ಸಾರಾಂಶ
ದೇವರಹಿಪ್ಪರಗಿ: ಶರಣರು ಮಾಡಿದ ಸಾಧನೆ, ಸನ್ಮಾರ್ಗಗಳನ್ನು ಕೇಳುವುದರಿಂದ ಭಕ್ತರ ಹಲವಾರು ಸಂಕಷ್ಟಗಳು ತಾವಾಗಿಯೇ ನಿವಾರಣೆಯಾಗುತ್ತವೆ ಎಂದು ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಶರಣರು ಮಾಡಿದ ಸಾಧನೆ, ಸನ್ಮಾರ್ಗಗಳನ್ನು ಕೇಳುವುದರಿಂದ ಭಕ್ತರ ಹಲವಾರು ಸಂಕಷ್ಟಗಳು ತಾವಾಗಿಯೇ ನಿವಾರಣೆಯಾಗುತ್ತವೆ ಎಂದು ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಭಕ್ತಿ ಭಂಡಾರಿ ಬಸವೇಶ್ವರರ ಪುರಾಣ ಮಂಗಳೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಧರ್ಮ ಪರವಾಗಿರಬೇಕು. ನಾವು ಮಾಡುವ ಕಾಯಕದಲ್ಲಿ ನಮ್ಮನ್ನು ತೊಡಗಿಸಿಕೊಂಡು ಸಮಾಜದ ಏಳಿಗೆಗೂ ತಮ್ಮ ಕೊಡುಗೆ ನೀಡಬೇಕು. ಭಕ್ತರ ಕಷ್ಟದ ಪರಿಹಾರಕ್ಕೆ ಕ್ಷೇತ್ರದಲ್ಲಿ ಸದಾಕಾಲ ಪೂಜೆ, ಧಾರ್ಮಿಕ ವಿಧಿ ವಿಧಾನ ಮಾಡಿಕೊಂಡು ಬರಲಾಗುತ್ತಿದೆ. ಚಿಕ್ಕ ಗ್ರಾಮವಾದರೂ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಬರುವ ದಿನಗಳಲ್ಲಿ ಗ್ರಾಮಕ್ಕೆ ಜಗದ್ಗುರುಗಳನ್ನು ಕರೆಸುವ ಕಾರ್ಯವನ್ನು ನಾವೆಲ್ಲರೂ ಕೂಡಿ ಮಾಡೋಣ ಎಂದು ಹೇಳಿದರು.
ಸಾನ್ನಿಧ್ಯವನ್ನು ಖಾನಾಪುರದ ಮೌನ ಯೋಗಿ ಕಲ್ಯಾಣದಯ್ಯ ಸ್ವಾಮೀಜಿ, ಹೊನ್ನಳ್ಳಿಯ ಗುರುಲಿಂಗಯ್ಯ ಗದ್ದಗಿಮಠ ಸ್ವಾಮೀಜಿ, ಸಿದ್ದಯ್ಯ ಹಿರೇಮಠ ವಹಿಸಿದ್ದರು. ಪುರಾಣ ಪ್ರವಚನಕಾರ ಈರಣ್ಣ ಶಾಸ್ತ್ರಿಗಳು ಪ್ರವಚನ ನೀಡಿದರು. ಕಲ್ಲಯ್ಯ ಪಡದಳ್ಳಿ ಅವರ ಜೊತೆ ಸಂಗೀತ ಸೇವೆಯೊಂದಿಗೆ ಪ್ರಾಣೇಶ ಯಡ್ರಾಮಿ ತಬಲಾ ಸಾತ್ ನೀಡಿದರು.ಕಾರ್ಯಕ್ರಮಕ್ಕೂ ಮೊದಲು ಭಕ್ತಿ ಭಂಡಾರಿ ಶ್ರೀ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಶಾಲಾ ವಿದ್ಯಾರ್ಥಿಗಳು ಶರಣ ಶರಣೆಯರ ವೇಷಭೂಷಣ ತೊಟ್ಟು ಕಾರ್ಯಕ್ರಮಕ್ಕೆ ಮೆರುಗು ತಂದರು.