ಮೋದಿ ವರ್ಸಸ್‌ ರಾಜ್ಯದಲ್ಲಿ ಪಂಚ ಸಿದ್ದು ಗ್ಯಾರಂಟಿ ಜಾರಿ!

| Published : Apr 22 2024, 02:03 AM IST

ಸಾರಾಂಶ

ಮೈಸೂರು ರಾಜಮಹಾರಾಜರು ಆಳಿದ ಸಾಂಸ್ಕೃತಿಕ ರಾಜಧಾನಿಯಾದರೆ ಕೊಡಗು ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿ. ಚಾಮರಾಜನಗರ ಸಾಂಸ್ಕೃತಿಕ ಸಂಪತ್ತು ಅದರಲ್ಲೂ ಜಾನಪದ ವೈಭವಕ್ಕೆ ಹೆಸರುವಾಸಿ. ಮೂರು ಜಿಲ್ಲೆಗಳು ಕೂಡ ಪ್ರವಾಸೋದ್ಯಮಕ್ಕೆ ಪ್ರಸಿದ್ಧಿ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ವರ್ಸಸ್‌ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಪಂಚ ಗ್ಯಾರಂಟಿ ಜಾರಿ...!

-ಇದು ಮೈಸೂರು- ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗುತ್ತಿರುವ ವಿಷಯಗಳು.

ಮೈಸೂರು ಮಲ್ಲಿಗೆ ನಗರಿಯಾದರೆ, ಕೊಡಗು ಮಂಜಿನ ನಗರಿ, ಚಾಮರಾಜನಗರ ರೇಷ್ಮೆ ನಾಡು. ಮೈಸೂರಿನಲ್ಲಿ ತಂಬಾಕು, ಹತ್ತಿ, ಕೊಡಗಿನಲ್ಲಿ ಕಾಫಿ ಮತ್ತು ಕಿತ್ತಳೆ. ಚಾಮರಾಜನಗರದಲ್ಲಿ ರೇಷ್ಮೆ, ಶುಂಠಿ, ಅರಿಶಿನ ಪ್ರಮುಖ ವಾಣಿಜ್ಯ ಬೆಳೆಗಳು. ಕಾವೇರಿ, ಕಪಿಲಾ, ಲಕ್ಷ್ಮಣತೀರ್ಥ, ಸುವರ್ಣಾವತಿ. ಚಿಕ್ಕಹೊಳೆ ಪ್ರಮುಖ ನದಿಗಳು.

ಮೈಸೂರು ರಾಜಮಹಾರಾಜರು ಆಳಿದ ಸಾಂಸ್ಕೃತಿಕ ರಾಜಧಾನಿಯಾದರೆ ಕೊಡಗು ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿ. ಚಾಮರಾಜನಗರ ಸಾಂಸ್ಕೃತಿಕ ಸಂಪತ್ತು ಅದರಲ್ಲೂ ಜಾನಪದ ವೈಭವಕ್ಕೆ ಹೆಸರುವಾಸಿ. ಮೂರು ಜಿಲ್ಲೆಗಳು ಕೂಡ ಪ್ರವಾಸೋದ್ಯಮಕ್ಕೆ ಪ್ರಸಿದ್ಧಿ. ಬಂಡೀಪುರ ಅಭಯಾರಣ್ಯವು ಮೈಸೂರು- ಚಾಮರಾಜನಗರ, ನಾಗರಹೊಳೆ ಅಭಯಾರಣ್ಯವು ಮೈಸೂರು- ಕೊಡಗು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಇಡೀ ದೇಶದಲ್ಲಿ ಹೆಚ್ಚು ಆನೆಗಳು, ಹುಲಿಗಳು ಇರುವ ಅಭಯಾರಣ್ಯಗಳಿವು.

ರಾಜ್ಯದಲ್ಲಿ ಯಾವುದೇ ಜಿಲ್ಲೆಗಳಲ್ಲಿ ಪ್ರವಾಸಿಗರಿಗೆ ''''''''ಬರ'''''''' ಬರಬಹುದು. ಆದರೆ ವಾರಾಂತ್ಯದಲ್ಲಿ ಮೈಸೂರು ಹಾಗೂ ಕೊಡಗಿನಲ್ಲಿ ಕಾಲಿಡಲು ಸ್ಥಳವಿರುವುದಿಲ್ಲ. ಮೈಸೂರಿನಲ್ಲಿ ಹೋಟೆಲ್‌ಗಳು, ವಸತಿಗೃಹಗಳು ಲಾಭ ಮಾಡಿಕೊಂಡರೆ, ಕೊಡಗಿನಲ್ಲಿ ಹೋಟೆಲ್‌ಗಳ ಜೊತೆಗೆ ಹೋಮ್‌ ಸ್ಟೇಗಳಿವೆ.

