ಎಸ್‌ಸಿ ಮೀಸಲಾತಿಗೆ ಸಂಘಟಿತ ಹೋರಾಟ ಅನಿವಾರ್ಯ

| Published : Aug 27 2024, 01:34 AM IST / Updated: Aug 27 2024, 01:35 AM IST

ಸಾರಾಂಶ

ಹಸಿವು, ಅವಮಾನಕ್ಕೆ ಒಳಗಾದವರು ಹೋರಾಟದಿಂದ ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಿದ್ದನ್ನು ಇತಿಹಾಸದುದ್ದಕ್ಕೂ ಕಾಣಬಹುದಾಗಿದೆ. ಮಡಿವಾಳ ಸಮಾಜ ಬಾಂಧವರು ಸಹ ಸಂಘಟಿತ ಹೋರಾಟದ ಮೂಲಕ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು ಎಂದು ಚಿತ್ರದುರ್ಗ ಮಡಿವಾಳ ಮಾಚಿದೇವ ಮಹಾಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ದಾವಣಗೆರೆಯಲ್ಲಿ ನುಡಿದಿದ್ದಾರೆ.

- ಶ್ರಾವಣ ಮಾಸದ ಸ್ಮರಣೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶ್ರೀ ಬಸವ ಮಾಚಿದೇವ ಸ್ವಾಮೀಜಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಹಸಿವು, ಅವಮಾನಕ್ಕೆ ಒಳಗಾದವರು ಹೋರಾಟದಿಂದ ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಿದ್ದನ್ನು ಇತಿಹಾಸದುದ್ದಕ್ಕೂ ಕಾಣಬಹುದಾಗಿದೆ. ಮಡಿವಾಳ ಸಮಾಜ ಬಾಂಧವರು ಸಹ ಸಂಘಟಿತ ಹೋರಾಟದ ಮೂಲಕ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು ಎಂದು ಚಿತ್ರದುರ್ಗ ಮಡಿವಾಳ ಮಾಚಿದೇವ ಮಹಾಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ನುಡಿದರು.

ವಿನೋಬ ನಗರದ ಶ್ರೀ ಮಾಚಿದೇವ ಸಮುದಾಯ ಭವನದಲ್ಲಿ ಸೋಮವಾರ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮಡಿವಾಳ ಮಾಚಿದೇವ ಸಮಾಜ ಸಂಘಟನೆಯಲ್ಲಿ ಹಿಂದುಳಿಯಲು ಹೋರಾಟದ ಮನೋಭಾವ ಕಡಿಮೆ ಇರುವುದೂ ಒಂದು ಕಾರಣ. ಸಮಾಜದಲ್ಲಿ ಅನೇಕ ದಾರ್ಶನಿಕರು, ಮಹನೀಯರು ತಮ್ಮನ್ನು ತಾವು ಸುಟ್ಟುಕೊಂಡು, ಜಗತ್ತಿಗೆ, ಜನರಿಗೆ ಬೆಳಕು ನೀಡಿದ್ದಾರೆ. ಮಡಿವಾಳ ಮಾಚಿದೇವರು ನಮ್ಮ ಕುಲದ ತಿಲಕರು. ಅಂತಹವರಿಗೆ ಸಮಾಜಕ್ಕೆ ಹೆಸರು ಬಂದಿದೆ. ಹಣ ಗಳಿಕೆ ಜೊತೆ ಜ್ಞಾನದ ಶಕ್ತಿ ನೀಡಿರುವ ಕಾರಣಕ್ಕೆ ಮಾಚಿದೇವರು ಸದಾ ಪ್ರಾತಃಸ್ಮರಣೀಯರಾಗಿದ್ದಾರೆ. ಶ್ರೀ ಮಡಿವಾಳ ಮಾಚಿದೇವರು ನಮ್ಮ ಕುಲದ ಉದ್ಧಾರಕರು. ಹಾಗಾಗಿ ಮಾಚಿದೇವರನ್ನು ನಾವೆಲ್ಲರೂ ಪೂಜಿಸಬೇಕು ಎಂದು ತಿಳಿಸಿದರು.

