ಸಾರಾಂಶ
ಹಾವೇರಿ: 25 ವರ್ಷಗಳ ಹಿಂದೆ ಊರು ಬಿಟ್ಟು ಹೋಗಿದ್ದ ವ್ಯಕ್ತಿಯೊಬ್ಬ ಈಚೆಗೆ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಗುರುತು ಪತ್ತೆಹಚ್ಚಿ ಆತನ ಸಂಬಂಧಿಕರು ಗ್ರಾಮದಲ್ಲಿ ಯಾರೂ ಇಲ್ಲದ್ದರಿಂದ ಗ್ರಾಮ ಪಂಚಾಯ್ತಿಯಿಂದಲೇ ಆತನ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಕಳೆದ ಜು.13ರಂದು ಹಾವೇರಿ ಬೈಪಾಸ್ ರಸ್ತೆಯ ಬದಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ, ಮಾತನಾಡಲು ಬಾರದ ಸುಮಾರು 60 ವರ್ಷದ ಅಪರಿಚಿತ ವ್ಯಕ್ತಿಯನ್ನು ಹೈವೇ ಪಟ್ರೋಲಿಂಗ್ ವಾಹನದ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆ ವ್ಯಕ್ತಿ ಚಿಕಿತ್ಸೆ ಫಲಿಸದೇ ಜು.16ರಂದು ಮೃತಪಟ್ಟಿದ್ದಾನೆ. ನಂತರ ಈತನ ಸಂಬಂಧಿಕರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಶವವನ್ನು ಹಾವೇರಿ ಜಿಲ್ಲಾಸ್ಪತ್ರೆಯ ಶೀತಲ ಕೇಂದ್ರದಲ್ಲಿ ಇಡಲಾಗಿತ್ತು. ಮೃತನ ಚಹರೆ ಗುರುತಿನೊಂದಿಗೆ ವಿವಿಧ ಹಳ್ಳಿಗಳಲ್ಲಿ ಪೊಲೀಸರು ವಿಚಾರಣೆ ಮಾಡಿದಾಗ ಮೃತ ವ್ಯಕ್ತಿಯು ತವರಮೆಳ್ಳಿಹಳ್ಳಿಯ ಕೆಂಚಪ್ಪ ಲಕ್ಷ್ಮಣ ಬಾರ್ಕಿ ಎಂದು ತಿಳಿದುಬಂದಿದೆ.ಆದರೆ, ಸಂಬಂಧಿಕರು ಯಾರೂ ಬಾರದ್ದರಿಂದ ಗ್ರಾಮಕ್ಕೆ ತೆರಳಿ ಪೊಲೀಸರು ಪರಿಶೀಲಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚೆ ಮಾಡಿದ್ದಾರೆ. ಮೃತನು ಮೂಲ ನಮ್ಮ ಗ್ರಾಮದವನೇ ಆಗಿದ್ದು, ಸುಮಾರು 25 ವರ್ಷಗಳ ಹಿಂದೆ ಬೇರೆ ಕಡೆಗೆ ಹೋಗಿದ್ದರಿಂದ ಅವನ ಹತ್ತಿರದ ಸಂಬಂಧಿಕರು ಇಲ್ಲಿ ಯಾರೂ ಇಲ್ಲ ಎಂದು ತಿಳಿಸಿದ್ದಾರೆ. ಬಳಿಕ ಪೊಲೀಸರ ಮನವಿ ಮೇರೆಗೆ ಮೃತನ ಅಂತ್ಯ ಸಂಸ್ಕಾರವನ್ನು ಪಂಚಾಯಿತಿ ವತಿಯಿಂದಲೇ ನೆರವೇರಿಸಲು ಒಪ್ಪಿದರು.
ಗ್ರಾಮದಲ್ಲಿ ಮೃತ ವ್ಯಕ್ತಿ ಕೆಂಚಪ್ಪನ ಪರಿಚಯ ಇರುವವರಿಂದ ಪೊಲೀಸರು ಹೇಳಿಕೆಗಳನ್ನು ಸಂಗ್ರಹಿಸಿ, ವೈದ್ಯಾಧಿಕಾರಿಗಳಿಂದ ಶವ ಪರೀಕ್ಷೆ ಮಾಡಿಸಿ ಶವವನ್ನು ಗ್ರಾಪಂಗೆ ಹಸ್ತಾಂತರಿಸಿದರು. ಈ ಹಿನ್ನೆಲೆಯಲ್ಲಿ ಸೋಮವಾರ ತವರಮೆಳ್ಳಿಹಳ್ಳಿ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ ಸೇರಿದಂತೆ ಗ್ರಾಮಸ್ಥರೆಲ್ಲ ಸೇರಿ ಮೃತನ ಅಂತ್ಯಸಂಸ್ಕಾರ ನೆರವೇರಿಸಿದರು.ಗ್ರಾಪಂ ಅಧ್ಯಕ್ಷೆ ಬಸಮ್ಮ ದೊಡ್ಡಮನಿ, ಸದಸ್ಯರಾದ ಪ್ರಶಾಂತ ಕ್ಷತ್ರಿಯ, ಕುಬೇರಪ್ಪ ಕೊಪ್ಪದ, ಗುರಪ್ಪ ಅಕ್ಕಿ, ಸಂತೋಷ ಅಣ್ಣಿಗೇರಿ, ಪಿಡಿಒ ಬಿ.ಎ. ಕಲಕೋಟಿ ಗ್ರಾಮದ ಪ್ರಮುಖರು ಇದ್ದರು.