ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ ಮತ್ತು ಪುಷ್ಪಕೃಷಿಯನ್ನು ಚಾಂಪಿಯನ್ ಸೇವಾ ವಲಯಗಳಲ್ಲಿ ಒಂದು ಎಂದು ಸರ್ಕಾರ ಗುರುತಿಸಿದ್ದು, ಈ ವಲಯದ ಕುರಿತು ಹೆಚ್ಚಿನ ಚರ್ಚೆ, ಅಧ್ಯಯನ ನಡೆಸಿ, ಕಾರ್ಯರೂಪಕ್ಕೆ ತರುವ ಕೆಲಸ ಆಗಬೇಕು ಎಂದು ಐಎಸ್‌ಒಎಚ್‌ನನ ಅಧ್ಯಕ್ಷ, ಹರಿಯಾಣದ ಎಂಎಚ್‌ಯು ಕುಲಪತಿ ಡಾ.ಎಸ್.ಕೆ.ಮಲ್ಹೋತ್ರಾ ತಿಳಿಸಿದರು.ನಗರದ ನವಿಲೆ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯ ಅಲಂಕಾರಿಕ ತೋಟಗಾರಿಕೆ ಸಂಘ, ಐಸಿಎಆರ್-ಐಎಆರ್‌ಐ ನವದೆಹಲಿ, ಐಸಿಎಆರ್-ಪುಷ್ಪ ಕೃಷಿ ಸಂಶೋಧನಾ ನಿರ್ದೇಶನಾಲಯ ಪುಣೆ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಐಸಿಎಆರ್-ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಈ ಸಂಸ್ಥೆಗಳ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಏರ್ಪಡಿಸಿರುವ ವಿಕಸಿತ ಭಾರತ 2047ರ ಪುಷ್ಪ ಕೃಷಿ ಮತ್ತು ಭೂದೃಶ್ಯ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
2047ರ ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವ ನೋಟ ಹೊಂದಿದೆ. ಆದರೆ ಇದನ್ನು ಸಾಧಿಸಲು ಹವಾಮಾನ ಬದಲಾವಣೆಯಂತಹ ಹಲವಾರು ಸವಾಲುಗಳಿವೆ. ಹಸಿರುಮನೆ ಅನಿಲಗಳನ್ನು ಶೇ.15 ರಿಂದ ಶೇ.5ಕ್ಕೆ ಇಳಿಸಬೇಕಿದೆ. ಸುಸ್ಥಿರ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಈ ಪರಿಣಾಮಗಳನ್ನೆಲ್ಲ ತಗ್ಗಿಸಬೇಕಿದೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಶ್ರಮಿಸಬೇಕಿದೆ ಎಂದರು.1919ರಲ್ಲಿ ಇಂಡಿಯನ್ ಸೊಸೈಟಿ ಆಫ್ ಆರ್ನಮೆಂಟಲ್ ಹಾರ್ಟಿಕಲ್ಚರ್ ರಚನೆಯಾಗಿದ್ದು, ಅಲಂಕಾರಿಕ ಸಸ್ಯಗಳು ಮತ್ತು ಪುಷ್ಪಕೃಷಿ ಕುರಿತು ಭಾಗೀದಾರರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ ಎಂದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಬಿ.ಹೇಮ್ಲಾ ನಾಯ್ಕ್ ಮಾತನಾಡಿ, ಪುಷ್ಪ ಕೃಷಿಯು ಜಾಗತಿಕವಾಗಿ ಮಲ್ಟಿ ಬಿಲಿಯನ್ ಡಾಲರ್ ಉದ್ಯಮವಾಗಿ ಹೊರಹೊಮ್ಮಿದ್ದು, ಇದರಿಂದ 55 ಬಿಲಿಯನ್ ಡಾಲರ್ ಆದಾಯ ಬರುತ್ತಿದೆ.10 ಮಿಲಿಯನ್ ಜನರಿಗೆ ಉದ್ಯೋಗ ಒದಗಿದೆ. ಭಾರತ ದೇಶ ಪುಷ್ಪಕೃಷಿಯಲ್ಲಿ ಚೀನಾದ ನಂತರ ಎರಡನೇ ದೊಡ್ಡ ದೇಶವಾಗಿದೆ. 2.97 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪಕೃಷಿ ಮಾಡಲಾಗುತ್ತಿದೆ ಎಂದರು.
ಐಸಿಎಆರ್-ಐಎಆರ್‌ಐ ನಿಕಟಪೂರ್ವ ಡೀನ್ ಡಾ.ಎಸ್.ಎಸ್.ಸಿಂಧು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ ಮಾತನಾಡಿದರು.
ಭಾರತೀಯ ಅಲಂಕಾರಿಕ ತೋಟಗಾರಿಕೆ ಸಂಘದ ವತಿಯಿಂದ 5 ಮಂದಿ ಪುಷ್ಪ ಕೃಷಿ ವಿಜ್ಞಾನಿಗಳಿಗೆ ಫೆಲೋಷಿಪ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇಬ್ಬರು ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಡಾಕ್ಟೋರಲ್ ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ, 4 ಮಂದಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ನೀಡಲಾಯಿತು. ಇಬ್ಬರಿಗೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿ ನೀಡಲಾಯಿತು.ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವರಾಜ್, ಡಾ.ಬಿ.ಕೆ ಕುಮಾರಸ್ವಾಮಿ, ಎಚ್.ಡಿ.ದೇವಿಕುಮಾರ್, ಜೆ.ಜಿ.ಕಾವೇರಿಯಪ್ಪ, ಎಚ್.ಎಸ್.ಶಶಾಂಕ್, ಕೃಷಿ ವಿವಿ ಬೋಧಕ, ಬೋಧಕೇತರ ಸಿಬ್ಬಂ ಹಾಜರಿದ್ದರು.
ಸ್ಟಾರ್ಟ್‌ಅಪ್‌ಗಳಿಗೆ ಪುಷ್ಪ ಕೃಷಿ ಅನುಕೂಲಕರಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ವೈಎಸ್ ಆರ್ ತೋಟಗಾರಿಕಾ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿ ಡಾ.ಟಿ.ಜಾನಕಿರಾಮ್ ಮಾತನಾಡಿ, ಪುಷ್ಪ ಕೃಷಿಯು ಕೌಶಲ್ಯ ಅಭಿವೃದ್ಧಿಗೆ, ಹೊಸ ಸ್ಟಾರ್ಟ್‌ಅಪ್‌ಗಳ ಆರಂಭಕ್ಕೆ ಅನುಕೂಲಕರವಾಗಿದೆ. ಸ್ವಂತ ಉದ್ಯಮ ಒದಗಿಸುವ ಜೊತೆ ಇತರರಿಗೂ ಉದ್ಯೋಗ ನೀಡುತ್ತಿದೆ. ಪುಷ್ಪಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಕೃತಕ ಬುದ್ದಿಮತ್ತೆ ಬಳಕೆ ಕೂಡ ಬಹಳ ಮುಖ್ಯವಾಗಿದೆ ಎಂದರು.