ವಚನಗಳ ಸಾರ ಅರಿಯಿರಿ:

ಮಡಿವಾಳ ಸಮಾಜಕ್ಕೆ ಮಾಚಿದೇವರು ನೀಡಿರುವ ಪ್ರತಿ ವಚನದಲ್ಲೂ ಜೀವನದ ಅನುಭವ ಮತ್ತು ಮಾರ್ಗದರ್ಶನ ಕಾಣಬಹುದು. ಹಾಗಾಗಿಯೇ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು. ಬಸವಾದಿ ಶರಣರು, ಕಾಯಕ ಮತ್ತು ದಾಸೋಹ, ಧ್ಯಾನ, ಶಿವಯೋಗ ಮಾಡು ಎಂಬುದಾಗಿ ಮಾಚಿದೇವರು ಸಂದೇಶ ನೀಡಿದ್ದಾರೆ. ಸಂಸ್ಕಾರದಲ್ಲಿ ಬದುಕುವ ಕೆಲಸವನ್ನು ಮುಖ್ಯವಾಗಿ ಮಾಚಿದೇವರು ಮಾಡಿದವರು ಎಂದು ಸ್ಮರಿಸಿದರು.

ಸಮುದಾಯದ ಮೇಲಿನ ನಿರಾಸಕ್ತಿ, ತಾತ್ಸಾರ, ನಿರಾಭಿಮಾನ ದೂರವಿಟ್ಟು, ಸಮಾಜದ ಕೆಲಸ ಮಾಡಬೇಕು. ಸಮಾಜದ ಮುಂದಿನ ಪೀಳಿಗೆಯು ಈ ಹಂತವನ್ನು ಪರಿಪಕ್ವತೆಯಿಂದ ಮುನ್ನಡೆದಲ್ಲಿ ನಿರೀಕ್ಷಿತ ಸಾಧನೆ ಸಾಧ್ಯ. ಸಮುದಾಯದ ಅಭಿವೃದ್ಧಿಗೆ ಎಲ್ಲರೂ ದುಡಿಯಬೇಕು. ನಾವೆಲ್ಲರೂ ಸೇರಿ, ಸಮುದಾಯದ ಅಭಿವೃದ್ಧಿ ಮಾಡೋಣ. ಯಾವ ಮೀಸಲಾತಿ ಬಂದರೂ ನಮ್ಮ ಗುರಿ ಸಾಧನೆ ಮಾಡಬೇಕು. ಮೀಸಲಾತಿ ಬಂದರೆ ಸಾಕಷ್ಟು ಲಾಭ ಇದೆ. ಸರ್ಕಾರ ಸಣ್ಣ ಸಣ್ಣ ಸಮುದಾಯಗಳತ್ತ ಗಮನಹರಿಸಲಿ ಎಂದು ತಿಳಿಸಿದರು.

ಸಮಾಜದ ಮುಖಂಡ ಆವರಗೆರ ಎಚ್.ಜಿ. ಉಮೇಶ ಮಾತನಾಡಿ, ಮಡಿವಾಳ ಸಮಾಜದ ಮಕ್ಕಳು ನಿರೀಕ್ಷಿತ ಮಟ್ಟದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ನಮ್ಮ ಸಮುದಾಯದ ಬಹುತೇಕರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಔದ್ಯೋಗಿಕವಾಗಿ ಹಿಂದುಳಿದಿದ್ದಾರೆ. ಉನ್ನತ ಶಿಕ್ಷಣ ಪಡೆದು, ಉನ್ನತ ಹುದ್ದೆಯನ್ನಲಂಕರಿಸಲು ಅನುಕೂಲವಾಗುವಂತೆ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು. ಇದಕ್ಕಾಗಿ ನಮ್ಮ ಸಮುದಾಯ ದಶಕಗಳಿಂದಲೂ ಹೋರಾಟ ನಡೆಸಿಕೊಂಡು ಬರುತ್ತಿದೆ ಎಂದರು.

