ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುವವರೆಗೂ ರೈತರು ಸಂಘಟಿತರಾಗಿ ಹೋರಾಟ ಮುಂದುವರಿಸಬೇಕಿದೆ ಎಂದು ಸಿಪಿಐ(ಎಂ) ನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮೀನಾಕ್ಷಿ ಸುಂದರಂ ಕರೆ ನೀಡಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ದಿ. ಸೀತಾರಾಮ್ ಯೆಚೂರಿ ವೇದಿಕೆಯಡಿ ಆಯೋಜಿಸಿದ ಸಿಪಿಐ(ಎಂ)ನ 4ನೇ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ರೈತರು ಎಷ್ಟೇ ಬೆಳೆ ಬೆಳೆದರೂ ಕೈಗೆ ಆದಾಯ ಬಾರದಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ. ಇದರ ಬಗ್ಗೆ ನಾವು ಸಂಘಟಿತರಾಗಿ ಧ್ವನಿ ಎತ್ತಬೇಕು. ರೈತರು ಬದುಕಬೇಕಾದರೆ ಮೊದಲು ಕೂಲಿ ಪ್ರಮಾಣ ಹೆಚ್ಚಳವಾಗಬೇಕೆಂದರು.ಬೆಳೆ ವಿಮೆ ಹೆಸರಿನಲ್ಲಿ ಕೇಂದ್ರ ಸರ್ಕಾರ ರೈತರಿಂದ ಹಣ ಸಂಗ್ರಹಿಸಿ ಉದ್ಯಮಿಗಳಿಗೆ ಲಾಭ ಮಾಡಿಕೊಡುವ ಮೂಲಕ ರೈತರ ಎದೆಗೆ ಚೂರಿಯಾಗುವ ಕೆಲಸ ಮಾಡುತ್ತಿದೆ. ರೈತರು ಸಾಮಾನ್ಯವಾಗಿ ಬೆಳೆ ಬೆಳೆಯಲು ಬ್ಯಾಂಕ್ ಗಳಲ್ಲಿ ಮಾಡುವ ಸಾಲಕ್ಕೆ ಕಡ್ಡಾಯವಾಗಿ ವಿಮೆ ಮಾಡಿಸಬೇಕಾಗಿದೆ ಎಂದರು.
ಪ್ರವಾಹ, ಬರಗಾಲದಿಂದ ಬೆಳೆ ಬಾರದ ಸಂದರ್ಭದಲ್ಲಿ ಪರಿಹಾರ ನೀಡುವ ದೃಷ್ಟಿಯಿಂದ ವಿಮೆ ಮಾಡಿಸುವಂತೆ ಹೇಳಿ ಅಂದಾನಿ, ಅಂಬಾನಿ ಸೇರಿ ಬಹುರಾಷ್ಟ್ರೀಯ ಕಂಪನಿಗಳಿಗೆ ರೈತರು ಪಡೆಯುವ ಸಾಲದಲ್ಲಿ ವಿಮೆ ಕಟ್ಟಿಸುವ ಸರ್ಕಾರವು ರೈತರಿಗೆ 100ಕ್ಕೆ 15 ರು. ನಷ್ಟು ಪರಿಹಾರ ನೀಡುವುದಿಲ್ಲ, 85 ರು. ಅನ್ನು ವಿಮಾ ಕಂಪನಿಗಳಿಗೆ ಲಾಭ ಮಾಡಿ ಕೊಡುವ ಮೂಲಕ ಮೋಸ ಮಾಡುತ್ತಿದೆ ಎಂದು ಕಿಡಿಕಾರಿದರು.ಕೇಂದ್ರ ಸರ್ಕಾರ ಧರ್ಮದ ಹೆಸರಿನಲ್ಲಿ ವಂಚಿಸುವ ಕೆಲಸ ಮಾಡುತ್ತಿದೆ. ವ್ಯವಸ್ಥಿತವಾಗಿ ನಮ್ಮ ಶ್ರಮವನ್ನು ಕದ್ದು ಶ್ರೀಮಂತರಿಗೆ ಮಾರಾಟ ಮಾಡುತ್ತಿರುವ ನೀತಿಗಳ ವಿರುದ್ಧ ಸರ್ಕಾರಕ್ಕೆ ಎಚ್ಚರಿಕೆ ಮೂಡಿಸಬೇಕಿದೆ ಎಂದರು.
ರಾಜ್ಯ ಸಮಿತಿ ಸದಸ್ಯೆ ದೇವಿ ಮಾತನಾಡಿ, ತಾಲೂಕಿನಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಕಿತ್ತಾಟದಲ್ಲಿ ಮುಳುಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯ ಸಮಿತಿ ಸದಸ್ಯ ಎಂ.ಪುಟ್ಟಮಾಧು ಮಾತನಾಡಿ, ಪ್ರಸ್ತುತ ದೇಶಕ್ಕೆ ಪ್ರಾಮಾಣಿಕ, ಭ್ರಷ್ಟಾಚಾರ ರಹಿತ, ಜನಪರ ಆಡಳಿತ ನಡೆಸುವವರ ಅಗತ್ಯವಿದೆ. ಕೇರಳ ರಾಜ್ಯದಲ್ಲಿ ಸಿಪಿಐ(ಎಂ) ಜನಪರ ಆಡಳಿತ ನಡೆಸಿ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಮ್ಮೇಳನದಲ್ಲಿ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಸುಶೀಲಾ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ಪಟ್ಟಣದ ಪುರಸಭೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ಭವನದವರೆಗೂ ನೂರಾರು ಸಿಪಿಐ(ಎಂ) ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಜಾಥಾ ನಡೆಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎನ್.ಎಲ್. ಭರತ್ ರಾಜ್, ಸದಸ್ಯ ಜಿ.ರಾಮಕೃಷ್ಣ, ತಾಲೂಕು ಸಮಿತಿ ಸದಸ್ಯೆ ಸರೋಜಮ್ಮ, ಪ್ರಮುಖರಾದ ಯಶವಂತ್, ಟಿ.ಎಚ್.ಆನಂದ್, ಎನ್. ಲಿಂಗರಾಜಮೂರ್ತಿ, ಮಂಜುಳಾ ಇದ್ದರು.