ಕಾರ್ಮಿಕ ವರ್ಗವು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕಾರ್ಮಿಕರ ಶ್ರಮದ ಹಿಂದೆ ಕುಟುಂಬಗಳ ಭವಿಷ್ಯ ಅಡಗಿದೆ.

ಕಾರವಾರ: ಕಾರ್ಮಿಕರು ಎದುರಿಸುವ ಸಮಸ್ಯೆಗಳನ್ನು ಸಂಘಟಿತವಾಗಿ ಎದುರಿಸಿ, ಪರಸ್ಪರ ಸಹಕಾರ ಹಾಗೂ ಒಗ್ಗಟ್ಟಿನ ಮೂಲಕ ಪರಿಹರಿಸಿಕೊಳ್ಳುವುದರ ಜತೆಗೆ ಸಂಘವನ್ನು ಬಲಿಷ್ಠಗೊಳಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಕರೆ ನೀಡಿದರು.ತಾಲೂಕಿನ ಅಮದಳ್ಳಿ ಗಣಪತಿ ದೇವಸ್ಥಾನದ ಸಭಾಭವನದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಅಪರಾಜಿತ್ ಕಾಮಗಾರ ಶಕ್ತಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಕಾರ್ಮಿಕ ವರ್ಗವು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕಾರ್ಮಿಕರ ಶ್ರಮದ ಹಿಂದೆ ಕುಟುಂಬಗಳ ಭವಿಷ್ಯ ಅಡಗಿದೆ. ಹೀಗಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ, ಸಂಕಷ್ಟದ ಸಂದರ್ಭದಲ್ಲಿ ನೆರವಾಗುವ ಹಾಗೂ ಹಕ್ಕುಗಳಿಗಾಗಿ ಧ್ವನಿಯಾಗುವ ಸಂಘಟನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ನೂತನ ಸಂಘವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಸಂಘಟನೆ ಎಂದ ಮೇಲೆ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ ಅವುಗಳನ್ನು ಸೌಹಾರ್ದತೆ ಹಾಗೂ ಪರಸ್ಪರ ಚರ್ಚೆಯ ಮೂಲಕ ಬಗೆಹರಿಸಿಕೊಂಡು ಸಂಘದ ಹಿತಕ್ಕೆ ಆದ್ಯತೆ ನೀಡಬೇಕು. ನೂತನ ಸಂಘವನ್ನು ಮಾದರಿ ಸಂಘಟನೆಯಾಗಿ ರೂಪಿಸುವ ಜತೆಗೆ, ಇದರ ಕಾರ್ಯಚಟುವಟಿಕೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಬೇಕು ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಕಾರ್ಮಿಕರ ಸಮಸ್ಯೆಗಳಿಗೆ ಧ್ವನಿಯಾಗಿ, ಅವರ ಹಕ್ಕು ಹಾಗೂ ಹಿತಾಸಕ್ತಿಗಳ ರಕ್ಷಣೆಗೆ ಸಂಘಟನೆಗಳು ಸದಾ ಬದ್ಧವಾಗಿರಬೇಕು ಎಂದರು.

ಪತ್ರಕರ್ತ ದರ್ಶನ್ ನಾಯ್ಕ, ಕರವೇ ಜಿಲ್ಲಾಧ್ಯಕ್ಷ ಅರುಣ ಹರಕಡೆ, ಸೀಬರ್ಡ್ ಕಾರ್ಮಿಕ ಯೂನಿಯನ್ ಅಧ್ಯಕ್ಷ ಉಮಾಕಾಂತ ಹರಿಕಂತ್ರ, ಸಾಮಾಜಿಕ ಕಾರ್ಯಕರ್ತ ರಾಜಾ ಪೆಡ್ನೇಕರ, ಅಮದಳ್ಳಿ ಗ್ರಾಪಂ ಮಾಜಿ ಸದಸ್ಯ ತೋಕು ಹರಿಕಂತ್ರ, ಹಟ್ಟಿಕೇರಿ ಗ್ರಾಪಂ ಮಾಜಿ ಅಧ್ಯಕ್ಷ ವಿನೋದ ಆರ್. ನಾಯ್ಕ, ಅವರ್ಸಾ ಗ್ರಾಪಂ ಮಾಜಿ ಅಧ್ಯಕ್ಷ ಮಾರುತಿ ನಾಯ್ಕ ಇದ್ದರು.

ಸಂಘದ ಅಧ್ಯಕ್ಷ ಮುಕೇಶ್ ಇಂಗ್ಲೆ, ಉಪಾಧ್ಯಕ್ಷ ಮನೋಜ್ ಮುದ್ಗೇಕರ್, ಸಂಸ್ಥಾಪಕ ದೀಪಕ್ ತಾಂಡೇಲ್, ರಿಷಿ ಪಾಸ್ವಾನ್, ಸಂತೋಷ ಹಾಲಂಕರ್, ಸಂದೀಪ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕಿ ವನಿತಾ ರಾಜೇಶ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ರಿಷಿ ಪಾಸ್ವಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದೀಪಕ್ ತಾಂಡೇಲ್ ವಂದಿಸಿದರು.