ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಸರ್ಕಾರಿ ಶಾಲೆಗಳನ್ನು ಮಾದರಿಯಾಗಿಸುವುದು ಮತ್ತು ಖಾಸಗಿ ಶಾಲೆಗಳಿಗೆ ಸರಿಸಮಾನ ಶಿಕ್ಷಣ ನೀಡುವುದು ನಮ್ಮ ಆದ್ಯತೆಯಾಗಿದ್ದು ಅದರಂತೆ ಕಾಮಸಮುದ್ರ ಸರ್ಕಾರಿ ಶಾಲೆ ಅಭಿವೃದ್ಧಿಗೆ 2.17 ಕೋಟಿ ರು. ನೀಡಲಾಗುವುದು ಎಂದು ಓಸಾಟ್ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ವೀರಣ್ಣ ಗೌಡ ಹೇಳಿದರು.ತಾಲೂಕಿನ ಕಾಮಸಮುದ್ರ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಶಾಲೆಗೆ ಸಂಸ್ಥೆಯಿಂದ ನೂತನ ಕಟ್ಟಡವನ್ನು ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಿ ಮಾತನಾಡಿ, ಓಸಾಟ್ ಸಂಸ್ಥೆಯ ಉದ್ದೇಶ ಗ್ರಾಮೀಣ ಭಾಗದಲ್ಲಿ ಮಕ್ಕಳಿಗೆ ಸುರಕ್ಷಿತ ಹಾಗೂ ಸ್ವಚ್ಛವಾದ ಕಲಿಕಾ ವಾತಾವರಣ ಒದಗಿಸುವುದು. ಶಿಕ್ಷಣದಲ್ಲಿ ನಗರ- ಗ್ರಾಮ ಅಂತರವನ್ನು ಕಡಿಮೆ ಮಾಡುವುದು. ಇದಕ್ಕಾಗಿ ತರಗತಿಯ ಕೊಠಡಿಗಳು, ಶೌಚಾಲಯಗಳು ಮತ್ತು ಅಡುಗೆ ಮನೆಯನ್ನು ನಿರ್ಮಿಸಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ, ಆದ್ದರಿಂದಾಗಿ ಸಾಮಾಜಿಕ ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಓಸಾಟ್ ಸಂಸ್ಥೆಯು ಕಾಮಸಮುದ್ರ ಸರ್ಕಾರಿ ಮಾದರಿ ಕನ್ನಡ ಶಾಲೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು 2. 17 ಕೋಟಿ ರುಪಾಯಿಗಳ ಅನುದಾನ ಬಿಡುಗಡೆ ಮಾಡಿದ್ದು, ಆಧುನಿಕ ಮಾದರಿಯಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಿಸಿ ಪೀಠೋಪಕರಣಗಳ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಆದಿ ನಾರಾಯಣ ಕುಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಂಗನಾಥಾಚಾರಿ, ಪಿಡಿಒ ವಾಣಿ, ಸೀತಾರಾಮಪ್ಪ, ಟಿ ಕೃಷ್ಣಪ್ಪ, ಎಸ್ ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಜಿ.ಎಂ. ಶ್ರೀನಿವಾಸ್, ಬಿಇಒ ಶಶಿಕಲಾ, ನೌಕರರ ಸಂಘ ಅಧ್ಯಕ್ಷ ರವಿ, ಆರ್. ಸಿ. ನಾರಾಯಣಸ್ವಾಮಿ, ಸಿಆರ್ ಸಿ ವೆಂಕಟಸ್ವಾಮಿ ಹಾಗೂ ಮುಖ್ಯೋಪಾಧ್ಯಾಯರಾದ ಕೆ.ಜಿ. ಶ್ರೀನಿವಾಸ್ ಇದ್ದರು.