ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹಲವಾರು ದಶಕಗಳಿಂದ ಸಾವಿರಾರು ಮಂದಿ ಹಿರಿಯರು, ಸಮಾಜದ ಯುವಕರು, ತಾಯಂದಿರು ಸಂಘಟನೆಗಾಗಿ ಬದುಕನ್ನು ತೇದಿದ್ದಾರೆ. ಅವರೆಲ್ಲರನ್ನು ಸ್ಮರಿಸುತ್ತಲೇ ಪ್ರಸ್ತುತ ಸಂಘಟನೆಯನ್ನು ಬಲಗೊಳಿಸುವ ಸಂಕಲ್ಪ ತೊಡಲಾಗಿದೆ. ಬಲಗೈ ಸಮುದಾಯವನ್ನು ಸಂಘಟಿಸುವ ಹಾಗೂ ಶಿಕ್ಷಣ, ರಾಜಕೀಯ ಮತ್ತು ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ವತಿಯಿಂದ ಛಲವಾದಿ- ಹೊಲೆಯ ಬಲಗೈ ಜಾತಿಗಳ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ನಗರದ ಬಿ.ಬಿ. ರಸ್ತೆಯಲ್ಲಿರುವ ಅಂಬಾರಿ ಪ್ಯಾಲೇಸ್ ನಲ್ಲಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಜನಾಂಗ ಜಾಗೃತಿ ಮತ್ತು ಸ್ವಾಭಿಮಾನಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ನಾವು ಕೇವಲ ಒಂದು ಸಮುದಾಯದ ಕಾರ್ಯಕ್ರಮದ ಸಂಭ್ರಮಕ್ಕಾಗಿ ಸೇರಬೇಕಿಲ್ಲ. ಬದಲಿಗೆ ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳಲು, ನಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಲು ಮತ್ತು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಒಂದಾಗಿದ್ದೇವೆ, ಒಂದಾಗಿಯೇ ಸಾಗಬೇಕಾಗಿದೆ ಎಂದರು.

ಹೊಲೆಯ ಜನಾಂಗವು ಶತಮಾನಗಳ ಇತಿಹಾಸವನ್ನು ಹೊಂದಿರುವ ಶ್ರಮಜೀವಿ ಸಮುದಾಯವಾಗಿದೆ. ಅನೇಕ ಸಂಕಷ್ಟಗಳು, ಸಾಮಾಜಿಕ ಅಸಮಾನತೆಗಳು ಮತ್ತು ತಾರತಮ್ಯಗಳನ್ನು ಎದುರಿಸಿದರೂ ಈ ಸಮುದಾಯ ತನ್ನ ಆತ್ಮಸ್ಥೆರ್ಯ, ದುಡಿಮೆ ಮತ್ತು ಸಂಸ್ಕೃತಿಯನ್ನು ಎಂದಿಗೂ ಕಳೆದುಕೊಳ್ಳಲಿಲ್ಲ. ನಮ್ಮ ಪೂರ್ವಜರ ಶ್ರಮದಿಂದ ಸಮಾಜ ಕಟ್ಟಲ್ಪಟ್ಟಿದೆ. ಅವರ ತ್ಯಾಗ, ಬಲಿದಾನದಿಂದ ಗ್ರಾಮಗಳು ಬೆಳೆದಿವೆ ಮತ್ತು ನಾಗರಿಕತೆ ಮುಂದುವರಿದಿದೆ. ಸಮಾಜದ ಅಭಿವೃದ್ಧಿಯ ಹೊಣೆಗಾರಿಕೆ ಕೇವಲ ನಾಯಕರಿಗಲ್ಲ, ಪ್ರತಿಯೊಬ್ಬ ಸದಸ್ಯನಿಗೂ ಇದೆ. ಬನ್ನಿ, ನಾವು ಎಲ್ಲರೂ ಸೇರಿ ಸಂಕಲ್ಪ ಮಾಡೋಣ, ಸಂಘಟಿತರಾಗೋಣ. ಸಾಹೇಬರು ನೀಡಿರುವ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸರ್ವಸಮಾನವಾದ ಹಕ್ಕುಗಳಿವೆ. ನಮ್ಮ ಹಕ್ಕನ್ನು ನಾವು ಪಡೆಯಲು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡೋಣ. ಸಮಾಜದಲ್ಲಿ ಏಕತೆ ಮತ್ತು ಸಹೋದರತ್ವವನ್ನು ಬೆಳೆಸೋಣ. ಮೂಢನಂಬಿಕೆ, ಅಜ್ಞಾನ ಮತ್ತು ಸಾಮಾಜಿಕ ಕೆಡುಕುಗಳಿಂದ ದೂರವಿರೋಣ ಎಂದು ಕರೆ ನೀಡಿದರು.

