ಕೊಡಗಿನ ಯೋಗೇಶ್ (22) ಎಂಬ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆದು ಇತರರಿಗೆ ಜೀವದಾನ ನೀಡಿದ ಯುವಕನಿಗೆ ನಡೆದಿದೆ.
ಮಡಿಕೇರಿ: ಕೊಡಗಿನ ಯೋಗೇಶ್ (22) ಎಂಬ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆದು ಇತರರಿಗೆ ಜೀವದಾನ ನೀಡಿದ ಯುವಕನಿಗೆ ನಡೆದಿದೆ.
ಸಾವಿರಾರು ಜನ ಈತನಿಗೆ ಅಶ್ರುತರ್ಪಣ ಸಲ್ಲಿಸಿದ್ದಾರೆ. ಮಡಿಕೇರಿಯ ಸಪ್ತಗಿರಿ ಎಂಟರ್ಪ್ರೈಸಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯೋಗೇಶ್ ಶನಿವಾರ ತಡರಾತ್ರಿಯವರೆಗೂ ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ. ಭಾನುವಾರ ಬೆಳಗ್ಗೆ ಮನೆಯಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದ ಯೋಗೇಶ್ನನ್ನು ತಕ್ಷಣ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯಕೀಯ ಪರೀಕ್ಷೆಗಳ ನಂತರ ಯೋಗೇಶ್ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಬಳಿಕ ಆತನನ್ನು ಮಡಿಕೇರಿಗೆ ಕರೆತಂದು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಯಿತು. ಆದರೆ, ಈ ದುಃಖದ ನಡುವೆಯೂ ಯೋಗೇಶ್ ಕುಟುಂಬ ತೆಗೆದುಕೊಂಡ ನಿರ್ಧಾರ ಮಾತ್ರ ಎಲ್ಲರ ಮನಗೆದ್ದಿದೆ. ತಮ್ಮ ಮನೆಯ ಮಗನ ಬದುಕು ಮರಳಿ ಸಿಗದಿದ್ದರೂ, ಆತನ ಅಂಗಾಂಗಗಳ ಮೂಲಕ ಬೇರೆಯವರ ಬದುಕು ಉಳಿಯಲಿ ಎಂಬ ಮಹದಾಸೆಯಿಂದ ಕುಟುಂಬ ಅಂಗಾಂಗ ದಾನಕ್ಕೆ ಸಮ್ಮತಿಸಿತು.
ಯೋಗೇಶ್ ಹಲವಾರು ವರ್ಷಗಳಿಂದ ರಕ್ತದಾನ ಮಾಡುತ್ತಿದ್ದ. ಈತನ ಅಂಗಾಂಗ ದಾನಕ್ಕೆ ಕುಟುಂಬ ನಿರ್ಧಾರ ಮಾಡಿತು. ಬುಧವಾರ ಮಡಿಕೇರಿಯ ವೈದ್ಯಕೀಯ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆಸಿದ ವೈದ್ಯರ ತಂಡ ಯೋಗೇಶ್ ದೇಹದಿಂದ ಲಿವರ್ ಹಾಗೂ ಕಣ್ಣುಗಳನ್ನು ತೆಗೆದು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಿದೆ. ಮೃತದೇಹಕ್ಕೆ ಅಗಲಿದ ಯೋಗೇಶ್ ಗೆ ವೈದ್ಯರು, ನರ್ಸ್ಗಳು, ಸಾರ್ವಜನಿಕರು ಸೇರಿದಂತೆ ನೂರಾರು ಜನ ಪುಷ್ಪ ನಮನ ಸಲ್ಲಿಸಿದರು. ಇಡೀ ಆಸ್ಪತ್ರೆಯ ಎಲ್ಲೆಡೆ ನಿಂತು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.