ಸಾರಾಂಶ
ಶರಣ ಸಂಸ್ಕೃತಿ ಉತ್ಸವ ಹಾಗೂ ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕ್ರೀಡಾ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಶರಣ ಸಂಸ್ಕೃತಿ ಉತ್ಸವ ಹಾಗೂ ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕ್ರೀಡಾ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.ಬಸವಕೇಂದ್ರ ಮುರುಘಾಮಠದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 1ರಿಂದ 4ರವಗೆ ಜಗದ್ಗುರು ಮುರುಘರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಮೈದಾನದಲ್ಲಿ ನಾಕೌಟ್ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. 10 ಇಲಾಖೆಯ ತಂಡಗಳು ಭಾಗವಹಿಸಲಿವೆ. ಇದರಲ್ಲಿ ವಿಜೇತರಾದವರಿಗೆ ನಗದು ಬಹುಮಾನದೊಂದಿಗೆ ಟ್ರೋಫಿ ನೀಡಲಾಗುವುದು. ಕ್ರೀಡಾ ಕೂಟ ಪ್ರಾರಂಭದಲ್ಲಿ ಮತ್ತು ಮುಕ್ತಾಯದಲ್ಲಿ ವರ್ಣರಂಜಿತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಎಸ್ ಜೆಎಂ ಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಶರಣ ಸಂಸ್ಕೃತಿ ಉತ್ಸವ ಹಾಗೂ ಜಯದೇವ ಶ್ರೀಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಶ್ರೀಮಠದಲ್ಲಿ ಸೆ. 25 ರಿಂದ ಅ.4 ರವರಗೆ ಬೆಳಿಗ್ಗೆ ಅರೋಗ್ಯ ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ತಮ್ಮ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ. ಸಂಜೆ ಜಯದೇವ ಶ್ರೀಗಳ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿದೆ ಎಂದರು.ಕ್ರೀಡಾ ಸಮಿತಿಯ ಅಧ್ಯಕ್ಷ ಶ್ರೀರಾಮ್ ಮಾತನಾಡಿ, ಶರಣ ಸಂಸ್ಕೃತಿ ಉತ್ಸವಕ್ಕೆ ಕ್ರೀಡಾ ಕೂಟ ಆಯೋಜಿಸಲಾಗಿದೆ. ಇದರಲ್ಲಿ ಕಬ್ಬಡಿ, ಹ್ಯಾಂಡ್‍ಬಾಲ್, ಖೋ ಖೋ ಪಂದ್ಯಾವಳಿಯನ್ನು ಅ.5 ರಿಂದ 7ರವರೆಗೆ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಶಾಲೆಯ 17 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಜಿಲ್ಲೆಯ 6 ತಾಲೂಕುಗಳಿಂದ ಸುಮಾರು 1400ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ ಎಂದರು.
ಮಹಿಳಾ ಕ್ರೀಡಾಕೂಟ ಸಮಿತಿ ಅಧ್ಯಕ್ಷೆ ರುದ್ರಾಣಿ ಮಾತನಾಡಿ, ನಗರದ ಮಹಿಳೆಯರಿಗಾಗಿ ಕ್ರೀಡಾಕೂಟ ಏರ್ಪಡಿಸಲಾಗಿದೆ. ಇದರಲ್ಲಿ ಹಗ್ಗ ಜಗ್ಗಾಟ, ಮಡಿಕೆ ಒಡೆಯವುದು. ಚಮಚದಲ್ಲಿ ನಿಂಬೆಹಣ್ಣು, ಥ್ರೋಬಾಲ್, ಮ್ಯೂಜಿಕಲ್ ಚೇರ್ ಸೇರಿದಂತೆ ವಿವಿಧ ಆಟಗಳನ್ನು ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಡಿಸಲಾಗುವುದು. 25 ರಿಂದ 50 ವರ್ಷದವರಿಗೆ ಒಂದು ಗುಂಪು, 50 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಆಟ ಇರುತ್ತದೆ. ಅಲ್ಲದೇ ಸಮಾರೋಪ ದಿನದಂದು ಶರಣರ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿದೆಎಂದು ತಿಳಿಸಿದರು.ಜಯದೇವ ಕಪ್ ಕ್ರೀಡಾಕೂಟದ ಗೌರವ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಶಂಕರ್ ಮೂರ್ತಿ, ಮಂಜುನಾಥ್ ಗೊಪ್ಪೆ, ಕ್ರೀಡಾಕೂಟದ ಉಸ್ತುವಾರಿಗಳಾದ ರವಿಶಂಕರ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಸೈಯದ್ ಅನೀಸ್, ಕಾರ್ಯದರ್ಶಿ ವಿಜಯಕುಮಾರ್, ಶಾಂತಕುಮಾರ್, ಸಂಘಟನಾ ಕಾರ್ಯದರ್ಶಿ ರವಿ ಮಲ್ಲಾಪುರ, ಸೈಯದ್‍ಖುದ್ದುಸ್, ಪ್ರಕಾಶ್‍ರಾಮನಾಯ್ಕ್, ಶಿವರಾಂ, ಜಯ್ಯಣ್ಣ ಮುರುಗೇಶ್, ರುದ್ರಮೂರ್ತಿ, ತಿಪ್ಪಣ್ಣ, ಪ್ರಸನ್ನ ಕುಮಾರ್ ಇದ್ದರು.