ಪ್ರಸ್ತುತ ದಿನಗಳಲ್ಲಿ ಅಂಚೆ ಇಲಾಖೆ ಪ್ರಗತಿ ಸಾಧಿಸಲು ದಿಸೆಯಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯೊಂದಿಗೆ ಸಹಾಯ, ಸಹಕಾರ ನೀಡಲು ಸಂಘಟನೆ ಸ್ಪಂದಿಸಬೇಕು.

ಗದಗ: ಸಂಘ ಎಂದರೆ ಶಿಸ್ತು, ಸಂಘ ಎಂದರೆ ಸೇವೆ ಮತ್ತು ಸಮರ್ಪಣೆ, ರಾಷ್ಟ್ರೀಯತೆ, ಜ್ಞಾನ, ಸಜ್ಜನತೆ, ಸಕಾರಾತ್ಮಕತೆ, ಪರಿಶ್ರಮ, ತ್ಯಾಗ ಆಗಬೇಕು. ಅಂದಾಗ ಸಂಘಟನೆ ಸದೃಢವಾಗಿ ಬೆಳೆಯಲು ಸಾಧ್ಯವಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ತಿಳಿಸಿದರು.ನಗರದ ಪ್ರಧಾನ ಅಂಚೆ ಕಚೇರಿ ಬಳಿಯ ವಿಂಗಡಣಾ ಕಚೇರಿಯಲ್ಲಿ ನಡೆದ ಭಾರತೀಯ ಅಂಚೆ ನೌಕರರ ಸಂಘಗಳು ಹಾಗೂ ಗದಗ ವಿಭಾಗದ(ಗ್ರುಪ್‌ ಸಿ) ಆಶ್ರಯದಲ್ಲಿ 2ನೇ ದ್ವೈವಾರ್ಷಿಕ ಜಂಟಿ‌ ವಿಭಾಗೀಯ ಸಮೇಳನದಲ್ಲಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅಂಚೆ ಇಲಾಖೆ ಪ್ರಗತಿ ಸಾಧಿಸಲು ದಿಸೆಯಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆಯೊಂದಿಗೆ ಸಹಾಯ, ಸಹಕಾರ ನೀಡಲು ಸಂಘಟನೆ ಸ್ಪಂದಿಸಬೇಕು. ಇನ್ನೂ ನಿಮ್ಮ ಸಿಬ್ಬಂದಿ‌ ಯೋಗಕ್ಷೇಮ, ಸಮಸ್ಯೆ, ಕುಂದುಕೊರತೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ವೃತ್ತ ಕಾರ್ಯದರ್ಶಿ ವೀರೇಶ್ ಮಾತನಾಡಿ, ಕೇವಲ ಅಧ್ಯಕ್ಷರು, ಪದಾಧಿಕಾರಿಗಳಿಂದ ಸಂಘಟನೆ ಕಟ್ಟಲು ಸಾಧ್ಯವಿಲ್ಲ. ನೌಕರರ ಮನಸ್ಥಿತಿ ಅರ್ಥ ಮಾಡಿಕೊಂಡು ಸಂಘದ ಸದಸ್ಯರು ಕಾರ್ಯ ನಿರ್ವಹಿಸಬೇಕು. ಆಗ ಸಂಘಟನೆ ಗಟ್ಟಿಯಾಗಿ ಬೆಳವಣಿಗೆ ಸಾಧಿಸಲಿದೆ. ಎಲ್ಲ ಸಂಘಟನೆ ಧ್ಯೇಯ ಒಂದೇ. ಹಾಗಾಗಿ ಬೇರೆ ಸಂಘಟನೆ ಜತೆಗೆ ‌ದ್ವೇಷ ಬೇಡ. ಸಹೋದ್ಯೋಗಿಗಳೊಂದಿಗೆ ಅನ್ಯೋನ್ಯತೆ ತೋರಬೇಕು ಎಂದರು.ರೋಣ ಅಂಚೆ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟ ಮಹತ್ವದ ಪಾತ್ರ ವಹಿಸುತ್ತದೆ. ಸಂಘಟನೆ ಮತ್ತು ಆಡಳಿತಾಧಿಕಾರಿಗಳ ಸಮನ್ವಯತೆ ಮತ್ತು ಅವಿಭಾವ ಸಂಬಂಧ ಇರಬೇಕು ಎಂದರು.ಬಿ.ಜೆ. ಸುಂದರೇಶ, ನಾಗರಾಜ್‌ ಮಾತನಾಡಿ, ಎಂ.ಐ. ಶೇಖ, ಡಿ.ಜಿ. ಮ್ಯಾಗೇರಿ ಮಾತನಾಡಿದರು. ಇಲಾಖೆಯಲ್ಲಿ ಸೇವೆ ಸಲ್ಲಿಸಿ ಪದನ್ನೋತಿ ಪಡೆದ ಹಾಗೂ ನಿವೃತ್ತಿ ಪಡೆದ ಬಸವರಾಜ ಬಳ್ಳೊಳ್ಳಿ, ಆನಂದರಾವ ಹೊದ್ಲೂರ, ನಿಜಲಿಂಗಪ್ಪ ತೋಟದ, ವಿಠೋಬ ಮಾಳೋದಕರ, ಸರೋಜಾ ಪಟ್ಟಣಶೆಟ್ಟಿ, ಶರಣಪ್ಪ ಬೇನಾಳ ಮತ್ತಿತರರನ್ನು ಸನ್ಮಾನಿಸಲಾಯಿತು. ಪರಮೇಶ್ವರ ವಾಲಿ, ವಿಠ್ಠಲ್ ಮುತ್ತಲಗೇರಿ, ಎಸ್.ಎಫ್. ಹರಿಜನ ಸೇರಿದಂತೆ ಇತರರು ಇದ್ದರು. ವಾಣಿ‌ ಮಾಂಡ್ರೆ ಪ್ರಾರ್ಥಿಸಿದರು. ಭೀಮಣ್ಣ ದೊಡ್ಡಮನಿ, ಶ್ರೀದೇವಿ ಕಲಕೇರಿ ನಿರೂಪಿಸಿದರು. ಸುರೇಶ ಅಳ್ಳೊಳ್ಳಿ‌ ವಂದಿಸಿದರು.