ಪವಾಡ ಪುರುಷ ದೋಟಿಹಾಳದ ಅವಧೂತ ಶುಖಮುನಿ ಸ್ವಾಮೀಜಿ

| Published : Mar 10 2024, 01:47 AM IST

ಪವಾಡ ಪುರುಷ ದೋಟಿಹಾಳದ ಅವಧೂತ ಶುಖಮುನಿ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

18ನೇ ಶತಮಾನದಿಂದಲೇ ಅವಧೂತ ಶುಖಮುನಿ ಸ್ವಾಮೀಜಿ ಜೀವಂತ ಇರುವಾಗಲೇ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ಆರಂಭಿಸಿದ್ದ ಶ್ರೀಗಳು ಅನೇಕ ಪವಾಡಗಳನ್ನು ಮಾಡುವ ಮೂಲಕ ಮನೆ ಮಾತಾಗಿದ್ದರು.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ಈ ನಾಡಿನಲ್ಲಿ ಅನೇಕ ಪವಾಡ ಪುರುಷರು ಸಾಧು ಸಂತರು ಉದಯಿಸುವ ಮೂಲಕ ಬಾಳು ಬೆಳಗಿ ತಮ್ಮದೇ ಆದ ಕೀರ್ತಿ ಬಿಟ್ಟು ಹೋಗಿದ್ದಾರೆ. ಅಂತಹ ಸಾಲಿನಲ್ಲಿ ತಾಲೂಕಿನ ದೋಟಿಹಾಳ ಗ್ರಾಮದ ಅವಧೂತ ಶುಖಮುನಿ ಸ್ವಾಮಿಗಳು ಓರ್ವರು.

18ನೇ ಶತಮಾನದಿಂದಲೇ ಅವಧೂತ ಶುಖಮುನಿ ಸ್ವಾಮೀಜಿ ಜೀವಂತ ಇರುವಾಗಲೇ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ಆರಂಭಿಸಿದ್ದ ಶ್ರೀಗಳು ಅನೇಕ ಪವಾಡಗಳನ್ನು ಮಾಡುವ ಮೂಲಕ ಮನೆ ಮಾತಾಗಿದ್ದರು. ಭಕ್ತರು 18-19ನೇ ಶತಮಾನದಲ್ಲಿಯೇ ಅವಧೂತ ಶುಖಮುನಿ ಸ್ವಾಮೀಜಿ ಜೀವಂತ ಇರುವಾಗಲೇ ಜಾತ್ರೆ ಹಾಗೂ ಪಲ್ಲಕ್ಕಿ ಉತ್ಸವ ಆರಂಭಿಸಿದ್ದರು. ಅವರು ಲಿಂಗೈಕ್ಯರಾದ ನಂತರವೂ ಅವರ ಇಚ್ಛೆಯಂತೆ ಗ್ರಾಮಸ್ಥರು ಶಿವರಾತ್ರಿ ಅಮಾವಾಸ್ಯೆಯಂದು (ಮಾ.10) ಜಾತ್ರೆಯನ್ನು ಮಾಡಲಾಗುತ್ತಿದ್ದು, ಸಹಸ್ರಾರು ಭಕ್ತರ ಜಯ ಘೋಷಗಳ ನಡುವೆ ಮಹಾರಥೋತ್ಸವ ನಡೆಯಲಿದೆ.

ಭಾವೈಕ್ಯತೆಯ ಮಠ: ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಅವಧೂತ ಶುಖಮುನಿ ಸ್ವಾಮೀಜಿ ದೇವಸ್ಥಾನವು ಕೇವಲ ಒಂದೇ ಧರ್ಮ, ಜಾತಿಗೆ ಸೀಮಿತವಾಗಿಲ್ಲ. ಇಲ್ಲಿಗೆ ಸರ್ವ ಧರ್ಮದವರು ಬಂದು ಸ್ವಾಮೀಜಿಯನ್ನು ಆರಾಧಿಸುತ್ತಾರೆ, ಪೂಜಿಸುತ್ತಾರೆ. ಈ ಮಠಕ್ಕೆ ಯಾವುದೇ ಪೀಠಾಧಿಪತಿ ಸಹ ಇಲ್ಲ. ಇದು ಕೊಪ್ಪಳ ಜಿಲ್ಲೆಯಲ್ಲಿಯೇ ಭಾವೈಕ್ಯತೆ ಸಾರುವ ಮಠ ಎಂಬ ಖ್ಯಾತಿಗೆ ಹೆಸರಾಗಿದೆ.

