ಸಾರಾಂಶ
ಕೂಡ್ಲಿಗಿ: ತಂದೆ-ತಾಯಿ, ಗುರು, ಸೂರ್ಯ, ಚಂದ್ರ, ಭೂಮಿ, ನೀರು, ಗೋವು, ಅಗ್ನಿಯನ್ನು ದೇವರೆಂದು ಪೂಜಿಸುವ ಭಾರತದ ಅಧ್ಯಾತ್ಮ, ಸಂಸ್ಕಾರ, ಸಂಸ್ಕೃತಿಯನ್ನು ಜಗತ್ತೇ ಕೊಂಡಾಡುತ್ತಿದೆ ಎಂದು ಉಜ್ಜಯನಿ ಸದ್ಧರ್ಮ ಪೀಠದ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ತಿಳಿಸಿದರು.ಅವರು ತಾಲೂಕಿನ ಹೊಸಹಳ್ಳಿಯ ಕಲ್ಲೇಶ್ವರ ಸ್ವಾಮಿ ನೂತನ ದೇವಸ್ಥಾನ ಉದ್ಘಾಟನೆ, ಗೋಪುರ ಕಳಸಾರೋಹಣ ಕಾರ್ಯಕ್ರಮದಲ್ಲಿ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜಾತಿ, ಮತ, ಪಂಥವೆಂಬ ಭೇದ ಭಾವವಿಲ್ಲದೇ ಎಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳಬೇಕಿದೆ. ಸರ್ವ ಧರ್ಮದವರು ಭಾರತೀಯರೆಂಬ ಅಭಿಮಾನ ಹೊಂದಿರಲಿ ಎಂದರು.ಉಜ್ಜಯನಿ ಪೀಠದ ಹಿಂದಿನ ಸಿದ್ಧೇಶ್ವರ ಶಿವಾಚಾರ್ಯರಿಗೆ ಅತ್ಯಂತ ಪ್ರಿಯವಾದ ಊರು ಹೊಸಹಳ್ಳಿಯಾಗಿತ್ತು. ಇಂಥ ನೆಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಿರಲಿ ಎಂದು ಆಶಿಸಿದರು.
ನಮ್ಮ ಪೂರ್ವಜರು ಮಾಡಿದ ಕಾರ್ಯ ಮೂಢನಂಬಿಕೆಯಲ್ಲ. ಯಾವುದೇ ಮಾಡಿದರೂ ಅದಕ್ಕೆ ವೈಜ್ಞಾನಿಕ ಕಾರಣಗಳಿವೆ. ಗುಡಿ ಸಂಸ್ಕೃತಿಯನ್ನು ಹಿರಿಯರು ಕರುಣಿಸಿದ್ದಾರೆ. ಸನಾತನ ಧರ್ಮವನ್ನು ಯಾರೂ ಟೀಕಿಸಬಾರದು. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಬೇಕು ಎಂದು ತಿಳಿಸಿದರು.ಕೊಟ್ಟೂರು ಡೋಣೂರು ಚಾನುಕೋಟಿ ಮಠದ ಪೀಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯರು, ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪಟ್ಟಾಧ್ಯಕ್ಷ ಪ್ರಶಾಂತಸಾಗರ ಶಿವಾಚಾರ್ಯರು, ಕಾನಾಮಡುಗು ದಾಸೋಹ ಮಠದ ಧರ್ಮಾಧಿಕಾರಿ ಐಮಡಿ ಶರಣಾರ್ಯರು ಮಾತನಾಡಿದರು. ಮಾಜಿ ಸಚಿವ ಬಿ.ಶ್ರೀರಾಮುಲು ಸೇರಿದಂತೆ ದೇವಸ್ಥಾನ ಕಮಿಟಿಯವರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಅಡ್ಡಪಲ್ಲಕ್ಕಿ ಉತ್ಸವ:ಉಜ್ಜಯನಿ ಸದ್ಧರ್ಮ ಪೀಠದ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿದ ಉತ್ಸವಕ್ಕೆ ಪೂರ್ಣಕುಂಭ ಹೊತ್ತ ಮಹಿಳೆಯರು, ನಂದಿಧ್ವಜ, ಸಮಾಳ, ಹಲಗೆ ಸೇರಿ ವಿವಿಧ ಜಾನಪದ ವಾದ್ಯಗಳು ಮೆರಗು ಹೆಚ್ಚಿಸಿದವು. ನಂತರ ನಡೆದ ದೇವಸ್ಥಾನದ ಗೋಪುರ ಕಳಸಾರೋಹಣವನ್ನು ಉಜ್ಜಯನಿ ಜಗದ್ಗುರು ನೇತೃತ್ವದಲ್ಲಿ ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಪ್ರಶಾಂತಸಾಗರ ಸ್ವಾಮೀಜಿ ನೆರವೇರಿಸಿದರು. ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಪುರೋಹಿತರು ಹೋಮ, ಹವನ, ಪೂಜಾ ಕಾರ್ಯಗಳನ್ನು ನೆರವೇರಿಸಿದರು.