ಸಾರಾಂಶ
- ನವಕರ್ನಾಟಕ ಪ್ರಕಾಶನದಿಂದ ಪುಸ್ತಕ ಪ್ರದರ್ಶನ
ಕನ್ನಡಪ್ರಭ ವಾರ್ತೆ ಮೈಸೂರುಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಮೈಸೂರು ವಿವಿ ಸಂದರ್ಶಕ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ಸಿ. ನಾಗಣ್ಣ ತಿಳಿಸಿದರು.
ನಗರದ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ನವಕರ್ನಾಟಕ ಪ್ರಕಾಶನವು ಆಯೋಜಿಸಿರುವ ಪುಸ್ತಕ ಪ್ರದರ್ಶನ ಉದ್ಘಾಟನೆ ಹಾಗೂ ನಾಲ್ಕು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದ ಜನರು ಪುಸ್ತಕ ಓದುವ ಅಭಿರುಚಿ ಬೆಳೆಸಲು ಗ್ರಂಥಾಲಯ ಆರಂಭಿಸಲಾಯಿತು. ಆದರೆ, ಅದರ ಉದ್ದೇಶ ಸಫಲವಾಗಿಲ್ಲ. ಅಗತ್ಯ ಸೌಲಭ್ಯ, ಪುಸ್ತಕಗಳನ್ನು ನೀಡದೇ ಒಂದು ರೀತಿ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ ಎಂದು ವಿಷಾದಿಸಿದರು.ನವ ಕರ್ನಾಟಕ ಪ್ರಕಾಶನ ಗುಣಮಟ್ಟದ ಪ್ರಕಾಶನ ಸಂಸ್ಥೆಯಾಗಿದೆ. ಪ್ರಕಾಶನ ಸಂಸ್ಥೆ ನಡೆಸುವುದು ಸುಲಭವಲ್ಲ. ವ್ಯವಹಾರ ಜ್ಞಾನದ ಜೊತೆಗೆ ಸೌಜನ್ಯ ಅವಶ್ಯಕ. ಈ ಎರಡೂ ಅಂಶಗಳೊಂದಿಗೆ ಆರೋಗ್ಯ ಪೂರ್ಣ ಪುಸ್ತಕಗಳನ್ನು ಪ್ರಕಟಿಸಿ ಓದುಗರಿಗೆ ತಲುಪಿಸಿದ ಹೆಗ್ಗಳಿಕೆ ನವ ಕರ್ನಾಟಕ ಪ್ರಕಾಶನದು ಎಂದು ಅವರು ಹೇಳಿದರು.
ಲೇಖಕ ಗಣೇಶ ಅಮೀನಗಡ ಮಾತನಾಡಿ, ರಹಮತ್ ತರೀಕೆರೆ ಅವರು ಜೆರುಸೆಲಂ ಪ್ರವಾಸ ಚಿಂತನೆ ಪುಸ್ತಕವೂ ಮಾಹಿತಿ ಕೊಡದೆ ಅನುಭವವನ್ನು ದಾಖಲಿಸಿದ್ದಾರೆ. ಚೇತೋಹರಿ ಬರವಣಿಗೆ ಇದೆ. ವೈಯಕ್ತಿಕ ವಿಷಯಗಳನ್ನು ದಾಖಲಿಸದೇ ಅಪರಿಚಿತ ದೇಶದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ ಎಂದರು.ಗಾಯತ್ರಿ ಮೂರ್ತಿ ಅವರ ಅಂಜದಿರು ಮನವೆ ಕೃತಿಯೂ 100 ಹೆಚ್ಚು ಕ್ಯಾನ್ಸರ್ ರೋಗಗಳ ಬಗ್ಗೆ ಮಾಹಿತಿ ಇದೆ. ಚಿಕಿತ್ಸೆಯ ವಿಧಾನದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಕ್ಯಾನ್ಸರ್ ಬಂದಾಗ ಹೆದರೆ ಧನಾತ್ಮಕವಾಗಿ ಎದುರಿಸಿ ಗೆದ್ದವರ ಕಥನಗಳು ಓದಿಸಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಎಂಎಂಕೆ ಮತ್ತು ಎಸ್ ಡಿಎಂ ಕಾಲೇಜು ಸಹ ಪ್ರಾಧ್ಯಾಪಕಿ ಡಾ. ವಿನೋದಾ ಅವರು ಎಚ್.ಎನ್. ಗೀತಾ ಸಂಪಾದಿಸಿರುವ ದಾರಿದೀಪಗಳು ಹಾಗೂ ಹಾದಿಯ ಹಣತೆಗಳು ಕೃತಿಗಳ ಕುರಿತು ಮಾತನಾಡಿದರು.ನವ ಕರ್ನಾಟಕ ಪ್ರಕಾಶನ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ ಉಡುಪ, ಶಾಖಾ ವ್ಯವಸ್ಥಾಪಕ ಎನ್.ಕೆ. ಸತ್ಯನಾರಾಯಣ ಇದ್ದರು.
----ಬಾಕ್ಸ್...
ಶೇ.15 ರಿಂದ 50 ರಿಯಾಯಿತಿಜ.28 ರವರೆಗೆ ಬೆಳಗ್ಗೆ 9.30 ರಿಂದ ರಾತ್ರಿ 8.30 ರವರೆಗೆ ನಡೆಯಲಿರುವ ಪುಸ್ತಕ ಪ್ರದರ್ಶನದಲ್ಲಿ ಶೈಕ್ಷಣಿಕ ಪುಸ್ತಕಗಳು, ಜನಪ್ರಿಯ ವಿಜ್ಞಾನ, ಯೋಗ, ಆರೋಗ್ಯ, ಜೀವನ ಚರಿತ್ರೆ, ವಿಚಾರ ಸಾಹಿತ್ಯ, ಜ್ಞಾನಕೋಶಗಳು, ನಿಘಂಟುಗಳು, ಪರಾಮರ್ಶನ ಗ್ರಂಥಗಳು, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು ಹಾಗೂ ವಿಶೇಷವಾಗಿ ಮಕ್ಕಳಿಗೆಂದೇ ಸಾವಿರಾರು ಆಕರ್ಷಕ ವರ್ಣರಂಜಿತ ಪುಸ್ತಕಗಳು ಲಭ್ಯ ಇವೆ. ಪುಸ್ತಕಗಳ ಮೇಲೆ ಶೇ 15 ರಿಂದ 50 ರವರೆಗೆ ವಿಶೇಷ ರಿಯಾಯಿತಿ ನೀಡಲಾಗಿದೆ.