ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ವಾಸಿಯಾಗಿರುವ ಯೋಗ ಮತ್ತು ಸಂಗೀತದ ಮೂಲಬೇರು ಭಾರತ ದೇಶವಾಗಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಹೇಳಿದರು.ತಾಲೂಕಿನ ಆದಿಚುಂಚನಗಿರಿ ಮಠದ ಶ್ರೀಗಿರಿತಪೋವನದಲ್ಲಿರುವ ಕಾಲಭೈರವೇಶ್ವರ ಸಂಸ್ಕೃತ ವೇದ ಆಗಮ ಶಾಲೆ ಮತ್ತು ವೇದ ಪಾಠಶಾಲೆಯ ಆವರಣದಲ್ಲಿ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನ ಮತ್ತು ವಿಶ್ವ ಸಂಗೀತ ದಿನವನ್ನು ಉದ್ಘಾಟಿಸಿ ಮಾತನಾಡಿದರು.ಯೋಗ ಮಾನವನ ದೇಹ ಮತ್ತು ಚಿತ್ತ ಎರಡನ್ನು ಶುದ್ಧಿಗೊಳಿಸುತ್ತದೆ. ಶರೀರದಲ್ಲಿರುವ ಕಲ್ಮಶಗಳನ್ನು ತೊಡೆಯಲು ಯೋಗ ತುಂಬಾ ಉಪಯುಕ್ತ. ಯೋಗಾಭ್ಯಾಸವನ್ನು ಕೇವಲ ಜೂ.21ಕ್ಕೆ ಮಾತ್ರ ಸೀಮಿತಗೊಳಿಸದೆ ಪ್ರತಿನಿತ್ಯ ಅಭ್ಯಾಸ ಮಾಡಿದರೆ ಮನುಷ್ಯ ಚಿತ್ತ ಶುದ್ಧಿಯಾಗುತ್ತದೆ. ಯೋಗವನ್ನು ಇಂದು ವಿಶ್ವದೆಲ್ಲೆಡೆ ಆಚರಿಸುತ್ತಿದ್ದಾರೆ. ಆದರೆ, ಅದರ ಮೂಲ ಬೇರು ನಮ್ಮ ದೇಶವಾಗಿದೆ. ಅದೇ ರೀತಿ ಸಂಗೀತವೂ ಕೂಡ ಇಂದು ವಿಶ್ವವ್ಯಾಪಿ ಪಸರಿಸಿದೆ. ಸಂಗೀತ ಎಂಬ ಕಲೆ ಮತ್ತು ಅದರ ಪರಿಕರಗಳ ಮೂಲ ನಮ್ಮ ದೇಶದ್ದು ಎಂದು ತಿಳಿಸಿದರು.
ವಿದೇಶಗಳಲ್ಲಿ ಸಂಗೀತಕ್ಕೆ ಸಂಬಂಧಿಸಿದ ಪರಿಕರಗಳು ನಮ್ಮ ದೇಶದಲ್ಲಿ ತಯಾರಾಗುತ್ತವೆ. ಕೋಗಿಲೆಯು ಜನರು ಕೇಳಲಿ ಅಥವಾ ಚಪ್ಪಾಳೆ ಗಿಟ್ಟಿಸುವ ಸಲುವಾಗಿ ಎಂದೂ ಹಾಡುವುದಿಲ್ಲ. ಅದೇ ರೀತಿ ಆತ್ಮತೃಪ್ತಿಗಾಗಿ ಸಂಗೀತವನ್ನು ಅಭ್ಯಾಸ ಮಾಡಿದವನಿಗೆ ಮಾತ್ರ ಸಂಗೀತ ಮನಸೇರುತ್ತದೆ. ಸನಾತನ ಭಾರತೀಯ ಸಂಸ್ಕೃತಿ ಬೇರೆ ರಾಷ್ಟ್ರಗಳ ಪಾಲಾಗಿದೆ ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಸಂಗೀತ, ಸಾಹಿತ್ಯದ ಕಲೆಯಿಲ್ಲದವನು ಭಾರತೀಯನಾಗಲು ಸಾಧ್ಯವಿಲ್ಲ ಎಂದರು. ಆದಿಚುಂಚನಗಿರಿ ಮಠದ ಭೈರವನಾಥ ಸ್ವಾಮೀಜಿ, ಸಂವಿಧಾನನಂದನಾಥ ಸ್ವಾಮೀಜಿ, ಪ್ರಾಂಶುಪಾಲ ಡಾ.ಶ್ರೀಕಾಂತ್ ಪುರೋಹಿತ್, ಡಾ.ಮಂಜುನಾಥ ಹೆಗಡೆ ಸೇರಿದಂತೆ ಹಲವರಿದ್ದರು.