ಆಧುನಿಕತೆ ಹೊಡೆತಕ್ಕೆ ನಮ್ಮ ಜಾನಪದ ಸಂಸ್ಕೃತಿ ನಾಶ: ಜಯಂತಿ ಕಳವಳ

| Published : Mar 20 2025, 01:15 AM IST

ಸಾರಾಂಶ

ನರಸಿಂಹರಾಜಪುರ, ಆಧುನಿಕ ಭರಾಟೆಯಲ್ಲಿ ನಮ್ಮ ನಾಡಿನ ಜಾನಪದ ಸಂಸ್ಕೃತಿ ನಾಶವಾಗುತ್ತಿದೆ ಎಂದು ತಾಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷೆ ಜಯಂತಿ ಕಳವಳ ವ್ಯಕ್ತಪಡಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವ - 2025 ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಆಧುನಿಕ ಭರಾಟೆಯಲ್ಲಿ ನಮ್ಮ ನಾಡಿನ ಜಾನಪದ ಸಂಸ್ಕೃತಿ ನಾಶವಾಗುತ್ತಿದೆ ಎಂದು ತಾಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷೆ ಜಯಂತಿ ಕಳವಳ ವ್ಯಕ್ತಪಡಿಸಿದರು.

ಬುಧವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಕನ್ನಡ ವಿಭಾಗ, ಸಾಂಸ್ಕೃತಿಕ ವೇದಿಕೆ ಹಾಗೂ ಐ.ಕ್ಯೂ.ಎ.ಸಿ ಸಂಯುಕ್ತ ಆಶ್ರಯದಲ್ಲಿ ನಡೆದ ಜಾನಪದ ಉತ್ಸವ-2025 ನಮ್ಮ ಸಂಸ್ಕೃತಿ, ನಮ್ಮ ಹೆಮ್ಮೆ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು. ಜಾನಪದ ಸಂಸ್ಕೃತಿ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಇದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂದ್ರ , ಉತ್ತರ ಭಾರತದಲ್ಲಿ ವಿಭಿನ್ನವಾಗಿದೆ. ನಮ್ಮ ಪೂರ್ವಜರು ಬಾಯಿಂದ ಬಾಯಿಗೆ ಮಾತ ನಾಡುತ್ತಿರುವುದೇ ಮುಂದೆ ಜಾನಪದವಾಯಿತು ಎಂದರು.

ನಮ್ಮ ಸಂಪ್ರದಾಯ, ಆಚರಣೆಗಳು ವಿಭಿನ್ನವಾಗಿದೆ. ನಮ್ಮ ದೇಶದ ಹಬ್ಬಗಳು ಸಹ ವಿಶೇಷವಾಗಿದೆ. ಪ್ರತಿ ಹಬ್ಬಕ್ಕೂ ವೈಜ್ಞಾನಿಕ ಕಾರಣಗಳಿವೆ. ಯುಗಾದಿ ಹಬ್ಬದಲ್ಲಿ ಬೇವು, ಬೆಲ್ಲ ತಿಂದು ಜೀವನದಲ್ಲಿ ಕಷ್ಟ ಹಾಗೂ ಸುಖ ಸಮಾನವಾಗಿ ಸ್ವೀಕರಿ ಸುತ್ತೇವೆ ಎಂಬುದರ ಸಂಕೇತವಾಗಿದೆ. ಶಿವರಾತ್ರಿ ಹಬ್ಬದಂದು ಉಪವಾಸ ಮಾಡಿ ರಾತ್ರಿ ಜಾಗರಣೆ ಮಾಡುತ್ತೇವೆ. ನಾಗರ ಪಂಚಮಿ ಹಬ್ಬದಲ್ಲಿ ಅಣ್ಣ, ತಂಗಿಯರು ಪರಸ್ಪರ ಶುಭ ಹಾರೈಸುತ್ತಾರೆ. ಹಿಂದೆ ಮಕ್ಕಳು ಜೋಕಾಲಿ ಆಟ ಆಡುತ್ತಿ ದ್ದರು. ಗೋಕಲಾಷ್ಟಮಿ ಹಬ್ಬದಲ್ಲಿ ಕೃಷ್ಣನಿಗೆ ವಿಶೇಷ ಪೂಜೆ, ಮೊಸರು ಕುಡಿಗೆ ಒಡೆಯುವ ಸಂಪ್ರದಾಯವಿದೆ. ಗೌರಿ, ಗಣೇಶ ಹಬ್ಬಕ್ಕೂ ವಿಶೇಷ ಮಹತ್ವವಿದೆ. ಹೆಣ್ಣು ಮಕ್ಕಳಿಗೆ ಬಾಗೀನ ನೀಡುವ ಸಂಪ್ರದಾಯವಿದೆ.