ಚಿಕ್ಕಬಳ್ಳಾಪುರದಲ್ಲಿ ಅಂಬೇಡ್ಕರ್‌ವಾದಿಗಳ ಬೃಹತ್ ಸಮಾವೇಶ ನಡೆಯುತ್ತಿರುವುದು ಸಂತಸದ ಸಂಗತಿ. ಕೋಲಾರ–ಚಿಕ್ಕಬಳ್ಳಾಪುರ ಭಾಗವು ಸಾಮಾಜಿಕ ಹೋರಾಟಗಳ ತವರೂರು. ಅಸ್ಪೃಶ್ಯ ಸಮುದಾಯಗಳನ್ನು ಒಗ್ಗೂಡಿಸುವ ಕೆಲಸ ಸಂಘಟನೆಗಳು ಮಾಡಬೇಕು . ನ್ಯಾಯ, ಸಮಾನತೆ ಮತ್ತು ಅಭಿವೃದ್ಧಿಯ ಪರ ನಿಲ್ಲುವ ಪ್ರತಿಯೊಬ್ಬರೂ ಅಂಬೇಡ್ಕರ್‌ವಾದಿಗಳೇ. ಸಂವಿಧಾನ ಎಲ್ಲರನ್ನೂ ಭಾರತದ ಪ್ರಜೆಗಳೆಂದು ಗುರುತಿಸಿದರೂ, ಇಂದಿಗೂ ಜಾತಿ ಗುರುತುಗಳಿಂದಲೇ ಸಮಾಜವನ್ನು ನೋಡುವ ಮನಸ್ಥಿತಿ ಬದಲಾಗಿಲ್ಲ. ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು ಸಂಘಟಿತರಾಗುವುದು ಅನಿವಾರ್ಯ ಎಂದು ಹೇಳಿದರು.


ಜಿಲ್ಲಾ ಬಲಗೈ ಜಾತಿಗಳ ಒಕ್ಕೂಟದ ಸಲಹಾ ಸಮಿತಿಯ ಅಧ್ಯಕ್ಷ ಟಿ. ಶ್ರೀನಿವಾಸಪ್ಪ ಮಾತನಾಡಿ, ಬಲಗೈ ಜಾತಿಗಳಲ್ಲಿ ಜಾಗೃತಿ ಮೂಡಿಸಿ ಸಮಾಜವನ್ನು ಸಂಘಟಿಸುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಜನರನ್ನು ಹಣ ನೀಡಿ ಕರೆತರಲಾಗಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು, ಇಲ್ಲಿರುವ ಐದು ಸಾವಿರಕ್ಕೂ ಹೆಚ್ಚು ಜನರೇ ಸಾಕ್ಷಿ. ಯಾರಿಗೂ ನಯಾಪೈಸೆ ಹಣ ನೀಡಿಲ್ಲ. ತಾಲೂಕು ಘಟಕಗಳ ಅಧ್ಯಕ್ಷರು ಮತ್ತು ಕಾರ್ಯಕರ್ತರ ಪರಿಶ್ರಮದಿಂದಲೇ ಜನಸಾಗರ ಸೇರಿದೆ. ಸಮುದಾಯವನ್ನು ನನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವುದಿಲ್ಲ. ಸಮಾಜವನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲಗೊಳಿಸಲು ಶ್ರಮಿಸುತ್ತೇನೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಬಳಿಕ ಮಹದೇವಪ್ಪ ಅವರು ಚೆನ್ನಮ್ಮ ಅವರೊಂದಿಗಿನ ಆತ್ಮೀಯ ಒಡನಾಟವನ್ನು ಸ್ಮರಿಸಿದರು.

ಜನಪದ ಡಾ.ಅಪ್ಪಗೆರೆ ತಿಮ್ಮ ರಾಜು ಮತ್ತು ತಂಡವು ಜನಪರ ಮತ್ತು ಜನಪದ ಗೀತೆಗಳ ರಸದೌತಣ ಬಡಿಸಿದರು.

ಸಮಾವೇಶದಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಾಧ್ಯಕ್ಷ ಡಾ.ವೆಂಕಟಸ್ವಾಮಿ, ದೂರದರ್ಶನದ ಮಾಜಿ ನಿರ್ದೇಶಕ ಬಾನುಲಿ ಕೆಂಪಯ್ಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಡಾ.ಮೂರ್ತಿ, ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಜಿಲ್ಲಾ ಸಂಯೋಜಕ ಕಳವಾರ ಶ್ರೀಧರ್, ಜಿಲ್ಲಾಧ್ಯಕ್ಷ ರಾಮಕೃಷ್ಣ, ಆಂಜನೇಯ, ಹರೀಶ್, ಮುನಿಕೃಷ್ಣಪ್ಪ, ವೆಂಕಟ್ ಹಾಗೂ ವೆಂಕಟ್ ಕೃಷ್ಣ ಶಂಕರಪ್ಪ, ಚಂದ್ರಶೇಖರ್, ಚಿನ್ನಪ್ಪ, ನಾಗರಾಜ್, ವೆಂಕಟರೆಡ್ಡಿ, ರಾಮಚಂದ್ರ, ಗೌರೀಶ್, ತುಳಸಿಕೃಷ್ಣ, ಮತ್ತಿತರರು ಇದ್ದರು.