ಸಾರಾಂಶ
ಬೈಂದೂರು ಶ್ರೀ ಸೇನೇಶ್ವರ ದೇವಳದಲ್ಲಿ ಸುರಭಿ ಬೈಂದೂರು ಸಂಸ್ಥೆಯ ರಜತಯಾನದ ಸಂಭ್ರಮಾಚರಣೆಯ ಪ್ರಯುಕ್ತ ಆಯೋಜಿಸಲಾದ 3 ದಿನಗಳ ‘ಗೊಂಬೆ-ಯಕ್ಷ ವೈಭವ’ದ ಸಮಾರೋಪ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಬೈಂದೂರು
ಯಾವುದೇ ಸಂಘ ಸಂಸ್ಥೆಯ ಪದಾಧಿಕಾರಿಗಳಲ್ಲಿ ನಾನು, ನನ್ನಿಂದ ಎಂಬ ಭಾವನೆ ಬರಬಾರದು, ಬದಲಿಗೆ ನಾವು ಎಂಬುದು ಬಂದರೆ ಸಂಸ್ಥೆ ಗಟ್ಟಿಯಾಗುತ್ತದೆ. ಸಂಸ್ಥೆಗಾಗಿ ಸಮರ್ಪಣಾ ಭಾವನೆಯಿಂದ ಪದಾಧಿಕಾರಿಗಳು ಕೆಲಸ ಮಾಡಿದರೆ ಮಾತ್ರ ಸಂಸ್ಥೆ ಬೆಳೆಯಬಲ್ಲದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಪ್ರವರ್ತಕ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಇಲ್ಲಿನ ಶ್ರೀ ಸೇನೇಶ್ವರ ದೇವಳದಲ್ಲಿ ಸುರಭಿ ಬೈಂದೂರು ಸಂಸ್ಥೆಯ ರಜತಯಾನದ ಸಂಭ್ರಮಾಚರಣೆಯ ಪ್ರಯುಕ್ತ 3 ದಿನಗಳ ‘ಗೊಂಬೆ-ಯಕ್ಷ ವೈಭವ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಂಘಟನೆಯನ್ನು ೨೫ ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸುವುದು ಅತೀ ಕಷ್ಟದ ಕೆಲಸ. ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಜನರ ಸಹಕಾರವಿದ್ದರೆ ಮಾತ್ರ ಸಂಘಟನೆ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸುರಭಿಯ ಸಾಧನೆ ಅಭಿನಂದನೀಯ. ಅಂದರೆ ಸುರಭಿ ಜನಮಾನಸವನ್ನು ಮುಟ್ಟಿದೆ ಎಂದರ್ಥ. ಬೈಂದೂರಿನಲ್ಲಿ ಸಾಂಸ್ಕೃತಿಕ ಕಲೆಗಳನ್ನು ಜನರಿಗೆ ಮುಟ್ಟಿಸುತ್ತಿರುವ ಸುರಭಿ ಹಾಗೂ ಲಾವಣ್ಯ ಸಂಸ್ಥೆಗಳು ಅಭಿನಂದನಾರ್ಹರು ಎಂದರು.ಇದೇ ಸಂದರ್ಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಅವರನ್ನು ಸನ್ಮಾನಿಸಲಾಯಿತು.
ಇತಿಹಾಸ ತಜ್ಞ ಡಾ.ಜಗದೀಶ್ ಶೆಟ್ಟಿ ಮಾತನಾಡಿ, ಯಾವುದೇ ಸಂಸ್ಥೆ ತನ್ನ ರಜತ ಮಹೋತ್ಸವವನ್ನು ಆಚರಿಸುತ್ತಿದೆ ಎಂದರೆ ಅದು ಎಷ್ಟೊಂದು ಸಶಕ್ತವಾಗಿ ಬೆಳೆದಿದೆ ಎಂಬುದನ್ನು ಸೂಚಿಸುತ್ತದೆ. ಈ ದಿಸೆಯಲ್ಲಿ ಸುರಭಿ ಸಂಸ್ಥೆ ಮುನ್ನಡೆದಿರುವುದು ಸಂತೋಷ ತಂದಿದೆ ಎಂದು ಹೇಳಿದರು.ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರಭಿ ಸಂಸ್ಥಾಪಕ ಸುಧಾಕರ್, ರಾಜ್ಯ ಜಾನಪದ ಪರಿಷತ್ ಬೈಂದೂರು ತಾಲೂಕು ಅಧ್ಯಕ್ಷ ಗಿರೀಶ್ ಬೈಂದೂರು, ಉದ್ಯಮಿ ಗಣೇಶ್ ಗಾಣಿಗ, ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಚೈತ್ರಾ ಯಡ್ತರೆ, ಸಂಚಲನ ಹೊಸೂರು ಅಧ್ಯಕ್ಷ ನಾರಾಯಣ ಮರಾಟಿ, ಸಮಷ್ಟಿ ಪ್ರತಿಷ್ಠಾನದ ಕಾರ್ಯದರ್ಶಿ ಸುನೀಲ್ ಎಸ್. ಹಾಜರಿದ್ದರು. ಸುರಭಿ ಉಪಾಧ್ಯಕ್ಷ ಲಕ್ಷ್ಮಣ್ ಸ್ವಾಗತಿಸಿದರು. ಕಾರ್ಯದರ್ಶಿ ರಾಮಕೃಷ್ಣ ವಂದಿಸಿದರು.