ಸಾರಾಂಶ
ಗದಗ: ಸ್ಲಂ ಜನರ ಸಮಸ್ಯೆ ಹೋಗಲಾಡಿಲು ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದು ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಮತ್ತು ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ ಹೇಳಿದರು.
ಇಲ್ಲಿಯ ನಗರಸಭೆ ಉದ್ಯಾನದಲ್ಲಿ ನಡೆದ ಸ್ಲಂ ನಿವಾಸಿಗಳ ಹಾಗೂ ವಸತಿ ರಹಿತರ ಸಭೆಯಲ್ಲಿ ಅವರು ಮಾತನಾಡಿ, ಗದಗ-ಬೆಟಗೇರಿ ನಗರದಲ್ಲಿ ಕೊಳಗೇರಿ ಪ್ರದೇಶಗಳಲ್ಲಿ ವಸತಿ ಮತ್ತು ಅಭಿವೃಧ್ದಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದು ಕೋಟ್ಯಂತರ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅರ್ಹ ಗುಡಿಸಲು ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸದೇ ಇರುವುದರಿಂದ ಸ್ಲಂ ಪ್ರದೇಶಗಳು ಸೌಲಭ್ಯವಂಚಿತವಾಗಿವೆ ಎಂದರು.ಸಾಮಾಜಿಕ ನ್ಯಾಯ ಮತ್ತು ನಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಲು ಸ್ಲಂ ಸಮಿತಿಯಿಂದ ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟಗಳನ್ನು ನಡೆಸಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಸ್ಲಂ ಪ್ರದೇಶಗಳಿಗೆ ಭೇಟಿ ನೀಡುವ ಜನಪ್ರತಿನಿಧಿಗಳು ಚುನಾವಣೆ ನಂತರ ಸ್ಲಂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.
ಗದಗ-ಬೆಟಗೇರಿ ನಗರದ ವಸತಿರಹಿತ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಜಿಲ್ಲಾ ಸ್ಲಂ ಸಮಿತಿ ಹಾಗೂ ವಸತಿ ರಹಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಹಲವಾರು ವರ್ಷಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಸ್ಲಂ ಸಮಿತಿಯ ಜನಪರವಾದ ಹಕ್ಕೊತ್ತಾಯಗಳಿಗೆ ನಮ್ಮ ಭಾಗದ ಸಚಿವರು ಗಂಭೀರವಾಗಿ ಪರಿಗಣಿಸಿ ಗಂಗಿಮಡಿ ಹತ್ತಿರ ನಿರ್ಮಾಣ ಮಾಡಲಾಗಿರುವ ಗುಂಪು ಮನೆಗಳಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ನಗರದ ಅನೇಕ ಅಘೋಷಿತ ಪ್ರದೇಶಗಳನ್ನು ಸ್ಲಂ ಘೋಷಣೆಗಾಗಿ ಅರ್ಜಿ ಸಲ್ಲಿಸಿ ಎರಡು ವರ್ಷಗಳು ಕಳೆದರೂ ಅಧಿಕಾರಿಗಳು ಸ್ಲಂ ಘೋಷಣೆಗೆ ಅಗತ್ಯ ಕ್ರಮ ಕೈಗೊಳ್ಳದೆ ಕೊಳಗೇರಿ ಪ್ರದೇಶದ ಜನರಿಗೆ ಭೂಮಿ ಹಕ್ಕು, ವಸತಿ ಮತ್ತು ನಾಗರಿಕ ಸೌಲಭ್ಯಗಳಿಂದ ವಂಚಿಸಲಾಗುತ್ತಿದೆ, ನಮ್ಮ ಹಕ್ಕೊತ್ತಾಯಗಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಂದಿಸದೇ ಇದ್ದಲ್ಲಿ ಸ್ಲಂ ಸಮಿತಿಯಿಂದ ನಿರಂತರ ಹೋರಾಟ ನಡೆಸಲಾಗುವುದು. ಆದಕಾರಣ ನಗರದ ಎಲ್ಲ ಸ್ಲಂ ನಿವಾಸಿಗಳು ಹೋರಾಟಕ್ಕೆ ಸಹಕರಿಸಬೇಕು ಎಂದು ಹೇಳಿದರು.ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮೆಹರುನ್ನಿಸಾ ಢಾಲಾಯತ, ಇಬ್ರಾಹಿಂ ಮುಲ್ಲಾ, ಶಿವಾನಂದ ಶಿಗ್ಲಿ, ಸಾಕ್ರುಬಾಯಿ ಗೋಸಾವಿ, ಮೆಹಬೂಬ್‌ಸಾಬ್ ಬಳ್ಳಾರಿ, ಬಾಷಾಸಾಬ್ ಡಂಬಳ, ದಾದು ಗೋಸಾವಿ, ಖಾಜಾಸಾಬ್ ಇಸ್ಮಾಯಿಲನವರ, ಶಿವಪ್ಪ ಲಕ್ಕುಂಡಿ, ಸಲೀಮ ಬೈರಕದಾರ, ಚಂದ್ರಿಕಾ ರೋಣದ, ಅಫ್ರೋಜಾ ಹುಬ್ಬಳ್ಳಿ, ಸುಶೀಲಮ್ಮ ಗೊಂದರ, ಫೈರುಜಾ ಹುಬ್ಬಳ್ಳಿ, ಮೆಹರುನ್ನಿಸಾ ಡಂಬಳ, ತಿಪ್ಪಮ್ಮ ಕೊರವರ ಹಾಗೂ ಸ್ಲಂ ನಿವಾಸಿಗಳು, ವಸತಿ ರಹಿತರು ಇದ್ದರು.