ವಾಗತಿಸಿದರು. 18 ಕೆಸಿಕೆಎಂ 2

ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ನಡೆದ ಕುರುಹಿನ ಶೆಟ್ಟಿ ಮಹಿಳಾ ಸಂಘದ ವಾರ್ಷಿಕೋತ್ಸವ ಸಮಾರಂಭವನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು.