ಇಂದ್ರಾಳಿಯ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಉಡುಪಿ ತಾಲೂಕು ಅನುಷ್ಠಾನ ಸಮಿತಿ ವತಿಯಿಂದ “ನಮ್ಮ ನಡೆ ವಾರ್ಡ್ ಕಡೆಗೆ” ಕಾರ್ಯಕ್ರಮ ಸಂಪನ್ನಗೊಂಡಿತು.
ಉಡುಪಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮೂಲಕ ಯೋಜನೆಯ ಲಾಭವನ್ನು ಸಮಾಜದ ತಳಮಟ್ಟದ ಕಟ್ಟಕಡೆಯ ಅರ್ಹ ವ್ಯಕ್ತಿಗೂ ತಲುಪಿಸಬೇಕೆಂಬ ನಿಟ್ಟಿನಲ್ಲಿ ಉಡುಪಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ “ನಮ್ಮ ನಡೆ ವಾರ್ಡ್ ಕಡೆಗೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು.
ಅವರು ಇಂದ್ರಾಳಿಯ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಉಡುಪಿ ತಾಲೂಕು ಅನುಷ್ಠಾನ ಸಮಿತಿ ವತಿಯಿಂದ ಆಯೋಜಿಸಲಾದ “ನಮ್ಮ ನಡೆ ವಾರ್ಡ್ ಕಡೆಗೆ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.“ನಮ್ಮ ನಡಿಗೆ ವಾರ್ಡ್ ಕಡೆಗೆ” ಕಾರ್ಯಕ್ರಮದ ಮೂಲಕ ವಾರ್ಡ್ ಮಟ್ಟದಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದ ಅವರು, ತಳಮಟ್ಟದಲ್ಲಿ ಯೋಜನೆಯ ಲಾಭವನ್ನು ಪ್ರತಿಯೊಂದು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದರು.ವಾರ್ಡ್ ಮಟ್ಟದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಗಳಿಗೆ ಭೇಟಿ ನೀಡಿಸಿ ಗ್ಯಾರಂಟಿ ಯೋಜನೆಗಳಿಂದ ವಂಚಿತರಾದ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಯೋಜನೆಗಳ ಅರಿವು ಮೂಡಿಸಿ ಅವರನ್ನು ಫಲಾನುಭವಿಗಳನ್ನಾಗಿ ಮಾಡಲಾಗುವುದು ಎಂದ ಅವರು, ಈಗಾಗಲೇ ಯೋಜನೆಯ ಫಲಾನುಭವಿಗಳು ಸೌಲಭ್ಯ ಪಡೆಯಲು ಎದುರಾಗುತ್ತಿರುವ ಸಮಸ್ಯೆಗಳನ್ನು ಪಟ್ಟಿಮಾಡಿ, ಸಂಬಂಧಪಟ್ಟ ಅಧಿಕಾರಿಗಳ ಮೂಲಕ ನ್ಯೂನ್ಯತೆಗಳನ್ನು ಪರಿಹರಿಸಿ, ಪಂಚ ಗ್ಯಾರಂಟಿ ಯೋಜನೆಗಳಿಂದ ಯಾವುದೇ ಒಬ್ಬ ಅರ್ಹ ಫಲಾನುಭವಿ ವಂಚಿತರಾಗದಂತೆ ನೋಡಿಕೊಳ್ಳುವುದೇ ಇದರ ಗುರಿಯಾಗಿದೆ ಎಂದರು.
ಸಮಿತಿಯ ಸದಸ್ಯರಾದ ಡಾ. ಸಂತೋಷ್ ಕುಮಾರ್ ಬೈರಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಅನುಷ್ಠಾನ ಸಮಿತಿಯ ಸದಸ್ಯರಾದ ಶಬರೀಷ್ ಸುವರ್ಣ, ಈಶ್ವರನಗರ ವಾರ್ಡಿನ ಪ್ರೇಮಲತಾ, ಅರ್ಚನಾ ದೇವಾಡಿಗ, ಸುಧಾಕರ್ ಪೂಜಾರಿ, ಪಂಚ ಗ್ಯಾರಂಟಿ ಯೋಜನೆಯ ಅಧಿಕಾರಿಗಳು, ಆಶಾ- ಅಂಗನವಾಡಿ ಕಾರ್ಯಕರ್ತರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.