ಶ್ರೀಗಳ ಇತಿಹಾಸ: ಈ ಹಿಂದೆ ದೋಟಿಹಾಳದ ದಕ್ಷಿಣ ಭಾಗಕ್ಕೆ ದಟ್ಟವಾಗಿ ಬೆಳೆದಿದ್ದ ಡಬಗಳ್ಳಿ ಗಿಡದ ಮಧ್ಯದಲ್ಲಿ ಪುರಾತನ ಬಯಲು ಬಸವೇಶ್ವರ ದೇವಸ್ಥಾನವಿತ್ತು. ಒಂದು ದಿನ ಕುರಿಮರಿಯೊಂದು ತಪ್ಪಿಸಿಕೊಂಡು ಅಲ್ಲಿಗೆ ಹೋಯಿತು. ಕುರಿಗಾಹಿ ಕುರಿ ಹುಡುಕುತ್ತಾ ಬಸವೇಶ್ವರ ದೇವಾಲಯದ ಹತ್ತಿರ ಹೋಗಿ ನೋಡಿದಾಗ ಕಲ್ಲು ಬಂಡೆಯ ಮೇಲೆ ದಿಗಂಬರ ಸ್ವರೂಪದಲ್ಲಿ ನೆಲದಿಂದ ಸುಮಾರು ನಾಲ್ಕು ಅಡಿ ಎತ್ತರದಲ್ಲಿ ಯೋಗಾಸನದಲ್ಲಿದ್ದ ಯೋಗಿಯನ್ನು ಕಂಡು ಕುರಿಗಾಹಿ ಆಶ್ಚರ್ಯಚಕಿತನಾಗಿ ಗ್ರಾಮಸ್ಥರಿಗೆ ತಿಳಿಸುತ್ತಾನೆ.

ಗ್ರಾಮದ ಪೊಲೀಸ್‌ಗೌಡ ರಾಜೇಗೌಡರು ಗ್ರಾಮಸ್ಥರೊಡನೆ ದೇವಾಲಯದ ಹತ್ತಿರ ಬಂದು ನೋಡಿ ಆತನ ಕುರಿತು ವಿಚಾರಣೆ ನಡೆಸಿದಾಗ ಅವರಿಂದ ಬಂದ ಉತ್ತರ ಕೇವಲ ಮೌನ. ಇದನ್ನು ಅರ್ಥ ಮಾಡಿಕೊಳ್ಳದೇ ರಾಜೇಗೌಡರು ಈತ ಮಹಾಕಳ್ಳ ಇರಬಹುದೆಂದು ಭಾವಿಸಿ ಚಾವಡಿ ಕಂಬಕ್ಕೆ ಕಟ್ಟಿ ಮುಳ್ಳು ಕಟ್ಟಿಗೆಗಳಿಂದ ಹೊಡೆಸುತ್ತಾರೆ. ಆದರೆ ಕಟ್ಟಿಗೆಗಳು ಮುರಿದವೇ ಹೊರತು, ಯೋಗಿ ಮುಖದಲ್ಲಿ ದುಃಖದ ಚಿಹ್ನೆ, ನೋವು ಕಾಣಲಿಲ್ಲ. ಶಾಂತಚಿತ್ತನಾಗಿದ್ದ.

