ಸಾರಾಂಶ
ಹಾನಗಲ್ಲ: ಭಾವಸಾರ ಕ್ಷತ್ರಿಯ ಸಮಾಜದ ಸಂಘಟನೆ, ಅಭಿವೃದ್ಧಿ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು ಇಂದಿನ ಅತ್ಯಗತ್ಯವಾಗಿದ್ದು, ಸಮಾಜ ಬಾಂಧವರು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು ಎಂದು ಭಾವಸಾರ ಕ್ಷತ್ರಿಯ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ ಮಾಳದಕರ ಹೇಳಿದರು.
ಹಾನಗಲ್ಲಿನಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಹಾಗೂ ಮಹಿಳಾ ಮಂಡಳ ಆಯೋಜಿಸಿದ ಡಿಂಡಿ ಉತ್ಸವದಲ್ಲಿ ಕೀರ್ತನೆ, ಭಜನೆ ಹಾಗೂ ಪ್ರತಿಭಾವಂತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸಮಾಜದ ವಿದ್ಯಾರ್ಥಿಗಳ ಉನ್ನತಿಯೇ ನಿಜವಾದ ಸಮಾಜ ಸೇವೆ. ಹಾವೇರಿ ಜಿಲ್ಲೆಯಲ್ಲಿ ಭಾವಸಾರ ಕ್ಷತ್ರಿಯ ಸಮಾಜವನ್ನು ಗಟ್ಟಿಯಾಗಿ ಕಟ್ಟಿಕೊಳ್ಳುವ ಮೂಲಕ ಸಮಾಜದ ಒಗ್ಗಟ್ಟು ಪ್ರದರ್ಶಿಸಬೇಕು. ಸಮಾಜದ ಮುಂದಿನ ಸಂಘಟನಾ ಕಾರ್ಯಕ್ರಮವನ್ನು ಸವಣೂರಿನಲ್ಲಿ ನಡೆಸುವ ಉದ್ದೇಶವಿದೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಭಾವಸಾರ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷರೂ ಆದ ಪುರಸಭೆ ನಿವೃತ್ತ ಮುಖ್ಯಾಧಿಕಾರಿ ನಾರಾಯಣ ನವಲೆ, ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸಮಾಜದ ಸುಭದ್ರತೆಗೆ ಒಗ್ಗೂಡಿ ಕೆಲಸ ಮಾಡೋಣ. ನಮ್ಮ ರಕ್ಷಣೆ ನಮ್ಮ ಹೊಣೆ. ಆರ್ಥಿಕ ಸಬಲತೆಯೂ ಅತಿ ಮುಖ್ಯ. ಧಾರ್ಮಿಕ ಕಾರ್ಯಗಳ ಮೂಲಕ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡುವುದು ಕೂಡ ಅತ್ಯಂತ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಅವಕಾಶಗಳು ಚನ್ನಾಗಿವೆ. ಆದರೆ ಅದರ ಸದುಪಯೋಗ ಆಗಬೇಕು ಎಂದರು.
ಹಾವೇರಿ ತಾಲೂಕು ಅಧ್ಯಕ್ಷ ಯುವರಾಜ ನವಲೆ, ಸಂಜೀವ ಬೇದ್ರೆ, ಅಶೋಕ ಪುಕಾಳೆ, ಅರವಿಂದ ಸುಲಾಖೆ, ಚಂದ್ರಕಾಂತ ಬೇದ್ರೆ, ಅರುಣ ತಿರುಮಲೆ, ಬಾಪು ಕುಂಠೆ, ವಿಜಯಲಕ್ಷ್ಮೀ ಪುಕಾಳೆ, ಭಾನು ಸುಲಾಖೆ, ಮಂಜುಳಾ ಬೇದ್ರೆ, ಅನಿತಾ ತಾಂದಳೆ, ಶೃತಿ ಬೇದ್ರೆ, ರೇಖಾ ತಾಂದಳೆ, ರೂಪಾ ಬೇದ್ರೆ ಈ ಸಂದರ್ಭದಲ್ಲಿದ್ದರು.ಇದೇ ಸಂದರ್ಭದಲ್ಲಿ ಬಿಇಡಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿದ ಸುಜಾತಾ ಕುಂಠೆ, ಶಿಕ್ಷಣ ಹಾಗೂ ಉದ್ಯೋಗ ಆಕಾಂಕ್ಷಿಯಾಗಿ ಕೆನಡಾ ದೇಶಕ್ಕೆ ತೆರಳುತ್ತಿರುವ ಶ್ರುತಿ ಪುಕಾಳೆ, ನಿವೃತ್ತ ಶಿಕ್ಷಕ ರವಿರಾಜ ತಿರುಮಲೆ ಅವರನ್ನು ಸನ್ಮಾನಿಸಲಾಯಿತು.