ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಚಂದ್ರಯಾನ– 2 ಯೋಜನೆ ತಪ್ಪುಗಳಿಂದ ಕಲಿತ ಪಾಠಗಳು ಚಂದ್ರಯಾನ–3 ಯಶಸ್ಸಿಗೆ ನೆರವಾದವು ಎಂದು ಇಸ್ರೋ ಹಿರಿಯ ವಿಜ್ಞಾನಿ ನಂದಿನಿ ಹರಿನಾಥ್ ತಿಳಿಸಿದರು.ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಅನಾಥಾಲಯದಲ್ಲಿ ಭಾನುವಾರ ಆಯೋಜಿಸಿದ್ದ ತಾತಯ್ಯ ಸ್ಮಾರಕ ಉಪನ್ಯಾಸದಲ್ಲಿ ಚಂದ್ರಯಾನ-3ರ ಒಳನೋಟ ಕುರಿತು ಮಾತನಾಡಿದ ಅವರು, ತಪ್ಪು ಯಶಸ್ಸಿನ ದಾರಿ ತೆರೆಯುತ್ತದೆ. ಹೀಗಾಗಿ, ನಮ್ಮ ತಪ್ಪುಗಳನ್ನು ಗುರುತಿಸಿ, ಬೇಗ ಸರಿಪಡಿಸಿಕೊಳ್ಳಬೇಕು ಎಂದರು.
ಸಾವಿರಾರು ಕೋಟಿ ಮೌಲ್ಯದ ಹಾಗೂ ದೇಶದ ಕನಸಿನ ಜವಾಬ್ದಾರಿಯು ಇಸ್ರೋದ ಪ್ರತಿ ವಿಜ್ಞಾನಿಯ ಹೆಗಲ ಮೇಲಿರುತ್ತದೆ. ಚಂದ್ರಯಾನ–2 ಯೋಜನೆಯ ತಪ್ಪುಗಳು ಚಂದ್ರಯಾನ- 3ರಲ್ಲಿ ಮರುಕಳಿಸದಂತೆ ಎಚ್ಚರವಹಿಸಲಾಗಿತ್ತು. ಹಿಂದಿನ ಯೋಜನೆಯಡಿ ತೆಗೆದಿದ್ದ ಚಂದ್ರನ ಅಂಗಳದ ಸಾವಿರಾರು ಚಿತ್ರಗಳು ಚಂದ್ರಯಾನ- 3ರ ಯಶಸ್ಸಿಗೆ ನೆರವಾದವು ಎಂದು ಅವರು ಹೇಳಿದರು.ಪರಿಶ್ರಮ ಹಾಗೂ ಬುದ್ಧಿವಂತಿಕೆಯೇ ಇಸ್ರೋ ಯೋಜನೆಗಳ ಯಶಸ್ಸಿನ ಹಿಂದಿರುವ ಗುಟ್ಟು. ದಶಕಗಳಿಂದ ಇಸ್ರೋ ಹಂತ ಹಂತವಾಗಿ ಬೆಳೆದಿದೆ. ಉಪಗ್ರಹಗಳು 1 ಕಿ.ಮೀ ಅಗಲದ ಚಿತ್ರಗಳನ್ನು ತೆಗೆಯುತ್ತಿದ್ದವು. ಇದೀಗ 25 ಸೆಂ.ಮೀ ಗಾತ್ರದ ವಸ್ತುಗಳನ್ನು ಗುರುತಿಸುವ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ. ಬಾಹ್ಯಾಕಾಶದ ಸಂಶೋಧನೆಗಳು ಮಾನವನ ಅಭಿವೃದ್ಧಿಗೆ ಉಪಯೋಗವಾಗುತ್ತವೆ ಎಂದು ಅವರು ತಿಳಿಸಿದರು.
500 ಕಿ.ಮೀ ದೂರದ ಭೂ ಕಕ್ಷೆಗೆ ಹೋಗುತ್ತಿದ್ದ ನಮ್ಮ ಉಪಗ್ರಹಗಳು ಕ್ರಮೇಣ 36 ಸಾವಿರ ಕಿ.ಮೀ ವರೆಗೆ ಹೋದವು. ನಂತರ ಮಂಗಳನ ಕಕ್ಷೆಗೂ ಹೋಗಿವೆ. ಇದೀಗ ಆದಿತ್ಯ ಯೋಜನೆಯು ಇಸ್ರೋದ ಮೈಲಿಗಲ್ಲಾಗಿದೆ. ಸೌರ ಮಂಡಲ ಇರುವ ಹಾಲುಹಾದಿ ಗ್ಯಾಲಕ್ಸಿಯಲ್ಲೇ 40 ಕೋಟಿ ಸೂರ್ಯರು ಇದ್ದಾರೆ. ಹಾಲಹಾದಿಯಂತಹ ಗ್ಯಾಲಕ್ಸಿಗಳು 2 ಲಕ್ಷ ಕೋಟಿ ಇವೆ. ಭೂಮಿಯನ್ನು ಹೋಲುವ ಗ್ರಹ ಬೇರೆಲ್ಲೋ ಇದ್ದೇ ಇದೆ. ನಾವು ನಮ್ಮ ಪ್ರಯತ್ನಗಳನ್ನು ಬಿಡಬಾರದು ಎಂದು ಅವರು ಹೇಳಿದರು.ಪ್ರಾಚೀನ ಭಾರತೀಯರು ಹಗಲು ಮತ್ತು ರಾತ್ರಿಯ ಅವಧಿ, ಸೂರ್ಯಗ್ರಹಣ ಹಾಗೂ ಚಂದ್ರಗ್ರಹಣದ ಬಗ್ಗೆ ಕರಾರುವಕ್ಕಾಗಿ ಹೇಳುತ್ತಿದ್ದರು. ಭಾಸ್ಕರಾಚಾರ್ಯ, ಆರ್ಯಭಟ, ವರಾಹಮೀರ ಮೊದಲಾದ ವಿಜ್ಞಾನಿಗಳು ಜ್ಞಾನವನ್ನು ಬೆಳೆಸಿದರು. ನಾವು ಕೂಡ ವಿಜ್ಞಾನವನ್ನು ವಿಸ್ತರಿಸಬೇಕು ಎಂದರು.
ಇದೇ ವೇಳೆ ಇಸ್ರೋ ವಿಜ್ಞಾನಿಗಳಾದ ನಂದಿನಿ ಹರಿನಾಥ್ ಹಾಗೂ ಎಂ. ಹರಿನಾಥ್ ಅವರನ್ನು ಸನ್ಮಾನಿಸಲಾಯಿತು. ಅನಾಥಾಲಯದ ಅಧ್ಯಕ್ಷ ಸಿ.ವಿ. ಗೋಪಿನಾಥ್, ಸಿ.ವಿ. ಕೇಶವಮೂರ್ತಿ, ಸತೀಶ್, ವೆಂಕಟೇಶ್, ಸುರೇಶ್, ದಿನೇಶ್, ಮುರುಳಿ, ನಾದಮಣಿ ಸಂಪತ್, ಅಶ್ವತ್ಥನಾರಾಯಣ ಇದ್ದರು.