ದೀಪಾವಳಿ ಹಬ್ಬದಲ್ಲಿ ವರ್ಷವಿಡೀ ಹಾಲು ನೀಡುವ ಗೋವಿಗೆ, ಜಮೀನು ಕೆಲಸ ಮಾಡುವ ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸುತ್ತೇವೆ.ದೀಪಾವಳಿಯನ್ನು ದೀಪದ ಹಬ್ಬ ಎಂದು ಕರೆಯುತ್ತೇವೆ. ಗ್ರಾಮೀಣ ಭಾಗದಲ್ಲಿ ಅಂಟಿಕೆ-ಪಿಂಟಿಕೆಯಲ್ಲಿ ಸಂಪ್ರ ದಾಯದ ಹಾಡು ಹಾಡುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹುಲಿ ವೇಷ ಹಾಕುತ್ತಾರೆ ಎಂದರು.

ನಮ್ಮ ದೇಶದ ಗ್ರಾಮೀಣ ಭಾಗದ ಆಟಗಳ ಸೊಬಗು ಸಹ ಮಕ್ಕಳಿಗೆ ಖುಷಿ ನೀಡುತ್ತಿತ್ತು. ಕಣ್ಣು ಮುಚ್ಚಾಲೆ ಆಟ, ಮರ ಕೋತಿ, ಲಗೋರಿ, ಕುಂಟೆ ಬಿಲ್ಲೆ, ಮಲ್ಲ ಕಂಬ ಏರುವುದು, ಚೆನ್ನಮಣೆ ಆಟ ಇತ್ತು. ಜಾನಪದ ಆಟಗಳಲ್ಲಿ ಸಿಗುವ ಖುಷಿ ಬೇರೆ ಆಟಗಳಲ್ಲಿ ಸಿಗುವುದಿಲ್ಲ. ಆದರೆ, ಇಂದಿನ ಮಕ್ಕಳು ಮೊಬೈಲ್ ಹಿಡಿದು ಗ್ರಾಮೀಣ ಆಟದಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ನಮ್ಮ ಮಲೆನಾಡು ಭಾಗದಲ್ಲಿ ಆಹಾರ ಪದ್ದತಿ ವಿಶೇಷವಾಗಿದೆ. ಎಳೆ ಬಿದಿರಿನಿಂದ ಮಾಡುವ ಕಳಲೆ ಪಲ್ಯ, ಕಳಲೆ ಉಪ್ಪಿನ ಕಾಯಿ ಸ್ವಾದ, ಕೆಸವಿನ ಎಲೆಯಿಂದ ಮಾಡುವ ಪತ್ರೊಡೆ, ಒತ್ತು ಶಾವಿಗೆ, ಹಲಸಿನ ಹಣ್ಣಿನ ಕಡಬು, ಹಲಸಿನ ತೊಳೆ ನೆನಸಿಟ್ಟುಕೊಂಡು ಮಾಡುವ ಬಗೆ ಬಗೆಯ ಆಹಾರಗಳು ವಿಶೇಷವಾಗಿದೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಬಿ.ಟಿ.ರೂಪ ಮಾತನಾಡಿ, ನಮ್ಮ ನಾಡಿನಲ್ಲಿ ಪ್ರತಿ 50 ಕಿ.ಮೀ.ದೂರದ ಅಂತರದಲ್ಲಿ ಒಂದೊಂದು ಸಂಪ್ರದಾಯವಿದೆ. ದೇಶದಲ್ಲಿ ನೂರಾರು ಭಾಷೆ ಇದೆ. ಒಂದೊಂದು ಸಂಸ್ಕೃತಿ ಇದೆ. ಮಲೆನಾಡಿನ ಸಂಸ್ಕೃತಿ ಅಪರೂಪವಾದ ಸಂಸ್ಕೃತಿ.