ಸಾಧನೆಗೆ ಛಲವಿದ್ದರೆ ಏನಾದರೂ ಸಾಧಿಸಬಹುದೆಂದು ತೋರಿಸಿದ ಮೈಲಾರಿ, ಮಲ್ಲಕಂಬ, ಯೋಗ, ನಾಟ್ಯ ಯೋಗದಲ್ಲೇ ಪರಿಣಿತಿ ಪಡೆದಿದ್ದಾನೆ. ಈ ವರ್ಷ ಸಾಮಾನ್ಯ ಮಕ್ಕಳೊಂದಿಗೆ ನಡೆದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ನಾಟ್ಯ ಯೋಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಅನಾಥ ಹಾಗೂ ಅಂಧ ವಿದ್ಯಾರ್ಥಿಯಾದರೂ ಸಾಧನೆ ಮಾತ್ರ ಕಣ್ಣಿದ್ದವರಿಗೂ ಕಮ್ಮಿ ಇಲ್ಲದಂತೆ ಮಾಡಿ ತೋರಿಸಿದ್ದಾನೆ ಈ ಬಾಲಕ.

ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಇಲಾಖೆಯ ಬಾಲಭವನ ಕೊಡಮಾಡುವ ಕಲಾಶ್ರೀ ಪ್ರಶಸ್ತಿಗೆ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆಯ ಮೈಲಾರಿ ವಗ್ಗರ ಭಾಜನನಾಗಿದ್ದಾನೆ.

ಮೈಲಾರಿ ವಗ್ಗರ (15) ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದವನು. ಈತನ ತಂದೆ ವಿಠ್ಠಲ, ತಾಯಿ ರುಕ್ಮವ್ವ. ತಂದೆ ಕೂಡ ಅಂಧರಾಗಿದ್ದು ಈತ 3 ವರ್ಷವಿದ್ದಾಗಲೇ ತಂದೆ, 8 ವರ್ಷದ ಬಳಿಕ ತಾಯಿ ಕಳೆದುಕೊಂಡಿದ್ದು, ಅಕ್ಕ ಮಾತ್ರ ಇದ್ದಾಳೆ. ಈ ಇಬ್ಬರು ಮಕ್ಕಳನ್ನು ಸೋದರ ಮಾವ ಮಲ್ಲಪ್ಪ ಕಾಮಣ್ಣವರ ಸಾಕಿ ಸಲಹಿದ್ದಾರೆ. ಮೈಲಾರಿ ಹುಟ್ಟು ಅಂಧನಾಗಿದ್ದರೂ ವಿದ್ಯಾಭ್ಯಾಸ ಮಾಡಲಿ ಎಂದು ಮಲ್ಲಪ್ಪ 3ನೇ ತರಗತಿಯಿದ್ದಾಗಲೇ ಹೊಳೆಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ಶಾಲೆಗೆ ಸೇರಿಸಿದ್ದು ಅಲ್ಲಿಯೇ ಇರುತ್ತಾನೆ. ರಜೆಯಲ್ಲಿ ಮಾತ್ರ ಮಾವನ ಮನೆಗೆ ಹೋಗುತ್ತಾನೆ.

ನಾಟ್ಯಯೋಗ, ಮಲ್ಲಕಂಬ:

ಸಾಧನೆಗೆ ಛಲವಿದ್ದರೆ ಏನಾದರೂ ಸಾಧಿಸಬಹುದೆಂದು ತೋರಿಸಿದ ಮೈಲಾರಿ, ಮಲ್ಲಕಂಬ, ಯೋಗ, ನಾಟ್ಯ ಯೋಗದಲ್ಲೇ ಪರಿಣಿತಿ ಪಡೆದಿದ್ದಾನೆ. ಈ ವರ್ಷ ಸಾಮಾನ್ಯ ಮಕ್ಕಳೊಂದಿಗೆ ನಡೆದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ನಾಟ್ಯ ಯೋಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಅಲ್ಲಿಯೂ ಸಾಮಾನ್ಯ ಮಕ್ಕಳೊಂದಿಗೆ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದಿದ್ದರಿಂದ ಕಲಾಶ್ರೀ ಪ್ರಶಸ್ತಿ ಲಭಿಸಿದೆ.

ಮೈಸೂರು ದಸರಾದಲ್ಲಿ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುವ ಈತ, ರಾಜ್ಯಮಟ್ಟದ ಪ್ಯಾರಾ ಒಲಂಪಿಕ್‌ನಲ್ಲೂ ಪ್ರಥಮ ಸ್ಥಾನ ಪಡೆದಿದ್ದ. ಇದೀಗ ಕಲಾಶ್ರೀ ಪ್ರಶಸ್ತಿಗೆ ಭಾಜನನಾಗಿದ್ದು ಉಳಿದವರಿಗೆ ಮಾದರಿಯಾಗಿದ್ದಾನೆ.ಇಂದು ಪ್ರಶಸ್ತಿ ಪ್ರದಾನ

ಕರ್ನಾಟಕ ಸರ್ಕಾರದ ಬಾಲಭವನದ ಪರವಾಗಿ ಬೆಂಗಳೂರಲ್ಲಿ ನ. 28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮೈಲಾರಿ ಅಂಧನಾದರೂ ಮಲ್ಲಕಂಬ, ಯೋಗದಲ್ಲಿ ಮಾಡಿರುವ ಸಾಧನೆ ನಿಜಕ್ಕೂ ಖುಷಿ ತಂದಿದೆ. ನಮ್ಮ ಸಂಸ್ಥೆಗೆ ಇದೊಂದು ಹೆಮ್ಮೆಯ ವಿಷಯ.

ಶಿವಾನಂದ ಕೆಲೂರ, ಕಾರ್ಯದರ್ಶಿ, ಜ್ಞಾನಸಿಂಧು ಅಂಧ ಮಕ್ಕಳ ವಸತಿ ಶಾಲೆ, ಹೊಳೆಆಲೂರನನಗೆ ಕಲಾಶ್ರೀ ಪ್ರಶಸ್ತಿ ಬರುತ್ತದೆ ಎಂದುಕೊಂಡಿರಲಿಲ್ಲ. ನಾನೂ ಹೇಗೆ ಮಾಡಿದೇನೋ ಅದು ಗೊತ್ತಿಲ್ಲ. ಎಲ್ಲವೂ ನನ್ನ ಶಿಕ್ಷಕರು, ಕೆಲೂರ ಸರ್‌ ಕಲಿಸಿದಂತೆ ಮಾಡಿದ್ದೇನೆ ಅಷ್ಟೇ. ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ.

ಮೈಲಾರಿ ವಗ್ಗರ, ಅಂಧ ಬಾಲಕ