ಮಕ್ಕಳು ಓದಿನ ಕಡೆಗೆ ಗಮನ ಕೇಂದ್ರೀಕರಿಸಬೇಕು. ಉತ್ತಮ ಶಿಕ್ಷಣ ಪಡೆದಲ್ಲಿ ಎಲ್ಲಾ ಕಡೆ ಉತ್ತಮ ಸ್ಥಾನಮಾನ ದೊರೆಯುತ್ತದೆ. ವಿಶೇಷವಾಗಿ ಮಕ್ಕಳು ಮೊಬೈಲ್‌ ದಾಸ್ಯದಿಂದ ಹೊರಬರಲಿ. ಮನೆ, ಶಾಲೆ, ಕಾಲೇಜು ಹೀಗೆ ಎಲ್ಲಿಗೆ ಹೋದರೂ ಮೊಬೈಲ್‌, ಸೋಷಿಯಲ್ ಮೀಡಿಯಾದಲ್ಲೇ ದೇಶದ ಭವಿಷ್ಯವಾದ ವಿದ್ಯಾರ್ಥಿ, ಯುವಜನರು ಮುಳುಗಿರುವುದನ್ನು ಕಾಣುತ್ತಿದ್ದೇವೆ. ಪಾಲಕರು ಮಕ್ಕಳ ಶೈಕ್ಷಣಿಕ ಸಾಧನೆ, ಪ್ರಗತಿ ಕಡೆಗೆ ಪ್ರೇರೇಪಿಸಬೇಕು. ತಂತ್ರಜ್ಞಾನವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗದಂತೆ ನಿಗಾ ವಹಿಸಿ ಎಂದು ಹೇಳಿದರು.

ಮೂಡಬಿದಿರೆಯ ಶ್ರೀ ಕ್ಷೇತ್ರ ಕಾರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಸಂಘದ ಅಧ್ಯಕ್ಷ ಎಂ.ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್, ಪಾಲಿದೆ ಸದಸ್ಯ ಎ.ನಾಗರಾಜ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಸುರೇಶ ಕೋಗುಂಡೆ, ರೈತ ಮುಖಂಡ ನಿಟುವಳ್ಳಿ ಅಂಜಿನಪ್ಪ ಪೂಜಾರ್, ಎಂ.ಎನ್.ಬಸವರಾಜಪ್ಪ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಎಸ್. ಮಹಾಂತೇಶ ಇತರರು ಇದ್ದರು.

- - - ಮಡಿವಾಳ ಮಾಚಿದೇವರು 12ನೇ ಶತಮಾನದಲ್ಲಿ ಅಸ್ಪೃಶ್ಯತೆ, ರಾಜಕೀಯ, ಅಂಧಕಾರ, ಅಜ್ಞಾನದ ವಿರುದ್ಧ ಹೋರಾಟ ಮಾಡಿದಂತಹ ಬಸವಾದಿ ಶರಣರಲ್ಲೇ ಧ್ರುವತಾರೆ. ಕ್ರಾಂತಿಕಾರಿ ಮಾಚಿದೇವರ ವಂಶಜರಿಗೆ ಈವರೆಗೆ ಸೂಕ್ತ ನ್ಯಾಯ ದೊರೆತಿಲ್ಲ. ಆ ನಿಟ್ಟಿನಲ್ಲಿ ಸಂಘಟಿತ ಹೋರಾಟ ಮುಂದುವರಿಸಬೇಕು

- ಶ್ರೀ ಮುಕ್ತಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಕಾರಿಂಜೆ, ಮೂಡಬಿದಿರೆ

- - - ಮುಂದಿನ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ ಮಡಿವಾಳ ಸಮಾಜಕ್ಕೆ ದೇವರಾಜ ಅರಸು ಬಡಾವಣೆಯಲ್ಲಿ ನೀಡಿರುವ ನಿವೇಶನದ ಹೊಸ ಕಟ್ಟಡದಲ್ಲಿ ಆಗಲು ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ, ಶಾಸಕ ಶಾಮನೂರು ಶಿವಶಂಕರಪ್ಪ, ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಎಲ್ಲ ರೀತಿಯ ನೆರವು ನೀಡುವರು. ದೂಡಾದಿಂದ ಏನೆಲ್ಲಾ ಸಾಧ್ಯವೋ ಅದೆಲ್ಲಾ ನೆರವು ನೀಡಲಾಗುವುದು

- ದಿನೇಶ ಕೆ. ಶೆಟ್ಟಿ, ಅಧ್ಯಕ್ಷ, ದೂಡಾ

- - - -26ಕೆಡಿವಿಜಿ1, 2:

ದಾವಣಗೆರೆಯಲ್ಲಿ ಸೋಮವಾರ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.