ಮಲೆನಾಡಿನಲ್ಲಿ ಹಬ್ಬಗಳ ಆಚರಣೆ ಸಹ ವಿಭಿನ್ನವಾಗಿದೆ. ಇಂದಿನ ಮಕ್ಕಳು ಗ್ರಾಮೀಣ ಸೊಗಡಿನ ಆಟಗಳಿಂದ ವಂಚಿತರಾಗಿದ್ದಾರೆ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಮಾತನಾಡಿ, ಯುವಜನರು ಪಾಶ್ಚಮಾತ್ಯ ಸಂಸ್ಕೃತಿ ಅನುಕರಣೆ ಮಾಡುತ್ತಿರುವುದರಿಂದ ನಮ್ಮ ಸಂಸ್ಕೃತಿ ನಾಶವಾಗುವ ಹಂತ ತಲುಪಿದೆ. ಪ್ರಸ್ತುತ ನಮ್ಮ ಜೀವನ ಶೈಲಿ ವಿದೇಶಿ ಶೈಲಿಯಾಗಿ ಮಾರ್ಪಾಡಾಗಿದೆ. ನಮ್ಮ ಪೂರ್ವಜನರ ಜಾನಪದ ಶೈಲಿ, ಆರೋಗ್ಯದ ಕ್ರಮದಿಂದ ಆಯುಷ್ಯ ವೃದ್ದಿ ಯಾಗಿತ್ತು. ಪ್ರತಿಯೊಂದು ಹಬ್ಬದ ಆಚರಣೆಯಲ್ಲೂ ವೈಜ್ಞಾನಿಕ ಕಾರಣವಿತ್ತು. ಜಾನಪದದಿಂದ ನಮಗೆ ಮೌಲ್ಯಯುತ ಸಂದೇಶ ಸಿಗುತ್ತಿದೆ. ನಮ್ಮ ದೇಶೀ ಸಾವಯವ ಕೃಷಿ, ಜಾನಪದ ಕಲೆ, ಸಂಪ್ರದಾಯ ಅಳವಡಿಸಿಕೊಳ್ಳು‍‍ವುದರಿಂದ ಜೀವನದ ಮೌಲ್ಯವೂ ಹೆಚ್ಚಾಗಲಿದೆ ಎಂದರು.

ಅತಿಥಿಗಳಾಗಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಜಿ.ಸವಿತ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಜೆ. ಮಂಜುನಾಥ್, ಐ.ಕ್ಯೂ.ಎ.ಸಿ. ಸಂಚಾಲಕ ಆರ್‌.ಕೆ.ಪ್ರಸಾದ್‌ ಇದ್ದರು.

ಜಾನಪದ ಉತ್ಸವ-2025 ರ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷೆ ಜಯಂತಿ ಹಾಗೂ ಕಾಲೇಜು ವಿದ್ಯಾರ್ಥಿನಿಯರು ಜಾನಪದ ಹಾಡುಗಳನ್ನು ಹಾಡಿದರು. ದೇಶೀಯ ಉಡುಗೆ-ತೊಡುಗೆಯ ಪ್ರದರ್ಶನ ಸ್ಪರ್ಧೆ ನಡೆಯಿತು.

ಜಾನಪದ ಉತ್ಸವ-2025 ರ ಅಂಗವಾಗಿ ನಡೆದ ದೇಶೀಯ ಆಟಗಳ ಸ್ಪರ್ಧೆ,ಜಾನಪದ ಗಾಯನ ಸ್ಪರ್ಧೆ, ಹಾಗೂ ಜಾನಪೃ ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.