ಶುಖಮುನಿ ನಾಮಕರಣ: ಅದೇ ಸಮಯಕ್ಕೆ ಸಿದ್ದಲಿಂಗ ಮಹಾಸಾಧುಗಳು ಚಾವಡಿಗೆ ಬಂದು ಹೊಡೆಯುವುದನ್ನು ನಿಲ್ಲಿಸಲು ತಿಳಿಸಿದರು. ನಂತರ ಇವರಲ್ಲಿನ ಲಕ್ಷಣಗಳನ್ನು ಕಂಡು ಈತ ಕಳ್ಳನಲ್ಲ, ಮಹಾಯೋಗಿ ಪವಾಡ ಪುರುಷರು. ಇವರು ಪುರಾಣದಲ್ಲಿ ಬರುವಂತಹ ವ್ಯಾಸರ ಮಗ ಶುಖಮುನಿಯ ಪುನರ್ ಅವತಾರ ಇರಬಹುದು ಎಂದು ಅರಿತು ಶುಖಮುನಿ ಎಂದು ಪುನರ್‌ನಾಮಕರಣ ಮಾಡಿದರು.

ಸೇವೆ ಮಾಡಿದ ಚೌರಿ ಮಲ್ಲಮ್ಮ: ಶುಖಮುನಿ ಸ್ವಾಮಿಗಳನ್ನು ಮಲ್ಲಮ್ಮ ಚೌರಿ ಹೆಸರಿನ ಅಜ್ಜಿ ತಮ್ಮ ಮನೆಗೆ ಕರೆದುಕೊಂಡು ಬಂದು ಮಂಚದ ಮೇಲೆ ಕುಳಿತುಕೊಳ್ಳಲು ತಿಳಿಸಿ ಸ್ವಾಮಿಗಳ ದೇಹಕ್ಕೆ ಚುಚ್ಚಿರುವ ಮುಳ್ಳುಗಳನ್ನು ಒಂದೊಂದು ತೆಗೆಯುತ್ತಿದ್ದಳು. ಬಹಳ ಹೊತ್ತಿನ ನಂತರ ಶುಖಮುನಿಗಳು ನಿದ್ರೆಗೆ ಜಾರಿದರು. ಇಂದಿಗೂ ಅವರ ಮನೆತನವು ಶುಖಮುನಿ ದೇವರಿಗೆ ನಡೆದುಕೊಳ್ಳುತ್ತಿದ್ದಾರೆ.

ಶರೀರ ತ್ಯಾಗ: ಅವಧೂತ ಶುಖಮುನಿ ಸ್ವಾಮೀಜಿ ಹೀಗೆ ಹಲವು ಪವಾಡಗಳನ್ನು ಮಾಡುತ್ತಾ ಕೆಲ ದಿನಗಳು ಉರುಳಿದವು 1938ರ ನವೆಂಬರ್ 26 ರಂದು (ಭಾದ್ರಪದ ಶುದ್ಧ ಪ್ರತಿಪದ ಶುಕ್ರವಾರ) ಬೆಳಿಗ್ಗೆ 8 ಗಂಟೆಗೆ ಶುಖಮುನಿ ತಾತನವರು ಶ್ರೀ ರುದ್ರಮುನಿ ಸ್ವಾಮೀಜಿ ಮಠದ ಹತ್ತಿರ ಲಿಂಗೈಕ್ಯರಾದರು. ಗ್ರಾಮದ ಭಕ್ತರು ಒಗ್ಗೂಡಿ ಸಾಧು-ಸಂತರ ಮಠದಲ್ಲಿ ಧಾರ್ಮಿಕ ವಿಧಿವಿಧಾನಗಳಿಂದ ಗದ್ದುಗೆ ಪ್ರತಿಷ್ಠಾಪಿಸಿದರು.

ಸ್ವಾಮೀಜಿ ಗದ್ದುಗೆಯನ್ನು 1968ರಲ್ಲಿ ದುರಸ್ತಿಪಡಿಸುವಾಗ ಗದ್ದುಗೆ ಮೇಲೆ ಸಂಗಮವರಿ ಕಲ್ಲುಗಳನ್ನು ಜೋಡಿಸುವಾಗ ಒಡೆದು ಹೋಗುತ್ತದೆ. ಸ್ವಾಮಿಗಳು ಲಿಂಗೈಕ್ಯರಾಗಿರುವ ಸಮಯದಲ್ಲಿ ಪೂಜೆ ಮಾಡಲು ಹಾಕಿರುವ ಹೂವು, ಹೋಳಿಗೆ, ತೆಂಗಿನಕಾಯಿ, ಬೆಳಗಿರುವ ಊದುಬತ್ತಿ ಹಾಗೆ ಉರಿಯುತ್ತಿದ್ದವು. ಇದಕ್ಕೆ ಸ್ವಾಮಿಗಳ ಪವಾಡವೇ ಸಾಕ್ಷಿಯಾಗಿತ್ತು ಎನ್ನಬಹುದು.

