ಸಾರಾಂಶ
ಭಾರತದ ಸಂವಿಧಾನ ವಿಶ್ವಕ್ಕೇ ಮಾದರಿಯಾಗಿದ್ದು, ಮಾತೃ ಸ್ಥಾನದಲ್ಲಿದೆ ಎಂದು ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಸುಧಾಕರ್ ಹೊಸಳ್ಳಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಭಾರತದ ಸಂವಿಧಾನ ವಿಶ್ವಕ್ಕೇ ಮಾದರಿಯಾಗಿದ್ದು, ಮಾತೃ ಸ್ಥಾನದಲ್ಲಿದೆ ಎಂದು ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಸುಧಾಕರ್ ಹೊಸಳ್ಳಿ ಅಭಿಪ್ರಾಯಪಟ್ಟರು.ಪಟ್ಟಣದಲ್ಲಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಜಾಗೃತಿ ರಥಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಸಂವಿಧಾನ ಇರುವುದರಿಂದಲೇ ಎಲ್ಲರಿಗೂ ಮೂಲಭೂತವಾದ ಹಕ್ಕುಗಳು ದೊರೆತಿವೆ. ಸಂವಿಧಾನವನ್ನು ಅರಿತವರು ಮಾತ್ರ ಪರಿಪೂರ್ಣ ಜೀವನ ನಡೆಸಲು ಸಾಧ್ಯ. ಇದು ಪ್ರತಿಯೊಬ್ಬರ ಜೀವರಕ್ಷಕ ಇದ್ದತೆ. ಸಂವಿಧಾನವನ್ನು ತೆಗೆದು ಹಾಕಲು ಯಾರಿಗೂ ಸಾಧ್ಯವಿಲ್ಲ. ತಿದ್ದುಪಡಿ ಮಾಡುವುದೂ ಸಹ ಅಸಾಧ್ಯವಾದ ಮಾತೇ ಆಗಿದೆ. ಸಂವಿಧಾನದ ಪರಾಮರ್ಶೆ ಮಾಡಲು ಸುಪ್ರೀಂಕೋರ್ಟಿಗೂ ಸಹ ಸಾಧ್ಯವಿಲ್ಲ. ಭಾರತದ ಐಕ್ಯತೆಗಾಗಿ ಸಂವಿಧಾನದ ರಚಿಸಿರುವ ಡಾ.ಅಂಬೇಡ್ಕರ್ ರ ಶ್ರಮವನ್ನು ಸರ್ವರೂ ಸ್ಮರಿಸಬೇಕು ಎಂದು ಸುಧಾಕರ್ ಹೊಸಳ್ಳಿ ಹೇಳಿದರು.ಸಂವಿಧಾನವೆಂಬುದು ದೇಶದ ಹೃದಯವಿದ್ದಂತೆ. ಭಾರತದ ಸಂವಿಧಾನವು ವಿಶ್ವದ ಇತರೆ ದೇಶಗಳ ಸಂವಿಧಾನಕ್ಕೆ ಮಾದರಿಯಾಗಿದೆ. ಯಾವುದೇ ದೇಶದ ಸ್ಥಿತಿಗತಿಯನ್ನು ಅರಿಯಲು ಮೊದಲು ಆ ದೇಶದ ಸಂವಿಧಾನದ ಅನುಷ್ಠಾನ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಂವಿಧಾನವೇ ಭದ್ರ ತಳಹದಿಯಾಗಿದೆ ಎಂದರು.
ದೇಶವು ಪ್ರಕೃತಿದತ್ತವಾಗಿಯೇ ಸಂವಿಧಾನದ ಅಖಂಡತೆಯನ್ನು ಸಾಧಿಸಿದೆ. ಸಾಮಾನ್ಯ ಜನರಲ್ಲಿ ಸಂವಿಧಾನದ ಅರಿವು ಮೂಡಿಸುವುದರಿಂದ ತಮಗೆ ಸಿಕ್ಕಿರುವ ಮೂಲಭೂತ ಹಕ್ಕುಗಳ ಅರಿವುಂಟಾಗಲಿದೆ. ಇಂದು ಪ್ರತಿಯೊಬ್ಬರಿಗೂ ಸಿಕ್ಕಿರುವ ಮೂಲಭೂತ ಹಕ್ಕುಗಳು ಹಾಗೂ ಸ್ವಾತಂತ್ರ್ಯ ಸುಖಾ ಸುಮ್ಮನೆ ಸಿಕ್ಕಿಲ್ಲ. ಸಂವಿಧಾನ ರಚನೆ ವೇಳೆ ಡಾ.ಅಂಬೇಡ್ಕರ್ ರವರೊಂದಿಗೆ ಇದ್ದ ಸಲಹಾ ಸಮಿತಿಯ ಸದಸ್ಯರ ವೈಯಕ್ತಿಕ ಬದುಕಿನ ತ್ಯಾಗದಿಂದಾಗಿ ಇಂದು ಎಲ್ಲರಿಗೂ ನ್ಯಾಯ ಸಿಕ್ಕಿದೆ ಎಂದು ಸುಧಾಕರ್ ಹೊಸಳ್ಳಿ ಹೇಳಿದರು.ಸಮಾರಂಭಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಿಂದ ಸಂವಿಧಾನ ಜಾಗೃತಿ ಜಾಥಾ ರಥವನ್ನು ಜಾನಪದ ಕಲಾ ಮೇಳಗಳು, ಸ್ಥಬ್ದ ಚಿತ್ರಗಳ ಮೆರವಣಿಯೊಂದಿಗೆ ಬರಮಾಡಿಕೊಳ್ಳಲಾಯಿತು. ದಲಿತ ಮುಖಂಡರು, ಸರ್ಕಾರಿ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರು, ಆಶಾ ಕಾರ್ಯಕರ್ತೆಯರು ಸೇರಿ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಶಾಸಕ ಎಂ.ಟಿ.ಕೃಷ್ಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಸಮಾಜ ಕಲ್ಯಾಣ ಇಲಾಖಾ ಸಹಾಯಕ ನಿರ್ದೇಶಕಿ ತ್ರಿವೇಣಿ, ಬಿಇಒ ಸೋಮಶೇಖರ್, ಸಿಡಿಪಿಒ ಗೋಪಾಲಪ್ಪ, ಇಒ ಶಿವರಾಜಯ್ಯ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ದಲಿತ ಮುಖಂಡರಾದ ವಿ.ಟಿ.ವೆಂಕಟರಾಮಯ್ಯ, ಬಾಣಸಂದ್ರ ಕೃಷ್ಣಸ್ವಾಮಿ, ದಂಡಿನಶಿವರ ಕುಮಾರ್, ಡಾ.ಚಂದ್ರಯ್ಯ, ಪಟ್ಟಣ ಪಂಚಾಯ್ತಿ ಸದಸ್ಯ ಚಿದಾನಂದ್, ಯಜಮಾನ್ ಮಹೇಶ್, ಬಡಾವಣೆ ಶಿವರಾಜ್, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಾರುತಿ, ಸಿಐಟಿಯು ಸತೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ. ರಾಜು ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.