ಸಾರಾಂಶ
ಸಿದ್ದಾಪುರ: ತಾಲೂಕಿನ ಹಲಗಡಿಕೊಪ್ಪದಲ್ಲಿ ತಾಲೂಕು ಕರೆ ಒಕ್ಕಲಿಗರ ಸಂಘದ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮದ ಪೂರ್ವಭಾವಿ ಸಭೆ ಆದಿಚುಂಚನಗಿರಿ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆಯಿತು.
ಕರೆ ಒಕ್ಕಲಿಗರ ಸಂಘದ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಸಮಾಜದ ಅಭಿವೃದ್ಧಿಗೆ ಸಂಘಟನೆ ಬಹುಮುಖ್ಯ. ಕಳೆದ ಹಲವು ವರ್ಷಗಳ ಹೋರಾಟದ ಫಲವಾಗಿ ಸಿದ್ದಾಪುರ ಭಾಗದಲ್ಲಿ ಸಂಘಟನೆ ಗಟ್ಟಿಯಾಗಿ ಇದೀಗ ಸಮುದಾಯ ಭವನ ನಿರ್ಮಾಣ ಹಂತಕ್ಕೆ ತಲುಪಿದ್ದು, ಈ ಸುಂದರ ಗಳಿಗೆಯಲ್ಲಿ ಪ್ರತಿಯೊಬ್ಬರು ಸಮಾಜಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಪ್ರಪಂಚದಾದ್ಯಂತ ತನ್ನ ಕಂಪನ್ನು ಹರಡಿದೆ. ಬಾಲಗಂಗಾಧರನಾಥ ಸ್ವಾಮೀಜಿ ಈ ಒಂದು ಮಹತ್ ಕಾರ್ಯದಲ್ಲಿ ತೊಡಗಿಸಿಕೊಂಡು ಶಿಕ್ಷಣ, ವೈದ್ಯಕೀಯ, ಸಾಮಾಜಿಕ ಜವಾಬ್ದಾರಿ ಹೀಗೆ ಹತ್ತಾರು ಕ್ಷೇತ್ರದಲ್ಲಿ ಸೇವೆ ಒದಗಿಸಿದರು. ಉತ್ತರಕನ್ನಡ ಜಿಲ್ಲೆಯಲ್ಲಿಯೂ ಶ್ರೀಮಠ ಕಳೆದ ೩೦ ವರ್ಷದಿಂದ ಸಾಮಾಜಿಕ, ಶೈಕ್ಷಣಿಕ ಸೇವೆ ಜೊತಗೆ ಎರಡು ಶಾಖಾ ಮಠದ ಮೂಲಕ ಸಮುದಾಯದ ಅಭಿವೃದ್ಧಿಗೆ ಸಂಪೂರ್ಣ ಕಾರ್ಯನಿರ್ವಹಣೆ ಮಾಡುತ್ತಿದೆ. ಇದೀಗ ಘಟ್ಟದ ಮೇಲ್ಭಾಗದಲ್ಲಿಯೂ ಸಮುದಾಯದವರನ್ನು ಒಗ್ಗೂಡಿಸಿ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನೆ ಸಜ್ಜಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಹಲಗಡಿಕೊಪ್ಪದಲ್ಲಿ ಎಪ್ರಿಲ್ ೧೧ರಂದು ನಡೆಯಲಿರುವ ಸಮುದಾಯ ಭವನ ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಶಾಖಾ ಮಠದ ಪೂಜ್ಯರು, ಗಣ್ಯರು ಆಗಮಿಸಲಿದ್ದಾರೆ.ಸಮಾಜ ಮುಖಂಡರಾಡ ಎಂ.ಟಿ. ಗೌಡ ಮಾತನಾಡಿ, ಭವನ ನಿರ್ಮಾಣ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಮುಂದೆ ಬಂದು ಜವಾಬ್ದಾರಿ ವಹಿಸಿಕೊಂಡು ಉತ್ತಮ ರೀತಿಯಲ್ಲಿ ನಿರ್ವಹಿಸುವಂತಾಗಬೇಕು ಎಂದರು.
ಇನ್ನು ಇದೇ ಸಂದರ್ಭದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗವನ್ನು ನೀಡಿದ ಹಲಗಡಿಕೊಪ್ಪದ ತೃಪ್ತಿನಗರದ ವೆಂಕಟೇಶ ರಾಮದಾಸ್ ಕಾಂತು ಅವರನ್ನು ಶ್ರೀಮಠದ ಪರವಾಗಿ ನಿಶ್ಚಲಾನಂದ ನಾಥ ಸ್ವಾಮೀಜಿ ಗೌರವಿಸಿದರು.ಇದೇ ಸಂದರ್ಭದಲ್ಲಿ ಪ್ರಚಾರ ಸಮಿತಿ, ಆರ್ಥಿಕ, ಉಟೋಪಚಾರ, ವೇದಿಕೆ, ನೀರಾವರಿ, ಪೂರ್ಣಕುಂಭ, ರ‍್ಯಾಲಿ, ಧಾರ್ಮಿಕ, ಪಾರ್ಕಿಂಗ್ ಹೀಗೆ ಹಲವು ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.
ಪೂರ್ವಭಾವಿ ಸಭೆಯಲ್ಲಿ ಹೊನ್ನಾವರ ತಾಲೂಕು ಒಕ್ಕಲಿಗರ ಸಂಘದ ಕೃಷ್ಣೇಗೌಡ, ಬಾಲಚಂದ್ರ ಗೌಡ, ಉಪನ್ಯಾಸಕ ಉಮೇಶ್ ಭದ್ರಾಪುರ, ಉಮಾಕಾಂತ ಗೌಡ, ಸಿದ್ದಾಪುರ ತಾಲೂಕು ಕರೆ ಒಕ್ಕಲಿಗರ ಸಂಘದ ಗೌರವ ಅಧ್ಯಕ್ಷ ಮಹಾಬಲೇಶ್ವರ ಗೌಡ ಸರಕುಳಿ, ಅಧ್ಯಕ್ಷ ಸುಬ್ರಾಯ್ ಗೌಡ, ಉಪಾಧ್ಯಕ್ಷ ಅಮ್ಮು ಗೌಡ, ಸಲಹಾ ಸಮಿತಿ ಸದಸ್ಯ ಶಂಕರ್ ಮಂಜುನಾಥ ಗೌಡ, ಸೀತಾರಾಮ್ ಗೌಡ, ನಾಗಪತಿ ಗೌಡ, ವಿನಾಯಕ ಗೌಡ ಇದ್ದರು.