ಸುತ್ತಮುತ್ತ ಬಂಡೀಪುರ, ನಾಗರಹೊಳೆ, ಮಲೈ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಕೆ. ಗುಡಿ, ಕಾವೇರಿ ವನ್ಯಧಾಮ ಇರುವುದರಿಂದ ಮಾನವ- ವನ್ಯಜೀವಿ ಸಂಘರ್ಷ ಹೆಚ್ಚು. ಆಗಾಗ್ಗೆ ಆನೆ, ಹುಲಿಗಳ ದಾಳಿಗೆ ಮನುಷ್ಯರು ಬಲಿಯಾಗುತ್ತಿದ್ದಾರೆ. ಇದರ ಜೊತೆಗೆ ಇತರೆ ಪ್ರಾಣಿಗಳಿಂದಲೂ ಜನ- ಜಾನುವಾರು- ಬೆಳೆಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಯಾವುದೇ ಕ್ರಮವಿಲ್ಲ. ಕಾಡಂಚಿನಲ್ಲಿ ರೈಲ್ವೆ ಕಂಬಿಗಳನ್ನು ಬೆಲೆ ಹಾಕಿ ಪ್ರಾಣಿಗಳನ್ನು ನಿಯಂತ್ರಿಸುವ ಯತ್ನ ನಡೆದಿದೆ.

ಮೈಸೂರು, ಕೊಡಗಿಗೆ ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಅವರು ಎರಡು- ಮೂರು ದಿನಗಳು ಉಳಿಯುತ್ತಿಲ್ಲ. ಇದಕ್ಕೆ ಬೇಕಾದ ವ್ಯವಸ್ಥೆ ಆಗಿಲ್ಲ. ಈ ದೃಷ್ಟಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕು. ಕೊಡಗಿನಲ್ಲಿ ಪ್ರಕೃತಿ ವಿಕೋಪ ನಿರ್ವಹಣೆಗೆ ಸರಿಯಾದ ಯೋಜನೆ ರೂಪಿಸಿಲ್ಲ. ಮೈಸೂರಿನಲ್ಲಿ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್‌ ಕಟ್ಟಡ ಸೇರಿದಂತೆ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಕೂಡ ಸರಿ ಇಲ್ಲ. ಮೈಸೂರು- ಕುಶಾಲನಗರ ರೈಲು ಮಾರ್ಗ ಕಾರ್ಯಗತವಾಗಬೇಕಾಗಿದೆ. ಯಾವುದೇ ಸೌಕರ್ಯವಿಲ್ಲದೇ ನಾಗರಹೊಳೆಯಿಂದ ಹೊರಗೆ ಹಾಕಲ್ಪಟ್ಟ 3,418 ಆದಿವಾಸಿಗಳ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕಾಗಿದೆ. ಅರಣ್ಯ ಹಕ್ಕು ಕಾಯ್ದೆಯ ಸಮರ್ಪಕ ಅನುಷ್ಠಾನ ಆಗಬೇಕು.

ಕೇರಳ ಹಾಗೂ ತಮಿಳುನಾಡು ಜೊತೆ ಗಡಿ ಹಂಚಿಕೊಂಡಿರುವ ದಕ್ಷಿಣದ ತುಟ್ಟತುದಿ ಜಿಲ್ಲೆಯಾಗಿರುವ ಚಾಮರಾಜನಗರ ಹಿಂದುಳಿದ ಜಿಲ್ಲೆಯ ಹಣೆಪಟ್ಟಿಯಿಂದ ಹೊರಬರಬೇಕಾಗಿದೆ. ಅಲ್ಲಿ ಕೈಗಾರಿಕೆಗಳನ್ನು ಆರಂಭಿಸುವ ಮೂಲಕ ಉದ್ಯೋಗ ಸೃಜಿಸುವ ಕೆಲಸ ಆಗಬೇಕಾಗಿದೆ.

ಆದರೆ ಇಂತಹ ಯಾವುದೇ ವಿಚಾರ ಪ್ರಸ್ತಾಪವಾಗುತ್ತಿಲ್ಲ. ಬದಲಿಗೆ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಬಿಜೆಪಿ- ಜೆಡಿಎಸ್‌ ಮೈತ್ರಿಕೂಟ ಹೇಳುತ್ತಿದ್ದರೆ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದ್ದೇವೆ. ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ- ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಜೊತೆಗೆ ವ್ಯಕ್ತಿಗತ ಟೀಕೆ- ಟಿಪ್ಪಣಿಗಳು ಹೆಚ್ಚು ಕೇಳಿ ಬಂದವು.

ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಎಚ್‌.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್‌ ವಿರುದ್ಧ, ಟೀಕೆ ಮಾಡಿದರು. ಅದರಲ್ಲೂ ರಾಜ್ಯ ನಾಯತರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಹರಿಹಾಯ್ದರು.

ಅದೇ ರೀತಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು ಬಿಜೆಪಿ- ಜೆಡಿಎಸ್‌ ನಾಯಕರ ವಿರುದ್ಧ ವಾಕ್ಸಮರ ನಡೆಸಿದರು. ಕೇಂದ್ರ ಸರ್ಕಾರವು ರಾಜ್ಯಕ್ಕೆ ತನ್ನ ಪಾಲಿನ ಅನುದಾ ನೀಡದೇ ಅನ್ಯಾಯ ಮಾಡಿದೆ ಎಂಬುದೇ ಪ್ರಮುಖ ಆರೋಪವಾಗಿತ್ತು. ಕುಮಾರಸ್ವಾಮಿ ಅವರು ಮೇಕೆದಾಟು ಸೇರಿದಂತೆ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.