2026–27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜು. 19ರಂದು ಓರಿಯೆಂಟೇಶನ್ ಕಾರ್ಯಕ್ರಮ ನಡೆಯಿತು.

ಹೆಬ್ರಿ: 2026–27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜು. 19ರಂದು ಓರಿಯೆಂಟೇಶನ್ ಕಾರ್ಯಕ್ರಮ ನಡೆಯಿತು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ದಿನೇಶ್ ಶೆಟ್ಟಿ ಉದ್ಘಾಟಿಸಿ, ಉನ್ನತ ಶಿಕ್ಷಣವು ಕೇವಲ ಪದವಿ ಗಳಿಸುವ ಸಾಧನವಲ್ಲ. ವ್ಯಕ್ತಿತ್ವ ವಿಕಸನ, ಸಾಮಾಜಿಕ ಹೊಣೆಗಾರಿಕೆ, ನೈತಿಕ ಮೌಲ್ಯಗಳು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಶಕ್ತಿಯುತ ಮಾಧ್ಯಮವಾಗಿದೆ ಎಂದು ಹೇಳಿದರು. ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ ಎಸ್. ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್, ಪರಿಸರ ಸಂರಕ್ಷಣಾ ಚಟುವಟಿಕೆಗಳು ಸೇರಿದಂತೆ ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ವ್ಯಕ್ತಿತ್ವವನ್ನು ಸಮಗ್ರವಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಅಧ್ಯಾಪಕರು ಕಾಲೇಜಿನ ಶೈಕ್ಷಣಿಕ ವ್ಯವಸ್ಥೆ, ಗ್ರಂಥಾಲಯ, ವಿದ್ಯಾರ್ಥಿವೇತನ ಯೋಜನೆಗಳು, ಮಾರ್ಗದರ್ಶನ ಮತ್ತು ಸಮಾಲೋಚನಾ ಸೇವೆಗಳು, ವೃತ್ತಿ ಮಾರ್ಗದರ್ಶನ, ಉದ್ಯೋಗಾವಕಾಶಗಳು ಹಾಗೂ ವಿದ್ಯಾರ್ಥಿ ಬೆಂಬಲ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪ್ರವೀಣ್ ಶೆಟ್ಟಿ ನಿರೂಪಿಸಿ, ಡಾ. ಗಣೇಶ ಎಸ್. ವಂದಿಸಿದರು.