ಸಾರಾಂಶ
ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ನೊಳಂಬ ಸಮಾಜವಾಗಿದ್ದು, ವಿರೋಧ, ದ್ವೇಷ ತೊರೆದು ಆ ಸಮಾಜವು ಸಂಘಟನೆಯಾಗಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ನೊಳಂಬ ಸಮಾಜವಾಗಿದ್ದು, ವಿರೋಧ, ದ್ವೇಷ ತೊರೆದು ಆ ಸಮಾಜವು ಸಂಘಟನೆಯಾಗಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.ಸಮೀಪದ ನಂದಿಗುಡಿ ವೃಷಭಪುರಿ ಪೀಠದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡ ಕೆಂಚವೀರೇಶ್ವರ ಶಿವಯೋಗಿಗಳ ಪಣ್ಯ ಸಂಸ್ಮರಣೆ, ಸಿದ್ದರಾಮೇಶ್ವರರ 15ನೇ ವರ್ಷದ ಸೂರ್ಯ ಸಿಂಹಾಸನಾರೋಹಣ ಮತ್ತು ನಂದಿ ಸ್ವ-ಸಹಾಯ ಸಂಘಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಮಾಜವನ್ನು ಒಡೆಯುವ, ವಿಷಬೀಜ ಬಿತ್ತುವ ಕೆಲಸ ನಡೀತಾ ಇದೆ. ಯಾವುದು ಸರಿ, ಯಾವುದು ತಪ್ಪು ಎನ್ನುವುದು ಎಲ್ಲರಿಗೂ ತಿಳಿದಿದೆ. ಸಮಾಜ ತಿದ್ದುವುದೋ, ಸರಿದಾರಿಗೆ ಕರೆದೊಯ್ಯಬಹುದೋ ಗೊಂದಲವಿದೆ ಎಂದು ತಿಳಿಸಿದರು.12ನೇ ಶತಮಾನದ ಬಸವೇಶ್ವರರ ಸಮ ಸಮಾಜ ನಿರ್ಮಾಣ ಮಾಡುವ ಗುರಿ ಇಂದು ಕನಸಾಗಿದೆ. ಸಮಾಜವನ್ನು ತಿದ್ದುವುದು ಮಠಗಳಿಗೆ ಮಾತ್ರ ಸೀಮಿತ ಬೇಡ. ಸರ್ವರೂ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ನೀಡವುದು ತುರ್ತು ಅಗತ್ಯವಾಗಿದೆ ಎಂದರು.ಬಿಎಸ್. ಯಡಿಯೂರಪ್ಪ ಅವಧಿಯಲ್ಲಿ ರೈತರ ಪಂಪ್‌ಸೆಟ್ ಅಳವಡಿಕೆಗೆ 25 ಸಾವಿರವಿತ್ತು. ಇಂದು ಕಾಂಗ್ರೆಸ್ ಸರ್ಕಾರ ಮೂರು ಲಕ್ಷ ಜಮಾ ಕಟ್ಟಿ ಅಂದ್ರೆ ರೈತರು ಏನು ಮಾಡಬೇಕು? ಇತ್ತ ಅತೀವೃಷ್ಟಿ, ನೆರೆ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆಯಿಲ್ಲ, ಸರ್ಕಾರ ಎಲ್ಲರಿಗೂ ಆರ್ಥಿಕ ಶಕ್ತಿ ತುಂಬದೇ ದಿವಾಳಿಯಾಗಿದೆ ಎಂದು ವಿಜಯೇಂದ್ರ ಟೀಕಿಸಿದರು.ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿನ ಮಾತನಾಡಿ, 48 ವರ್ಷದಿಂದ ನೋಡುತ್ತಿದ್ದೇನೆ. ಮಠದಲ್ಲಿ ಎಲ್ಲವನ್ನು ಅನುಭವಿಸಿದ್ದೇನೆ. ಅಲ್ಲದೇ ಮಠವು ಧಣಿದಿದೆ. ಈಗಲೂ ಸಹ ನಮ್ಮನ್ನು ತೇಜೋವಧೆ ಮಾಡಿದರೆ ಬಿಡಲ್ಲ, ಕೇಸರಿ ಬಟ್ಟೆ ಧರಿಸಿದ್ದೇನೆ. ಯಾರನ್ನು ಸುಮ್ನೆ ಬಿಡೋ ಮಾತೇ ಇಲ್ಲ ಎಂದು ಟೀಕಿಸುವವರಿಗೆ ಎಚ್ಚರಿಕೆ ನೀಡಿದರು.ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಚುನಾವಣೆಯಲ್ಲಿ ಆಕಸ್ಮಿಕವಾಗಿ ಭೇಟಿಯಾಗಿದ್ದಕ್ಕೆ ನೊಳಂಬ ಸಮಾಜದ ಗುರುಗಳನ್ನು ಜೆಡಿಎಸ್ ಬ್ರಾಂಡ್ ಎಂದು ಗುರುತಿಸಿದ್ದಾರೆ. ಜನ್ಮ ಕೊಟ್ಟವರನ್ನೇ ಆಶ್ರಮಕ್ಕೆ ಕಳಿಸುವ ಕಾಲವಿದು, ಮಾತೃ ಹೃದಯಿ ಸ್ವಾಮೀಜಿಯವರಿಗೆ ಯಾವತ್ತು ಕೇಡು ಬಯಸಿಲ್ಲ ಎಂದರು. ಮುಖಂಡ ಶಾಂತರಾಜ್ ಪಾಟೀಲ್ ಉಪನ್ಯಾಸ ನೀಡಿದರು. ಮುಖಂಡರಾದ ಲೋಕಿಕೆರೆ ನಾಗರಾಜ್, ಮಾಡಾಳ್ ಮಲ್ಲಿಕಾರ್ಜುನ್, ಜಿಲ್ಲಾ ಭಾಜಪ ಅಧ್ಯಕ್ಷ ರಾಜಶೇಖರ್, ನಾಗಪ್ಪ, ನಿವೃತ್ತ ಪ್ರಾಚಾರ್ಯ ಎಸ್‌ಎ ಹುಡೇದ್, ಶಾಸಕ ಬಿ.ಪಿ. ಹರೀಶ್, ನಿವೃತ್ತ ನ್ಯಾಯಾಧೀಶ ಸಿ. ಶಿವಪೂಜಿ, ಡಿಬಿ ಶಂಕ್ರಪ್ಪ, ಶಾಂತನಗೌಡ ಸಮಾಜ ಬಾಂಧವರು ಇತರರಿದ್ದರು.