ಈ ಘಟನೆ ನಡೆದ ಕೆಲವು ಕ್ಷಣಗಳಲ್ಲಿ ಸಾವಿರಾರು ಜನರು ಆಗಮಿಸಿದ್ದರು. ಇಂತಹ ಮಹಿಮಾ ಪುರುಷನ ಜಾತ್ರೆ ಮಾಡಬೇಕು ಎಂದು ಅರಿತ ಜನರು ಭಜನೆ ಆರಂಭಿಸಿ ಶಿವರಾತ್ರಿ ಅಮಾವಾಸ್ಯೆ ದಿನ ಜಾತ್ರೆ ಮಾಡಲು ನಿರ್ಧರಿಸಿದರು.

ಪಲ್ಲಕ್ಕಿ ಉತ್ಸವ: ಅವಧೂತ ಶುಖಮುನಿ ಸ್ವಾಮೀಜಿ ಸುತ್ತಮುತ್ತಲಿನ ಗ್ರಾಮಗಳಾದ ಹೆಸರೂರು, ಕಲಕೇರಿ, ಕೇಸೂರು, ಜಾಲಿಹಾಳ, ರ್‍ಯಾವಣಕಿ, ನಡಲಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳುತ್ತಿದ್ದರು. ಜಾತ್ರೆಯ ಮುಂಚಿತವಾಗಿ ಸುಮಾರು ಎಂಟು ದಿನಗಳ ಕಾಲ ಪಲ್ಲಕ್ಕಿ ಉತ್ಸವ ಆಚರಿಸಲಾಗುತ್ತಿದೆ. ಈ ಆಚರಣೆ ವೇಳೆ ಓಂ ನಮಃ ಶಿವಾಯ ಎಂಬ ಮಂತ್ರ ಪಠಣ ಮಾಡುತ್ತಾರೆ. ಪಲ್ಲಕ್ಕಿಯು ಮೂರು ದಿನಗಳ ಕಾಲ ಹಳ್ಳಿಗಳಿಗೆ ಸಂಚರಿಸುತ್ತದೆ.

ಸಪ್ತಭಜನೆ ಹಾಗೂ ಅನ್ನದಾಸೋಹ: ರಥೋತ್ಸವಕ್ಕೆ ಎಂಟು ದಿನಗಳ ಮುಂಚಿತವಾಗಿ ಮಠದಲ್ಲಿ ಸಪ್ತಭಜನೆಯನ್ನು ಹಾಗೂ ಅನ್ನದಾಸೋಹವನ್ನು ಆರಂಭಿಸಲಾಗುತ್ತದೆ. ಭಜನೆಯಲ್ಲಿ ದೋಟಿಹಾಳ, ಕೇಸೂರು ಸುತ್ತಮುತ್ತಲಿನ ಗ್ರಾಮಸ್ಥರು, ಮಹಿಳೆಯರು, ಯುವಕರು ಭಾಗವಹಿಸುತ್ತಾರೆ. ಇದು ದಿನದ 24 ತಾಸುಗಳ ಕಾಲ ನಡೆಯುತ್ತದೆ. ಸಪ್ತಭಜನೆ ಮುಕ್ತಾಯದ ನಂತರ ಸಹಸ್ರಾರು ಭಕ್ತರ ಮಧ್ಯೆ ಮಹಾರಥೋತ್ಸವ ನಡೆಯುತ್ತದೆ. ಭಕ್ತರು ಉತ್ತತ್ತಿ, ಬಾಳೆಹಣ್ಣನ್ನು ಸಮರ್ಪಣೆ ಮಾಡುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ.